ಬೆಂಗಳೂರು: ಬ್ಯಾಡರಹಳ್ಳಿಯ ಬಿಜೆಪಿ ಮುಖಂಡನ ಆತ್ಮಹತ್ಯೆಗೆ ಹನಿಟ್ರ್ಯಾಪ್ ಜಾಲವೇ ಕಾರಣ ಎನ್ನಲಾಗ್ತಿದೆ. ಹೇರೋಹಳ್ಳಿ ವಾರ್ಡಿನ ಬಿಜೆಪಿ ಮುಖಂಡ ಅನಂತರಾಜು ಕಳೆದ ಮೇ12ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಆರಂಭದಲ್ಲಿ ಅನಾರೋಗ್ಯದ ಸಮಸ್ಯೆಯಿಂದ ಅನಂತರಾಜು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅನಂತರಾಜು ಬರೆದಿಟ್ಟ ಡೆತ್ ನೋಟ್ ಸಿಕ್ಕಿದ್ದು, ಅದರನ್ವಯ ಅವರ ಪತ್ನಿ ಸುಮಾ ನೀಡಿರುವ ದೂರಿನಲ್ಲಿ ಸಾವಿಗೆ ಅಸಲಿ ಕಾರಣ ಬಯಲಾಗಿದೆ.
ಅನಂತರಾಜು ಆತ್ಮಹತ್ಯೆ ಹಿಂದೆ ಹನಿಟ್ರ್ಯಾಪ್ ಡಿಮ್ಯಾಂಡ್ ಗ್ಯಾಂಗ್ ಇದ್ದು, ಪ್ರಕರಣ ಟ್ವಿಸ್ಟ್ ಪಡೆದುಕೊಂಡಿದೆ. ಕೆ.ಆರ್. ಪುರಂ ನಿವಾಸಿಯೋರ್ವರು ಹನಿಟ್ರ್ಯಾಪ್ ಮಾಡಿದ್ದು, ತನ್ನ ಗಂಡನ ಖಾಸಗಿ ಫೋಟೋ, ವಿಡಿಯೋಗಳನ್ನ ಮೋಸದಿಂದ ಚಿತ್ರಿಸಿಕೊಂಡು ಹಣಕ್ಕಾಗಿ ಬೇಡಿಕೆ ಇಟ್ಟಿದ್ದರು. ಹಣ ನೀಡದಿದ್ದರೆ ಪಕ್ಷದ ಮುಖಂಡರಿಗೆ ನೀಡುವುದಾಗಿ ಬೆದರಿಸಿದ್ದರು ಎಂದು ಆರೋಪಿಗಳ ವಿರುದ್ಧ ಅನಂತರಾಜು ಪತ್ನಿ ದೂರು ನೀಡಿದ್ದಾರೆ.
ಡೆತ್ ನೋಟ್ನಲ್ಲೂ ಪತ್ನಿಗೆ ಅನಂತರಾಜು ಕ್ಷಮೆಯಾಚಿಸಿದ್ದು, ಸದ್ಯ ಡೆತ್ ನೋಟ್ ಆಧಾರದಲ್ಲಿ ಬ್ಯಾಡರಹಳ್ಳಿ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಹನಿಟ್ರ್ಯಾಪ್ ಗ್ಯಾಂಗ್ ತಲಾಶ್ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಕಮಲ್ ಪಂತ್ ವರ್ಗಾವಣೆ.. ಬೆಂಗಳೂರು ನಗರ ಪೊಲೀಸ್ ಆಯುಕ್ತರಾಗಿ ಪ್ರತಾಪ್ ರೆಡ್ಡಿ ನೇಮಕ