ಬೆಂಗಳೂರು: ಹೊಟ್ಟೆಪಾಡಿಗಾಗಿ ದಲಿತರು ಬಿಜೆಪಿಗೆ ಹೋಗಿದ್ದಾರೆ ಎನ್ನುವ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆ ವಿರೋಧಿಸಿ ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯ ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಮೌರ್ಯ ವೃತ್ತದಲ್ಲಿ ಎಸ್ಸಿ ಮೋರ್ಚಾ ರಾಜ್ಯ ಅಧ್ಯಕ್ಷ ಛಲವಾದಿ ನಾರಾಯಣಸ್ವಾಮಿ, ಶಾಸಕ ಪಿ. ರಾಜೀವ್ ಸೇರಿದಂತೆ ಬಿಜೆಪಿಯ ನೂರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಸಿದ್ದರಾಮಯ್ಯ ವಿರುದ್ಧ ಘೋಷಣೆ ಕೂಗಿ ಅವರ ಪ್ರತಿಕೃತಿ ದಹಿಸಿ ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಸಿದ್ದರಾಮಯ್ಯ ಕ್ಷಮೆ ಯಾಚಿಸದೇ ಇದ್ದಲ್ಲಿ ರಾಜ್ಯಾದ್ಯಂತ ಹೋರಾಟ ನಡೆಸುವ ಎಚ್ಚರಿಕೆ ನೀಡಿದರು.
ಕುಡಚಿ ಶಾಸಕ ರಾಜೀವ್ ಮಾತನಾಡಿ, ಅಂಬೇಡ್ಕರ್ ಈ ದೇಶದ ಜನತೆಗೆ ಮಾತನಾಡುವ ಸ್ವಾತಂತ್ರ್ಯ ಕೊಟ್ಟರು. ಆದರೆ, ವಿಪಕ್ಷ ನಾಯಕ ಸಿದ್ದರಾಮಯ್ಯ ಈ ಸಮುದಾಯಕ್ಕೆ ದೊಡ್ಡ ಅವಮಾನ ಮಾಡಿದ್ದಾರೆ ಎಂದು ಹರಿಹಾಯ್ದರು.
ಬಿಜೆಪಿ ಎಸ್ಸಿ ಮೋರ್ಚಾ ರಾಜ್ಯಾಧ್ಯಕ್ಷ ಛಲವಾದಿ ನಾರಾಯಣ ಸ್ವಾಮಿ ಮಾತನಾಡುತ್ತಾ, ಕಾಂಗ್ರೆಸ್ ಅಂದರೆ ದಲಿತರು. ದಲಿತರು ಅಂದರೆ ಕಾಂಗ್ರೆಸ್ ಅನ್ನೋ ಸಂದರ್ಭ ಇತ್ತು. ದಲಿತರನ್ನೇ ಮತ ಬ್ಯಾಂಕ್ ಮಾಡಿಕೊಂಡು ದೇಶವನ್ನ ಆಳುತ್ತಾ ಬಂದಿತ್ತು. ಆದರೀಗ ಒಬ್ಬಬ್ಬ ದಲಿತರೂ ಕಾಂಗ್ರೆಸ್ ತೊರೆಯುತ್ತಿದ್ದಾರೆ. ಈಗ ಕಾಂಗ್ರೆಸ್ ದಲಿತರನ್ನ ಕಳೆದುಕೊಂಡು ಸೋಲುತ್ತಾ ಬಂದಿದೆ. ಅಧಿಕಾರವನ್ನೂ ಕಳೆದುಕೊಂಡಿದೆ. ಅದಕ್ಕಾಗಿ ದಲಿತರ ವಿರುದ್ಧ ಹೇಳಿಕೆ ಕೊಡುತ್ತಿದೆ ಎಂದು ಕಿಡಿಕಾರಿದರು.
ಬಿಜೆಪಿ ವಕ್ತಾರ ಅಶ್ವತ್ಥ್ ನಾರಾಯಣ್ ಮಾತನಾಡಿ, ಸಿದ್ದರಾಮಯ್ಯನವರೇ ನಿಮ್ಮ ಹೇಳಿಕೆ ಅತ್ಯಂತ ಬೇಜವಾಬ್ದಾರಿತನದ ಹೇಳಿಕೆಯಾಗಿದೆ. ಎಲ್ಲರಿಗೂ ಸ್ವಾತಂತ್ರ್ಯವಿದೆ. ಯಾರು ಯಾವ ಪಕ್ಷಕ್ಕೆ ಬೇಕಾದರೂ ಹೋಗಬಹುದು ಎಂದರು.
ಓದಿ: ರಾಯಚೂರಿನಲ್ಲಿ ಪ್ರತಿಭಟನೆ ವೇಳೆ ಮಾಜಿ ಶಾಸಕರಿಂದ ಪೊಲೀಸ್ ಸಿಬ್ಬಂದಿಗೆ ಕಪಾಳ ಮೋಕ್ಷ