ಬೆಂಗಳೂರು: ''ಇಡೀ ಜಗತ್ತೇ ಒಪ್ಪಿರುವ ದೇಶದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ವಿರುದ್ಧ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ಆಡಿರುವ ಮಾತು ಆ ಪಕ್ಷದ ಗುಣ ಮತ್ತು ಅವರ ಚಾರಿತ್ರ್ಯದ ಮೇಲೆ ಬೆಳಕು ಚೆಲ್ಲಲಿದೆ'' ಎಂದು ಬಿಜೆಪಿ ವಕ್ತಾರ ಎಂ ಜಿ ಮಹೇಶ್ ತಿರುಗೇಟು ನೀಡಿದ್ದಾರೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ''ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕೆಪಿಸಿಸಿ ವಕ್ತಾರ ವಿ ಎಸ್ ಉಗ್ರಪ್ಪ ನೀಡಿರುವ ಹೇಳಿಕೆಯನ್ನು ಬಿಜೆಪಿ ತೀವ್ರವಾಗಿ ಖಂಡಿಸಲಿದೆ. ಮೋದಿ ವಿರುದ್ಧ ಅವಿಶ್ವಾಸ ನಿರ್ಣಯ ವಿಚಾರದ ಬಗ್ಗೆ ಮಾತನಾಡುತ್ತ ಪ್ರಜಾಪ್ರಭುತ್ವದ ಯಾವುದೇ ಮೌಲ್ಯಗಳಿಗೆ ಬೆಲೆ ಕೊಡದ ಶಬ್ಧಗಳನ್ನು ಅವರು ಉಲ್ಲೇಖ ಮಾಡಿದ್ದಾರೆ. ಇಡೀ ಜಗತ್ತು ಒಪ್ಪಿಕೊಂಡಿರುವ ಒಬ್ಬ ಉತ್ತಮ ನಾಯಕನನ್ನು ಒಬ್ಬ ಪೆಟ್ಟಿ ರಾಜಕಾರಣಿ, ಮೋಸಗಾರ, ಚಿಲ್ಲರೆ ರಾಜಕಾರಣಿ ಈ ರೀತಿ ಪದಪುಂಜಗಳನ್ನ ಉಗ್ರಪ್ಪ ಬಳಸಿದ್ದಾರೆ. ಅವರ ಮಾತು ಆ ಪಕ್ಷದ ಸ್ವಭಾವವನ್ನು ತೋರುತ್ತದೆ'' ಎಂದು ತಿರುಗೇಟು ನೀಡಿದರು.
''ಪ್ರಧಾನಿ ಮೋದಿ ಅವರ ಮೇಲೆ ಕೆಸರು ಎರಚಿದಷ್ಟೂ ಬಿಜೆಪಿ ಮತ್ತಷ್ಟು ಪ್ರಜ್ವಲಿಸಲಿದೆ. ಕಮಲ ಎಲ್ಲಾ ಕಡೆ ಅರಳಲಿದೆ, ಇಂದು ಉಗ್ರಪ್ಪ ನಡೆಸಿದ ಇಡೀ ಪತ್ರಿಕಾಗೋಷ್ಟಿಯಲ್ಲಿ ಅವರು ಉಲ್ಲೇಖ ಮಾಡಿದ ಎಲ್ಲಾ ಅಂಶಗಳು ಸತ್ಯಕ್ಕೆ ದೂರವಾದ ಅಂಶಗಳಾಗಿವೆ. ಯಾವುದೇ ಸಂದರ್ಭದಲ್ಲಿಯೂ ಮೋದಿ 15 ಲಕ್ಷ ಹಣವನ್ನು ಎಲ್ಲರ ಖಾತೆಗೆ ಹಾಕುತ್ತೇನೆ ಎಂದು ಹೇಳಿಲ್ಲ. ಆದರೂ ಪದೇ ಪದೇ 15 ಲಕ್ಷದ ವಿಚಾರ ಪ್ರಸ್ತಾಪ ಮಾಡುತ್ತಿದ್ದಾರೆ. ಜನರಿಂದ ತಿರಸ್ಕೃತಗೊಂಡ ಪುರಾತನ ಪಕ್ಷ ಕರ್ನಾಟಕ ರಾಜ್ಯದ ಜನಾದೇಶದ ನಂತರ ಅತಿರೇಕದ ಉನ್ಮಾದದ ವರ್ತನೆ ಕೂಡ ಪ್ರಜಾಪ್ರಭುತ್ವದಲ್ಲಿ ಶಾಪವಾಗಿ ಪರಿಗಣಿಸಲಿದೆ. ಯಾವೆಲ್ಲಾ ಪ್ರಜಾತಂತ್ರದ ಮೌಲ್ಯಗಳನ್ನು ಅವರೆಲ್ಲ ನಾಯಕರು ಗಾಳಿಗೆ ತೂರಿದ್ದರೋ ಜನ ಅದಕ್ಕೆ ತಕ್ಕ ಉತ್ತರ ಕೊಟ್ಟಿದ್ದಾರೆ. ಇಂದು ಮೋದಿ ಕುರಿತು ಮಾತನಾಡಿರುವ ಅಷ್ಟು ವಿಚಾರವನ್ನು ಬಿಜೆಪಿ ಖಂಡನೆ ಮಾಡುತ್ತಿದೆ'' ಎಂದರು.
''ಕೇಂದ್ರದಲ್ಲಿ ವಿರೋಧ ಪಕ್ಷದ ಪಾತ್ರದಲ್ಲಿ ಕಾರ್ಯನಿರ್ವಹಣೆ ಮಾಡಬೇಕಿರುವ ಕಾಂಗ್ರೆಸ್ ಪ್ರಸ್ತುತ ರಾಜಕಾರಣದಲ್ಲಿ ಯಾವುದೇ ಮೌಲ್ಯ ಉಳಿಸಿಕೊಂಡಿಲ್ಲ ಎನ್ನುವುದನ್ನು ಇಂದಿನ ಉಗ್ರಪ್ಪ ಅವರು ಸುದ್ದಿಗೋಷ್ಟಿ ಮೂಲಕ ಸಾಬೀತುಪಡಿಸಿದ್ದಾರೆ'' ಎಂದು ಹರಿಹಾಯ್ದರು. ''ಮೋದಿ ವಿರುದ್ಧ ಲಘುವಾಗಿ ಮಾತನಾಡಿದ ಉಗ್ರಪ್ಪ ವಿರುದ್ಧ ನಾವು ಕೇಸ್ ಹಾಕಲ್ಲ. ಅದರ ಅಗತ್ಯತೆಯೂ ಇಲ್ಲ. ಉಗ್ರಪ್ಪನವರ ಈ ಅಸಂಬದ್ಧ ಮಾತುಗಳಿಗೆ ನಾವು ಉತ್ತರ ಕೊಡಬೇಕಿಲ್ಲ ಕಾಲವೇ ಅದಕ್ಕೆ ಉತ್ತರ ಕೊಡಲಿದೆ'' ಎಂದು ಕಿಡಿಕಾರಿದರು.
ಇದನ್ನೂ ಓದಿ: ನಮ್ಮ ಸಂವಿಧಾನದ ಮೇಲೆ ಬದ್ಧತೆ ಇದ್ದರೆ, ಪ್ರಧಾನಿ ಮೋದಿ ಸಂಸತ್ಗೆ ಹಾಜರಾಗಬೇಕು: ವಿ ಎಸ್ ಉಗ್ರಪ್ಪ