ಬೆಂಗಳೂರು: ಬಜೆಟ್ ಅಧಿವೇಶನದಲ್ಲಿ ರಾಜ್ಯದ ಮೈತ್ರಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಬಿಜೆಪಿ ಮೂರು ಅಸ್ತ್ರಗಳ ಬಳಕೆಗೆ ನಿರ್ಧರಿಸಿದ್ದು, ನಾಳೆಯೂ ಬಿಜೆಪಿ ಧರಣಿ ಮುಂದುವರೆಯುವ ಸಾಧ್ಯತೆ ಇದೆ.
ಹೌದು, ರಾಜ್ಯಪಾಲರ ಭಾಷಣ ಅರ್ಧಕ್ಕೆ ಮೊಟಕುಗೊಳ್ಳುವಂತೆ ಮಾಡುವಲ್ಲಿ ಯಶಸ್ವಿಯಾದ ಬಿಜೆಪಿ, ಮುಂದಿನ ಟಾರ್ಗೆಟ್ ಸದನದಲ್ಲಿ ಸರ್ಕಾರವನ್ನು ಕಟ್ಟಿಹಾಕುವುದಕ್ಕೆ ಭರ್ಜರಿ ಸಿದ್ಧತೆಯನ್ನೇ ಮಾಡಿಕೊಂಡಿದೆ. ಅದಕ್ಕಾಗಿ ಮೂರು ಅಸ್ತ್ರಗಳ ಪ್ರಯೋಗಕ್ಕೆ ಕೇಸರಿಪಡೆ ಸರ್ವಸನ್ನದ್ಧವಾಗಿದೆ. ನಾಳೆಯ ಕಲಾಪದಲ್ಲಿಯೇ ಅಸ್ತ್ರಗಳ ಪ್ರಯೋಗವೂ ಆರಂಭಗೊಳ್ಳಲಿದೆ.
ಮೂರು ಅಸ್ತ್ರಗಳೇನು?
1. ಸಿದ್ದರಾಮಯ್ಯ ನಮ್ಮ ಮುಖ್ಯಮಂತ್ರಿ
2. ಪುಟ್ಟರಂಗಶೆಟ್ಟಿ ಪ್ರಕರಣ
3. ಶಾಸಕ ಗಣೇಶ್ ಹಲ್ಲೆ ಪ್ರಕರಣ
ಕಾಂಗ್ರೆಸ್ನ ಕೆಲ ಶಾಸಕರು ಈಗಲೂ ಕೂಡಾ ನಮಗೆ ಸಿದ್ದರಾಮಯ್ಯ ಅವರೇ ಮುಖ್ಯಮಂತ್ರಿ ಎಂದು ಹೇಳಿಕೆ ನೀಡುತ್ತಿರುವ ವಿಷಯವನ್ನೇ ರಾಜಕೀಯ ಲಾಭಕ್ಕೆ ಬಳಸಿಕೊಳ್ಳಲು ಬಿಜೆಪಿ ನಿರ್ಧರಿಸಿದೆ. ಮೈತ್ರಿ ಸರ್ಕಾರದ ನೇತೃತ್ವ ವಹಿಸಿರುವ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮೇಲೆ ಶಾಸಕರಿಗೆ ವಿಶ್ವಾಸವಿಲ್ಲ. ಹಾಗಾಗಿ ಕೆಲ ಶಾಸಕರು ಇಂತಹ ಹೇಳಿಕೆ ನೀಡುತ್ತಿದ್ದಾರೆ ಎನ್ನುವುದನ್ನು ಸದನದಲ್ಲಿ ಪ್ರಸ್ತಾಪಿಸಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ತಂತ್ರಗಾರಿಕೆ ಬಿಜೆಪಿಯದ್ದಾಗಿದೆ.
ಇನ್ನು ಸಚಿವ ಪುಟ್ಟರಂಗ ಶೆಟ್ಟಿ ಆಪ್ತನ ಬಳಿ ವಿಧಾನಸೌಧದಲ್ಲಿಯೇ ಲಕ್ಷಗಟ್ಟಲೇ ಹಣಪತ್ತೆ ಪ್ರಕರಣದ ವಿಷಯ ಬಿಜೆಪಿಯ ಎರಡನೇ ಅಸ್ತ್ರವಾಗಿದೆ. ಮೊದಲ ಅಸ್ತ್ರ ಕಾಂಗ್ರೆಸ್ ಮೇಲಾದರೇ ಎರಡನೆಯದ್ದು ಜೆಡಿಎಸ್ ವಿರುದ್ಧ. ಸಚಿವರ ಆಪ್ತರ ಬಳಿ ಹಣ ಒತ್ತೆಯಾದ ಹಿನ್ನೆಲೆ ಭ್ರಷ್ಟಾಚಾರದ ಆರೋಪವಿದ್ದು, ಕೂಡಲೇ ಸಚಿವರು ರಾಜೀನಾಮೆ ನೀಡಬೇಕು ಎನ್ನುವ ಬೇಡಿಕೆ ಮುಂದಿಟ್ಟು ಸದನದಲ್ಲಿ ಸರ್ಕಾರದ ವಿರುದ್ಧ ಬಿಜೆಪಿ ಹೋರಾಟ ನಡೆಸಲಿದೆ. ಸರ್ಕಾರವನ್ನ ಮುಜುಗರಕ್ಕೆ ಸಿಲುಕಿಸುವ ಪ್ರಯತ್ನ ನಡೆಸಲಿದೆ.
ಇನ್ನು ರೆಸಾರ್ಟ್ನಲ್ಲಿ ಶಾಸಕರ ನಡುವೆ ನಡೆದ ಮಾರಾಮಾರಿ ಬಿಜೆಪಿಯ ಮೂರನೇ ಅಸ್ತ್ರ. ಶಾಸಕ ಆನಂದ್ ಸಿಂಗ್ ವಿರುದ್ಧ ಶಾಸಕ ಗಣೇಶ್ ನಡೆಸಿದ ಹಲ್ಲೆ ಪ್ರಕರಣ ಪ್ರಸ್ತಾಪಿಸಿ ಸದನದಲ್ಲಿ ಬಿಜೆಪಿ ಹೋರಾಟ ನಡೆಸಲಿದೆ. ಈ ಮೂರೂ ಅಸ್ತ್ರಗಳನ್ನು ಬಜೆಟ್ ಮಂಡನೆಗೆ ಮುನ್ನವೇ ಪ್ರಯೋಗಿಸಿ ಸರ್ಕಾರವನ್ನು ಕಟ್ಟಿಹಾಕಲು ಚಿಂತನೆ ನಡೆಸಿದೆ ಎಂದು ಬಿಜೆಪಿ ಆಪ್ತ ಮೂಲಗಳು ತಿಳಿಸಿವೆ.