ಬೆಂಗಳೂರು: ನನ್ನ ತಿಳುವಳಿಕೆ ಪ್ರಕಾರ ಸುದೀರ್ಘ ರಾಜಕಾರಣದಲ್ಲಿ ಇರುವ ಸಿಎಂ ಬಸವರಾಜ ಬೊಮ್ಮಾಯಿ ಮಾಧ್ಯಮದವರಿಗೆ ಹಣದ ಗಿಫ್ಟ್ ಕೊಡುವ ತಪ್ಪು ಮಾಡಿರಲಾರರು ಎಂಬುದು ನನ್ನ ಭಾವನೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಹೇಳಿದರು.
ಬೆಂಗಳೂರಿನ ತಮ್ಮ ನಿವಾಸದಲ್ಲಿ ಮಾತನಾಡಿದ ಅವರು ಪತ್ರಕರ್ತರಿಗೆ ಹಣ ನೀಡಿದ ವಿಚಾರವಾಗಿ ಪ್ರತಿಕ್ರಿಯಿಸಿ, ನನಗೆ ಇದರ ಸಂಪೂರ್ಣ ಮಾಹಿತಿ ಇಲ್ಲ. ಅಲ್ಪ ಮಾಹಿತಿ ಮಾತ್ರ ಇದೆ. ಈ ಬಗ್ಗೆ ನಾನು ಸಿಎಂ ಭೇಟಿ ಮಾಡುತ್ತೇನೆ. ಯಾರಾದರೂ ಸಿಎಂ ಹೆಸರಲ್ಲಿ ಅತಿರೇಕದ ವರ್ತನೆ ತೋರಿಸಿದರೆ ಅದು ಬಹಳ ಗಂಭೀರವಾಗಿ ಆಲೋಚಿಸುವ ಸಂಗತಿಯಾಗಿದೆ. ಅದನ್ನು ಸಿಎಂ ಜೊತೆ ಚರ್ಚಿಸುತ್ತೇನೆ ಎಂದು ತಿಳಿಸಿದರು.
ಇದನ್ನೂ ಓದಿ: ಆಯ್ದ ಪತ್ರಕರ್ತರಿಗೆ ದೀಪಾವಳಿ ಗಿಫ್ಟ್ ಆರೋಪ.. ದೂರು ನೀಡಿದ್ರೆ ಲೋಕಾಯುಕ್ತ ತನಿಖೆ ಮಾಡುತ್ತೆ: ಸಚಿವ ಆರಗ
ಮೀಸಲಾತಿ ವಿಚಾರದಲ್ಲಿ ನಮಗೂ ಕ್ರೆಡಿಟ್ ಬರಬೇಕೆಂಬ ಮಾಜಿ ಸಿಎಂ ಹೆಚ್ಡಿ ಕುಮಾರಸ್ವಾಮಿ ಹೇಳಿಕೆಗೆ ಪ್ರತಿಯಿಸಿದ ಅವರು, ಗಂಡೆದೆ ಅಂದ ಕೂಡಲೇ ಕಾಂಪಿಟೇಷನ್ ಅಂತ ಅಂದುಕೊಳ್ಳಬಾರದು. ಕುಮಾರಸ್ವಾಮಿ ಅವರ ಕಾಲದಲ್ಲಿ ಮಾಡಿದರೆ, ಅವರನ್ನೂ ಹೊಗಳುತ್ತಿದ್ದರು. ಮೀಸಲಾತಿ ಕೊಡದಿದ್ದರೆ, ವಿಪಕ್ಷಗಳನ್ನು ಯಾರೂ ಬೈಯಲ್ಲ. ಆಡಳಿತ ಪಕ್ಷದ ವಿರುದ್ಧವೇ ಬೈಯ್ಯೋದು. ಕೊಟ್ಟಾಗ ಕ್ರೆಡಿಟ್ ಬರೋದು ಕೂಡ ಆಡಳಿತ ಪಕ್ಷಕ್ಕೆ ಎಂದು ಹೇಳಿದರು.
ಸಾಲ ಮನ್ನಾ ವಿಚಾರದಲ್ಲಿ ನಾನು ಮಾಡಿದ್ದು ಅಂತ ಹೆಚ್ಡಿಕೆ ಕ್ರೆಡಿಟ್ ತಗೋಳ್ತಾರೆ. ಈಗ ಹಲವು ಸ್ವಾಮೀಜಿ ಮೀಸಲಾತಿ ಕೇಳುತ್ತಿದ್ದಾರೆ. ಈಗ ಕ್ರೆಡಿಟ್ ಬಯಸೋರು, ಮತ್ತೊಂದರಲ್ಲೂ ಕ್ರೆಡಿಟ್ ಪಾಲುದಾರರಾಗಿ. ಎರಡರಲ್ಲೂ ಕ್ರೆಡಿಟ್ ಪಡೆಯಬೇಕು. ಆಡಳಿತ ಪಕ್ಷದ ಜೊತೆ ವಿಪಕ್ಷಗಳು ಕೂಡ ಜವಾಬ್ದಾರಿ ಇರುವವರೇ ಎಂದು ತಿರುಗೇಟು ನೀಡಿದರು.
