ಬೆಂಗಳೂರು: ಸೆಪ್ಟೆಂಬರ್ 13ರಿಂದ ಮಳೆಗಾಲದ ಅಧಿವೇಶನ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಪಕ್ಷದ ಸಭೆ ಕರೆದಿದ್ದಾರೆ. ಸೋಮವಾರ ಸಂಜೆ 6.30 ಗಂಟೆಗೆ ಖಾಸಗಿ ಹೋಟೆಲ್ನಲ್ಲಿ ಶಾಸಕಾಂಗ ಪಕ್ಷದ ಸಭೆ ನಡೆಯಲಿದೆ.
ಪ್ರತಿಪಕ್ಷ ಕಾಂಗ್ರೆಸ್ ತಂತ್ರಕ್ಕೆ ಪ್ರತಿತಂತ್ರ ರೂಪಿಸಲು ಶಾಸಕಾಂಗ ಪಕ್ಷದ ಸಭೆಯಲ್ಲಿ ಚರ್ಚೆ ನಡೆಸಲಾಗುತ್ತಿದೆ. ಶಾಸಕಾಂಗ ಪಕ್ಷದ ಸಭೆಗೆ ಬರುವಂತೆ ಮಾಜಿ ಸಿಎಂ ಬಿ.ಎಸ್. ಯಡಿಯೂರಪ್ಪಗೆ ಸಿಎಂ ಆಹ್ವಾನಿಸಿದ್ದಾರೆ.
ಮೈಸೂರು ವಿದ್ಯಾರ್ಥಿನಿ ಮೇಲಿನ ಅತ್ಯಾಚಾರ ಪ್ರಕರಣ, ಕೋವಿಡ್ ವೈಫಲ್ಯ, ರೈತರ ವಿಚಾರ, ಜಾತಿ ಜನಗಣತಿ ವರದಿ ಮಂಡನೆ, ಅನುದಾನ ಕೊರತೆ, ನೆರೆ ನಿರ್ವಹಣೆ ವೈಫಲ್ಯ, ಪ್ರಗತಿ ಕುಂಠಿತ, ಖಜಾನೆ ಖಾಲಿ ವಿಚಾರಗಳ ಬಗ್ಗೆ ಪ್ರತಿಪಕ್ಷಗಳ ದಾಳಿಗೆ ಯಾವ ರೀತಿ ಪ್ರತಿತಂತ್ರ ರೂಪಿಸಬೇಕು, ಸಮರ್ಥವಾಗಿ ಎದುರಿಸಬೇಕು ಎಂಬ ಬಗ್ಗೆ ಸಭೆಯಲ್ಲಿ ಸಮಾಲೋಚನೆ ನಡೆಯಲಿದೆ.
ಈಗಾಗಲೇ ಕಾಂಗ್ರೆಸ್, ಬೊಮ್ಮಾಯಿ ಸರ್ಕಾರವನ್ನು ತನ್ನ ಮೊದಲ ಅಧಿವೇಶನದಲ್ಲೇ ಇಕ್ಕಟ್ಟಿಗೆ ಸಿಲುಕಿಸಲು ಮುಂದಾಗಿದೆ. ಕೋವಿಡ್ ನಿರ್ವಹಣೆ, ಲಸಿಕೆ ಅಭಿಯಾನ, ಅಭಿವೃದ್ಧಿ ಕುಂಠಿತ, ಕಾನೂನು ಸುವ್ಯವಸ್ಥೆ ಹದಗೆಟ್ಟಿರುವ ಬಗ್ಗೆ ಸರ್ಕಾರದ ವಿರುದ್ಧ ಮುಗಿ ಬೀಳಲು ನಿರ್ಧರಿಸಿದೆ. ಈ ಹಿನ್ನೆಲೆಯಲ್ಲಿ ಬೊಮ್ಮಾಯಿ ಬಿಜೆಪಿ ಶಾಸಕಾಂಗ ಸಭೆಯಲ್ಲಿ ಪ್ರತಿಪಕ್ಷಗಳ ದಾಳಕ್ಕೆ ಯಾವ ರೀತಿ ಪ್ರತಿದಾಳ ಹಣೆಯಬೇಕು ಎಂಬ ಬಗ್ಗೆ ಸಲಹೆ ಸೂಚನೆಗಳನ್ನು ನೀಡಲಿದ್ದಾರೆ.
ಇದನ್ನೂ ಓದಿ: ಮುಂಬೈ ರೇಪ್ ಕೇಸ್: ಚಿಕಿತ್ಸೆ ಫಲಿಸದೆ ಸಂತ್ರಸ್ತೆ ಸಾವು..