ಬೆಂಗಳೂರು: ನವದೆಹಲಿಯಲ್ಲಿ ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿಣಿ ಸಭೆ ನಡೆದ ಬೆನ್ನಲ್ಲೇ ರಾಜ್ಯ ಬಿಜೆಪಿ ಕೇಂದ್ರ ಕಚೇರಿಯಲ್ಲಿ ಮಹತ್ವದ ಸಭೆ ನಡೆದಿದ್ದು, ಹತ್ತು ಹಲವು ವಿಷಯಗಳ ಕುರಿತು ಮಹತ್ವದ ಚರ್ಚೆ ನಡೆಸಲಾಯಿತು. ಚುನಾವಣಾ ಕಾರ್ಯತಂತ್ರ ಆಧಾರಿತವಾಗಿಯೇ ನಡೆದ ಸಭೆಯ ಇನ್ಸೈಟ್ ಮಾಹಿತಿ ಇಲ್ಲಿದೆ.
ಮಲ್ಲೇಶ್ವರದಲ್ಲಿರುವ ರಾಜ್ಯ ಬಿಜೆಪಿ ಕೇಂದ್ರ ಕಚೇರಿ ಜಗನ್ನಾಥ ಭವನದಲ್ಲಿ ಪ್ರಮುಖ ನಾಯಕರನ್ನೊಳಗೊಂಡ ಸಂಘಟನಾತ್ಮಕ ಸಭೆ ನಡೆಯಿತು. ಬಿಜೆಪಿ ಹೈವೋಲ್ಟೇಜ್ ಮೀಟಿಂಗ್ನಲ್ಲಿ ಚುನಾವಣೆಗೆ ಬಿಜೆಪಿ ಯಾವ ದಿಕ್ಕಿನಲ್ಲಿ ಸಾಗಬೇಕು ಎನ್ನುವ ವಿಷಯವನ್ನೇ ಪ್ರಧಾನವನ್ನಾಗಿಸಿಕೊಂಡು ಮಹತ್ವದ ಸಮಾಲೋಚನೆ ನಡೆಸಲಾಯಿತು. ಈ ಸಭೆಯಲ್ಲಿ ನಡೆದ ಪ್ರಮುಖ 10 ಅಂಶಗಳ ಕುರಿತ ಮಾಹಿತಿ ಲಭ್ಯವಾಗಿದೆ.
ಟಾಪ್ ಟೆನ್ ಅಂಶಗಳು:
1. ಚುನಾವಣಾ ದೃಷ್ಟಿಯಿಂದ ಜನಪ್ರಿಯ ಬಜೆಟ್ ಕೊಡುವುದು - ಭರಪೂರ ಭರವಸೆ ನೀಡುವುದು - ಸಾಧ್ಯವಾದಷ್ಟು ಜನರಿಗೆ ಹಳೆಯ ಕಾರ್ಯಕ್ರಮ ರೀಚ್ ಮಾಡಿಸುವುದು ಮೊದಲ ಅಂಶವಾಗಿದೆ.
2. ಕಾಂಗ್ರೆಸ್ ಬಸ್ ಯಾತ್ರೆಗೆ ತಿರುಗೇಟು ಕೊಡಲು ರಥಯಾತ್ರೆ ಆಯೋಜನೆ ಮಾಡಲು ಬಿಜೆಪಿ ನಿರ್ಧರಿಸಿದ್ದು, ರಾಜ್ಯದ ನಾಲ್ಕು ದಿಕ್ಕುಗಳಿಂದ ರಥಯಾತ್ರೆ ಆರಂಭಿಸಲು ನಾಲ್ಕು ಟೀಮ್ ರಚನೆ ಮಾಡುವ ಕುರಿತು ಚರ್ಚಿಸಲಾಯಿತು. ಆದಷ್ಟು ಬೇಗ ತಂಡ ರಚಿಸುವ ನಿರ್ಣಯ ಕೈಗೊಳ್ಳಲಾಯಿತು.
3. ಜಿಲ್ಲೆಗಳಿಂದ ಮಾಹಿತಿ ಸಂಗ್ರಹಿಸಿ ರಾಜ್ಯಕ್ಕೆ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲು ನಿರ್ಧರಿಸಲಾಯಿತು. ಪ್ರತಿ ಜಿಲ್ಲೆಯಿಂದ ಆಯಾ ಜಿಲ್ಲೆಯ ಅಗತ್ಯತೆಗಳೇನು ಎನ್ನುವುದನ್ನು ವರದಿ ರೂಪದಲ್ಲಿ ಪಡೆದುಕೊಂಡು ಪ್ರಣಾಳಿಕೆಯಲ್ಲಿ ಸ್ಥಳೀಯ ವಿಷಯ ಆಧಾರಿತವಾಗಿ ಯೋಜನೆಗಳನ್ನು ರೂಪಿಸಲು ಆದ್ಯತೆ ನೀಡಲು ನಿರ್ಧರಿಸಲಾಗಿದೆ.
