ಬೆಂಗಳೂರು: ಕರ್ನಾಟಕದಲ್ಲಿ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್ ನೇತೃತ್ವದ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ತಮಿಳುನಾಡಿಗೆ ನೀರಿನ ಭಾಗ್ಯ, ಪಂಚರಾಜ್ಯಗಳಿಗೆ ಹಣದ ಭಾಗ್ಯ, ಕರ್ನಾಟಕದ ಜನತೆಗೆ ಕತ್ತಲ ಭಾಗ್ಯ ಒದಗಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಸಂಸದ ನಳಿನ್ ಕುಮಾರ್ ಕಟೀಲ್ ಟೀಕಿಸಿದರು. ಮಲ್ಲೇಶ್ವರದ ಬಿಜೆಪಿ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಬುಧವಾರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಅವರು ಮಾತನಾಡಿದರು.
ವರ್ಗಾವಣೆ ದಂಧೆ: ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ವರ್ಗಾವಣೆ ದಂಧೆ ನಡೆಯುತ್ತಿದೆ. ವರ್ಗಾವಣೆಗೆ ರೇಟ್ ನಿಗದಿ ಮಾಡಿದ್ದಾರೆ. ಇದರಿಂದ ಆರಂಭವಾದ ಭ್ರಷ್ಟಾಚಾರವು ಬಿಬಿಎಂಪಿ ಗುತ್ತಿಗೆದಾರರ ಹಣ ಬಿಡುಗಡೆಗೆ ಕಮಿಷನ್ ಪಡೆಯುವ ಮೂಲಕ ಮುಂದುವರೆದಿದೆ. ದಸರಾ ಕಲಾವಿದರಿಂದ ಹಣ ಕೇಳಿದ ಲಜ್ಜೆಗೇಡಿತನದ ಸರ್ಕಾರ ಇದು ಎಂದರು.
ಪಂಚರಾಜ್ಯಗಳಿಗೆ ಹಣದ ಹೊಳೆ ಹರಿಸುತ್ತಿದ್ದಾರೆ. ಗುತ್ತಿಗೆದಾರರ ಬಳಿ ಸಿಕ್ಕಿದ ಹಣದ ಬಗ್ಗೆ ಇಡಿ ತನಿಖೆ ನಡೆಸಬೇಕು. ಸರ್ಕಾರ ನೈತಿಕ ಹೊಣೆ ಹೊತ್ತು ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸಿದ ಅವರು, ಕೇವಲ 4 ತಿಂಗಳ ಕಾಂಗ್ರೆಸ್ ಆಡಳಿತಾವಧಿಯಲ್ಲಿ 251 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಂದು ಕಡೆಯಲ್ಲಿ ಕರೆಂಟಿಲ್ಲ, ರೈತರಿಗೆ ಪರಿಹಾರ ಕೊಡುತ್ತಿಲ್ಲ, ಸಾಲ ಮಾಡಿದ ರೈತರು ಬರ, ವಿದ್ಯುತ್ ಕೊರತೆಯಿಂದ ಕಷ್ಟದಲ್ಲಿದ್ದಾರೆ ಎಂದು ಹೇಳಿದರು.
ಕಾಂಗ್ರೆಸ್ ಗುಂಪುಗಾರಿಕೆ: ರಾಜ್ಯದ ಜನ ರೋಸಿ ಹೋಗಿದ್ದಾರೆ. ಶಾಪ ಹಾಕುತ್ತಿದ್ದಾರೆ. ಕಾಂಗ್ರೆಸ್ ಒಳಗಡೆ ಗುಂಪುಗಾರಿಕೆ ಹೆಚ್ಚಾಗಿದೆ. ಡಿ.ಕೆ.ಶಿವಕುಮಾರ್ ಬೆಳಗಾವಿಗೆ ಹೋಗಿದ್ದಾರೆ. ಅಲ್ಲಿಂದ ಕೆಲವರು ಬಸ್ ಹತ್ತಿದ್ದಾರೆ. ಅಲ್ಲಿ ಬಸ್ ಹತ್ತಿದವರನ್ನು ಇಳಿಸಲು ಶಿವಕುಮಾರ್ ಹೋಗಿದ್ದಾರೆ. ಬೇರೆಡೆ ಇನ್ನೊಂದಿಪ್ಪತ್ತು ಜನ ಬಸ್ ಹತ್ತಲು ರೆಡಿ ಆಗಿದ್ದಾರೆ. ಕಾಂಗ್ರೆಸ್ ಆಡಳಿತ ವಿಷಯದಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ತಿಳಿಸಿದರು.
ಸರ್ಕಾರದಲ್ಲಿ ಹಣವಿಲ್ಲ. ಅಭಿವೃದ್ಧಿಗೆ ಹಣ ಬಿಡುಗಡೆ ಆಗುತ್ತಿಲ್ಲ. ಸಚಿವರು ಮಜಾ ಮಾಡುತ್ತಿದ್ದಾರೆ. ಮುಖ್ಯಮಂತ್ರಿಗಳು ಕಣ್ಮುಚ್ಚಿ ಕುಳಿತಿದ್ದಾರಾ? ಬರದ ವೈಜ್ಞಾನಿಕ ಅಧ್ಯಯನ ನಡೆಸಿ ಪರಿಹಾರ ಕೊಡಬೇಕು ಎಂದು ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಇದನ್ನೂಓದಿ: ಆಧಾರರಹಿತ ಆರೋಪ ಮಾಡುವುದು ಬಿಜೆಪಿಯ ಚಾಳಿ: ಸಚಿವ ದಿನೇಶ್ ಗುಂಡೂರಾವ್