ಬೆಂಗಳೂರು : ಅಂಬೇಡ್ಕರ್ ಕಂಡ ಕನಸನ್ನು ನನಸು ಮಾಡುವ ಕೆಲಸವನ್ನು ಪ್ರಧಾನಿ ನರೇಂದ್ರ ಮೋದಿ ಮಾಡುತ್ತಿದ್ದಾರೆ. ಕೋವಿಡ್ ಸಂಕಷ್ಟದಲ್ಲಿಯೂ ಕೇಂದ್ರ ಹಾಗೂ ರಾಜ್ಯ ಸರ್ಕಾರ ಉತ್ತಮ ರೀತಿಯ ಆಡಳಿತ ನೀಡುತ್ತಿದೆ. ನಮ್ಮ ಹಿರಿಯರು ಕಂಡ ಪರಿಕಲ್ಪನೆ, ಚಿಂತನೆಯ ರೀತಿ ಆಡಳಿತ ನೀಡಲಾಗುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಹೇಳಿದರು.
ಮಲ್ಲೇಶ್ವರಂನಲ್ಲಿರುವ ರಾಜ್ಯ ಬಿಜೆಪಿ ಕಚೇರಿಯಲ್ಲಿ ಧ್ವಜಾರೋಹಣ ನೆರವೇರಿಸಿ ಬಳಿಕ ಮಾತನಾಡಿದ ಕಟೀಲ್, ಒಬ್ಬ ಸಾಮಾನ್ಯ ಚಹಾ ಮಾರುವ ವ್ಯಕ್ತಿ ಈ ದೇಶದ ಪ್ರಧಾನಿಯಾಗಿದ್ದಾರೆ, ಇದೇ ಪ್ರಜಾಪ್ರಭುತ್ವದ ಸೌಂದರ್ಯ. ಡಾ.ಬಿ ಆರ್ ಅಂಬೇಡ್ಕರ್ ನೀಡಿದ ಸಂವಿಧಾನ ಜಗತ್ತಿಗೆ ಮಾದರಿಯಾಗಿದೆ ಎಂದರು.
ಮೋದಿ ಪ್ರಧಾನಿಯಾದ ಮೇಲೆ ಸರ್ವಶ್ರೇಷ್ಠ ಆಡಳಿತ ನೀಡಿದ್ದಾರೆ. ಅತ್ಯಲ್ಪ ಸಮಯದಲ್ಲಿ ಅತಿ ಹೆಚ್ಚು ಲಸಿಕೆ ನೀಡುವ ಮುಖಾಂತರ ದೇಶ ಲಸಿಕೆ ವಿಚಾರದಲ್ಲಿ ಜಗತ್ತಿನಲ್ಲೇ ಮಾದರಿಯಾಗಿದೆ. ಕೇವಲ ನಮ್ಮ ದೇಶಕ್ಕೆ ಮಾತ್ರವಲ್ಲ, ಇತರ ಸಣ್ಣ ಸಣ್ಣ ರಾಷ್ಟ್ರಗಳಿಗೆ ಲಸಿಕೆ ನೀಡುವುದರ ಮೂಲಕ ಸಹಕಾರ ನೀಡಿದೆ ಎಂದರು.
ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ
ತ್ರಿವಳಿ ತಲಾಖ್ ಹಾಗೂ ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಪಡಿಸುವ ಮೂಲಕ ಕಾಶ್ಮೀರದಲ್ಲಿ ಎಲ್ಲರೂ ಪ್ರಜಾಪ್ರಭುತ್ವದ ಆಧಾರದಲ್ಲಿ ಬದುಕುವ ಅವಕಾಶ ಕಲ್ಪಿಸಿದ್ದಾರೆ. ಆ ಮೂಲಕ ಡಾ. ಬಿ. ಆರ್ ಅಂಬೇಡ್ಕರ್ ಕನಸು ನನಸು ಮಾಡುವ ಕೆಲಸವನ್ನು ಪ್ರಧಾನಿ ಮೋದಿ ಮಾಡಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.
