ಬೆಂಗಳೂರು: ವಿಶೇಷ ಆರ್ಥಿಕ ಪ್ಯಾಕೇಜ್ ಘೋಕ್ಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಡಿಸಿಎಂ ಗೋವಿಂದ ಕಾರಜೋಳ ಅಭಿನಂದನೆ ಸಲ್ಲಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿ ಸ್ವಾವಲಂಬಿ ಭಾರತದ ನಿರ್ಮಾಣ ಹಾಗೂ ಸದೃಢ ಸಾಮಾಜಿಕ ವ್ಯವಸ್ಥೆಯನ್ನು ಸಾಕಾರಗೊಳಿಸಲು 20 ಲಕ್ಷ ಕೋಟಿ ರೂ. ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಿದ್ದಾರೆ. ದುಡಿಯವ ಕೈಗಳನ್ನು ಇನ್ನಷ್ಟು ಬಲಪಡಿಸಲಿದೆ. ಇದು ದೇಶದ ಆರ್ಥಿಕತೆಯಲ್ಲಿ ದೊಡ್ಡ ಬದಲಾವಣೆ ತರಲಿದೆ. ಇಷ್ಟು ದೊಡ್ಡ ಪ್ರಮಾಣದ ದಾಖಲೆಯ ಹಾಗೂ ಕ್ರಾಂತಿಕಾರಿ ಆರ್ಥಿಕ ಪ್ಯಾಕೇಜ್ ಘೋಷಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ದೇಶದ 130 ಕೋಟಿ ಜನರ ಪರವಾಗಿ ಅಭಿನಂದನೆಗಳು ಎಂದು ಗೃಹ ಸಚಿವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಧಾನ ಮಂತ್ರಿಗಳಿಗೆ ಅಭಿನಂದಿಸಿದ ಡಿಸಿಎಂ:
ಪ್ರಪಂಚದ ಯಾವುದೇ ದೇಶದಲ್ಲಿ ಇಷ್ಟೊಂದು ದೊಡ್ಡ ಪ್ರಮಾಣದ ವಿಶೇಷ ಪ್ಯಾಕೇಜ್ ನೀಡಿದ ಉದಾಹರಣೆ ಇಲ್ಲ. ಆದರೆ, ಪ್ರಧಾನಿ ನರೇಂದ್ರ ಮೋದಿ ಕೊರೊನಾ ರೋಗದಿಂದ ಸಂಕಷ್ಟಕ್ಕೀಡಾದ ಜನರ ಸಮಸ್ಯೆಗಳನ್ನು ಅರಿತು 20 ಲಕ್ಷ ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಿರುವುದು ಸ್ವಾಗತಿಸಿ ಅವರನ್ನು ಅಭಿನಂದಿಸುತ್ತೇನೆ ಎಂದು ಡಿಸಿಎಂ ಗೋವಿಂದ ಎಂ ಕಾರಜೋಳ ಪತ್ರಿಕಾ ಪ್ರಕಟಣೆಯಲ್ಲಿ ಹೇಳಿದ್ದಾರೆ.