4. ಜನಸಂಕಲ್ಪಯಾತ್ರೆಯನ್ನ ಮುಂದುವರೆಸಲು ನಿರ್ಧರಿಸಿದ್ದು, ಈಗಾಗಲೇ ಮೊದಲ ಹಂತದ ಯಾತ್ರೆ ಮುಕ್ತಾಯಗೊಂಡಿದ್ದು, ಮೋರ್ಚಾಗಳ ಸಮಾವೇಶ ಮಾತ್ರ ಬಾಕಿ ಇದೆ. ಇನ್ನೆರಡು ತಿಂಗಳು ಜನ ಸಂಕಲ್ಪ ಯಾತ್ರೆ ಮುಂದುವರೆಸುತ್ತಲೇ ವಿವಿಧ ಮೋರ್ಚಾಗಳ ಬೃಹತ್ ಸಮಾವೇಶಗಳನ್ನು ಆಯೋಜನೆ ಮಾಡಬೇಕು ಎಂದು ನಿರ್ಧರಿಸಲಾಗಿದೆ.
5. ರಾಜ್ಯಕ್ಕೆ ರಾಷ್ಟ್ರೀಯ ನಾಯಕರ ಕರೆಸಿ ಅಬ್ಬರದ ಪ್ರಚಾರ ಮಾಡಿಸುವುದು, ಸ್ಥಳ ಮತ್ತು ದಿನಾಂಕ ನಿಗದಿ ಮಾಡುವ ಕುರಿತು ನಿರ್ಧರಿಸಲಾಗಿದ್ದು, ಪ್ರತಿ ವಾರ ಒಬ್ಬೊಬ್ಬರು ಕೇಂದ್ರದ ನಾಯಕರು ರಾಜ್ಯಕ್ಕೆ ಭೇಟಿ ನೀಡುವಂತೆ ಪ್ರವಾಸಗಳನ್ನು ಆಯೋಜನೆ ಮಾಡಲು ನಿರ್ಧರಿಸಲಾಯಿತು.
6. ವಿಜಯ ಸಂಕಲ್ಪ ಅಭಿಯಾನ ಯಶಸ್ವಿ ಮಾಡಬೇಕು, ಬೂತ್ ಇನ್ನಷ್ಟು ಸ್ಟ್ರಾಂಗ್ ಮಾಡಬೇಕು ಎಂದು ನಿರ್ಧರಿಸಲಾಗಿದೆ. ಈಗಾಗಲೇ ವಿಜಯ ಸಂಕಲ್ಪ ಅಭಿಯಾನ ಸಫಲಗೊಳಿಸಬೇಕು, 10 ದಿನದ ಅಭಿಯಾನದಲ್ಲಿ ಗುರಿ ತಲುಪಬೇಕು, ಬೂತ್ ವಿಜಯ್ ಅಭಿಯಾನದಂತೆ ವ್ಯವಸ್ಥಿತವಾಗಿ ಈ ಅಭಿಯಾನ ನಡೆಸಬೇಕು ಎಂದು ನಿರ್ಧರಿಸಲಾಗಿದೆ.
7. ಅಭ್ಯರ್ಥಿ ಆಯ್ಕೆ ಪ್ರಕ್ರಿಯೆಯಲ್ಲಿ ಪಕ್ಷಕ್ಕೆ ದುಡಿದ ಸೇವೆ ಜತೆಗೆ ಗೆಲ್ಲುವ ಸಾಮರ್ಥ್ಯ ನೋಡುವುದು, ಹೊಸಬರಿಗೂ ಅವಕಾಶ ನೀಡುವಂತೆ ತನ್ನ ಅಭಿಪ್ರಾಯವನ್ನು ಕೇಂದ್ರಕ್ಕೆ ಸಲ್ಲಿಸಲು ನಿರ್ಧರಿಸಲಾಯಿತು ಎನ್ನಲಾಗಿದೆ.
8. ಪ್ರಧಾನಿ ನರೇಂದ್ರ ಮೋದಿ ಕಾರ್ಯಕಾರಣಿಯಲ್ಲಿ ಹೇಳಿರುವ ವಿಚಾರಗಳನ್ನ ಯಥಾವತ್ತಾಗಿ ಜಾರಿ ಮಾಡಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಗಿದೆ. ಹೈಕಮಾಂಡ್ ಅಣತಿಯಂತೆಯೇ ಪ್ರಚಾರ ಕಾರ್ಯ ಆಯೋಜನೆ ಮಾಡಬೇಕು. ಇದರಲ್ಲಿ ರಾಜ್ಯದ ಎಲ್ಲ ನಾಯಕರು ತೊಡಗಿಕೊಳ್ಳಬೇಕು, ಪಕ್ಷದ ಪದಾಧಿಕಾರಿಗಳು ಈ ವಿಚಾರದಲ್ಲಿ ಆಸಕ್ತಿ ವಹಿಸಿ ನಾಯಕರನ್ನು ಪಾಲ್ಗೊಳ್ಳಿಸುವಲ್ಲಿ ಶ್ರಮಿಸಬೇಕು ಎನ್ನುವ ನಿರ್ಧಾರ ಕೈಗೊಳ್ಳಲಾಯಿತು.
9. ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್, ಜೆಡಿಎಸ್ ನಿಂದ ಅಸಮಾಧಾನಗೊಂಡವರನ್ನ ಪಕ್ಷಕ್ಕೆ ಸೆಳೆಯುವ ನಿರ್ಧಾರದ ಬಗ್ಗೆ ಗಂಭೀರವಾಗಿ ಚಿಂತನೆ ನಡೆಸಬೇಕು, ಅಗತ್ಯವೆನಿಸಿದಲ್ಲಿ ಇತರ ಪಕ್ಷಗಳ ನಾಯಕರನ್ನು ಕರೆತರಬೇಕು, ಸ್ಥಳೀಯ ನಾಯಕರನ್ನೂ ಈ ವಿಚಾರದಲ್ಲಿ ವಿಶ್ವಾಸಕ್ಕೆ ಪಡೆದುಕೊಳ್ಳಬೇಕು ಎಂದು ಚರ್ಚಿಸಲಾಗಿದೆ.
10. ಕೇಂದ್ರ ಮತ್ತು ರಾಜ್ಯ ಸರ್ಕಾರದ ಸಾಧನೆಗಳನ್ನ ಜನರಿಗೆ ಇನ್ನಷ್ಟು ಚುರುಕಾಗಿ ತಲುಪಿಸಬೇಕು, ಚುನಾವಣೆ ಹತ್ತಿರ ಬರುತ್ತಿದೆ. ಸಮಯ ಕಡಿಮೆ ಇದೆ. ಎಲ್ಲರೂ ಸರ್ಕಾರದ ಸಾಧನೆಗಳನ್ನು ಜನರಿಗೆ ತಲುಪಿಸುಲು ಮುಂದಾಗಬೇಕು, ಈ ಬಗ್ಗೆ ಸ್ಪಷ್ಟ ಸೂಚನೆ ನೀಡಿ ಅದರ ಬಗ್ಗೆ ಪರಾಮರ್ಶೆಯನ್ನೂ ನಡೆಸಬೇಕು ಎನ್ನುವ ನಿರ್ಧಾರಕ್ಕೆ ಬರಲಾಗಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮಾತನಾಡಿ, ಮುಂದಿನ ಎರಡು ತಿಂಗಳ ಪಕ್ಷ ಸಂಘಟನೆ, ಚುನಾವಣೆ ಸಿದ್ದತೆಗೆ ಏನೆಲ್ಲ ಮಾಡಬೇಕು ಎಂದು ಇಂದಿನ ಸಭೆಯಲ್ಲಿ ಚರ್ಚೆ ನಡೆದಿದೆ. ನಾಲ್ಕು ದಿಕ್ಕಿನಿಂದ ಯಾತ್ರೆ ಶುರು ಮಾಡುವ ಬಗ್ಗೆ ಚರ್ಚೆ ಆಗಿದೆ, ಜನಸಂಕಲ್ಪ ಯಾತ್ರೆಯನ್ನು ಫೆಬ್ರವರಿ ಅಂತ್ಯದವರೆಗೆ ನಡೆಸಲು ತೀರ್ಮಾನಿಸಲಾಗಿದೆ. ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಣಾಳಿಕೆ ಪ್ರಕಟಿಸುವ ಬಗ್ಗೆ ಚರ್ಚೆ ಆಗಿದೆ ಎಂದರು.
ನಾಳೆಯಿಂದ ಬೂತ್ ವಿಜಯ ಸಂಕಲ್ಪ ಯಾತ್ರೆ ಪ್ರಾರಂಭ ಮಾಡುತ್ತಿದ್ದೇವೆ, ನಾನು ತುಮಕೂರಿನಲ್ಲಿ ಪ್ರಾರಂಭ ಮಾಡುತ್ತಿದ್ದೇನೆ. ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ವಿಜಯಪುರದಲ್ಲಿ ಮಾಡುತ್ತಿದ್ದಾರೆ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೂಡ ಒಂದು ಕಡೆ ಮಾಡುತ್ತಿದ್ದಾರೆ ಹೀಗೆ ಜನರ ಸಂಪರ್ಕವನ್ನು ಸಾಧಿಸಲು, ಒಂದಲ್ಲ ಒಂದು ರೀತಿಯಲ್ಲಿ ಕಾರ್ಯಕ್ರಮ ಮಾಡುತ್ತಿದ್ದೇವೆ ತಾಲೂಕು, ಮಂಡಲಗಳಲ್ಲಿ ಸಮ್ಮೇಳನ ಮಾಡುತ್ತೇವೆ. ಎಲ್ಲಾ ಮೋರ್ಚಾಗಳ ಸಮಾವೇಶ ನಡೆಸುತ್ತೇವೆ ಎಂದರು.
ಇದನ್ನೂ ಓದಿ: ಕಾಂಗ್ರೆಸ್ನವರು ಐಸಿಯುನಿಂದ ಹೊರಗೆ ಬರಬೇಕು: ಮಾಜಿ ಸಿಎಂ ಜಗದೀಶ್ ಶೆಟ್ಟರ್ ಟಾಂಗ್