ಸಂವಿಧಾನದ ನಂಬಿಕೆಯ ಆಧಾರದಲ್ಲಿ ನ್ಯಾಯಾಲಯದ ತೀರ್ಪುಗಳು ಶ್ರೇಷ್ಠವಾಗಿವೆ. ನ್ಯಾಯಾಲಯದ ಮುಖಾಂತರ ಸಮಸ್ಯೆಗಳನ್ನು ಪರಿಹರಿಸುವುದು ಪ್ರಜಾಪ್ರಭುತ್ವದ ಲಕ್ಷಣ. ಸರ್ಕಾರ ಸರ್ವಾಧಿಕಾರಿ ಧೋರಣೆ ತೋರದೆ ಸರ್ವಸಮ್ಮತ ಅಭಿಪ್ರಾಯದ ಜತೆಗೆ ಆಡಳಿತ ನಡೆಸುವ ಅವಶ್ಯಕತೆ ಇದೆ.
ಅದನ್ನೇ ಮೋದಿ ಸರ್ಕಾರ ಮಾಡುತ್ತಿದೆ. ಇದಕ್ಕೆ ಉದಾಹರಣೆ ರಾಮಮಂದಿರ ನಿರ್ಮಾಣ. ನ್ಯಾಯಾಲಯದ ತೀರ್ಪಿನ ಮುಖಾಂತರ ಬಂದಿರುವ ಸರ್ವಸಮ್ಮತ ಅಭಿಮತದ ಆಧಾರದಲ್ಲಿ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣಕ್ಕೆ ಶಿಲಾನ್ಯಾಸ ಮಾಡಿರುವುದು ಪ್ರಜಾಪ್ರಭುತ್ವ ಪರಿಕಲ್ಪನೆಗೆ ಉದಾಹರಣೆಯಾಗಿದೆ ಎಂದು ಬಣ್ಣಿಸಿದರು.
ಅಮೃತ ಯೋಜನೆ ಪರಿಕಲ್ಪನೆಯಲ್ಲಿ ಅಭಿವೃದ್ಧಿ ಕಾರ್ಯ : ಬೊಮ್ಮಾಯಿ ಸರ್ಕಾರ ಅಮೃತ ಯೋಜನೆಗಳ ಮೂಲಕ ಅಭಿವೃದ್ಧಿ ಕಾರ್ಯ ಮಾಡುತ್ತಿದೆ. ಕೊರೊನಾ ಪರಿಸ್ಥಿತಿಯನ್ನು ಅತ್ಯಂತ ಸಮರ್ಥವಾಗಿ ನಿರ್ವಹಿಸಿದ ರಾಜ್ಯಗಳಲ್ಲಿ ಕರ್ನಾಟಕ ಕೂಡ ಒಂದು. ವಿದ್ಯಾಸಿರಿ, ಬೆಂಗಳೂರು ನಗರದಲ್ಲಿ ಅಭಿವೃದ್ಧಿಗೆ ಆದ್ಯತೆ, ಕೊರೊನಾದಿಂದ ಮೃತಪಟ್ಟ ಕುಟುಂಬಕ್ಕೆ 1 ಲಕ್ಷ ರೂ. ಪರಿಹಾರ, ಪ್ರತಿಯೊಬ್ಬರಿಗೆ ಲಸಿಕೆ ನೀಡಿಕೆಯೊಂದಿಗೆ ಕರ್ನಾಟಕ ಸರ್ಕಾರ ಸಂವಿಧಾನಿಕ ಚಿಂತನೆಯ ಅಡಿಯಲ್ಲಿ ಅದ್ಭುತವಾಗಿ ಕೆಲಸವನ್ನು ಮಾಡುತ್ತಿದೆ ಎಂದರು.
ಧ್ವಜಾರೋಹಣ ನೆರವೇರಿಸಿದ ಬಿಎಸ್ವೈ : ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಇಂದು ಅಧಿಕೃತ ನಿವಾಸ ಕಾವೇರಿಯಲ್ಲಿ ಮುಂಜಾನೆಯೇ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಬಿಡಿಎ ಅಧ್ಯಕ್ಷ ಎಸ್.ಆರ್ ವಿಶ್ವನಾಥ್ ಭಾಗಿಯಾಗಿದ್ದರು.
ಇದನ್ನೂ ಓದಿ: Republic Day: ಗಣರಾಜ್ಯೋತ್ಸವ ಪರೇಡ್ನಲ್ಲಿ ಗಮನಸೆಳೆದ ಕರ್ನಾಟಕದ ಸ್ತಬ್ಧಚಿತ್ರ