ಹಣ ಕೊಡೋದು ಹಣ ಪಡೆಯೋದು ಎರಡೂ ತಪ್ಪೇ: ಪೋಸ್ಟ್ಗಾಗಿ ಹಣ ಪಡೆದಿರುವ ಸಂಬಂಧ ಹೆಚ್ಡಿಕೆ ಟ್ವೀಟ್ ವಿಚಾರವಾಗಿ ಮಾತನಾಡಿದ ಸಿಟಿ ರವಿ, ನಾನು ಟ್ವೀಟ್ ಗಮನಿಸಿದೆ. ಎಂಟಿಬಿ ನಾಗರಾಜ್ ಯಾಕೆ ಹೇಳಿದ್ದಾರೆ ಗೊತ್ತಿಲ್ಲ. ಪೋಸ್ಟ್ ಗಾಗಿ ಹಣ ಕೊಡೋದು, ಹಣ ಪಡೆಯೋದು ಎರಡೂ ತಪ್ಪೇ ಎಂದು ಹೇಳಿದರು.
ಎಂಟಿಬಿ ನಾಗರಾಜ್ ಅವರಿಗೆ ಈ ವಿಚಾರ ಗೊತ್ತಿದ್ರೆ ಅವರು ಮಾಹಿತಿ ಕೊಡಲಿ. ಇಲ್ಲದಿದ್ರೆ ಅದು ಸರ್ಕಾರದ ವಿರುದ್ಧ ವಿಪಕ್ಷಗಳಿಗೆ ಆಹಾರ ಆಗಲಿದೆ. ಅವರ ಬಳಿ ಅದರ ಮಾಹಿತಿ ಇದ್ದಲ್ಲಿ ಸರ್ಕಾರಕ್ಕೆ ಕೊಡಲಿ. ಲೋಕಾಯುಕ್ತ, ನ್ಯಾಯಾಲಯಕ್ಕೂ ಮಾಹಿತಿ ಕೊಡಬಹುದು. ಇದನ್ನು ಲಘುವಾಗಿ ಪರಿಗಣಿಸಲ್ಲ. ನಾನು, ರಾಜ್ಯಾಧ್ಯಕ್ಷರು ಮತ್ತೆ ಪಕ್ಷದ ವೇದಿಕೆಯಲ್ಲಿ ಚರ್ಚೆ ಮಾಡುತ್ತೇವೆ ಎಂದರು.
ಸಂಪುಟ ವಿಸ್ತರಣೆ ವಿಚಾರವಾಗಿ ಪ್ರತಿಕ್ರಿಯಿಸಿ, ಮೂಲ ಯಾರು, ಬೇರೆ ಯಾರು ಅಂತ ಯಾವ ದೃಷ್ಟಿಯಿಂದ ನೋಡಿಯುತ್ತಿರೋದು ಗೊತ್ತಿಲ್ಲ. ಕಟೀಲ್ ಮೂಲ ಯಾವುದು, ಯಡಿಯೂರಪ್ಪ ಮೂಲ ಯಾವುದು ಅಂತ ಹುಡುಕೋಕಾಗುತ್ತಾ?. ಎದೆ ಬಗೆದು ನೋಡೋಕೆ ಸಾಧ್ಯವಾ?. ಬೊಮ್ಮಾಯಿ ಬಂದು ಹಲವು ವರ್ಷವಾಯ್ತು, ಹೊರಗಿನವರು ಅಂತ ನೋಡಲು ಸಾಧ್ಯವಿದೆಯಾ ಎಂದು ಪ್ರಶ್ನಿಸಿದರು.
ಟಿಆರ್ಎಸ್ ನಾಟಕ ಕಂಪನಿ: ಮೂರು ಉಪಚುನಾವಣೆಯಲ್ಲಿ ತೆಲಂಗಾಣದ ಟಿಆರ್ಎಸ್ ಸೋತಿದೆ. ಮತ್ತೆ ಯಾವುದೇ ಕಾರಣಕ್ಕೂ ಟಿಆರ್ಎಸ್ ಅಧಿಕಾರಕ್ಕೆ ಬರುವುದಿಲ್ಲ ಎಂಬ ಮುನ್ಸೂಚನೆ ಇದೆ. ಜನರೇ ಟಿಆರ್ಎಸ್ಅನ್ನು ತಿರಸ್ಕಾರ ಮಾಡಲು ಹೊರಟಿದ್ದಾರೆ. ಅವರೇ ಹೊಸ ಹೊಸ ಐಡಿಯಾ ಮೂಲಕ ಸುದ್ದಿಯಲ್ಲಿ ಇರಲು ಬಯಸುತ್ತಾರೆ. ಇದೊಂದು ಹೊಸ ನಾಟಕ ಎಂದು ರವಿ ಕಿಡಿಕಾರಿದರು.
ಶಾಸಕರ ಖರೀದಿ ಯತ್ನದ ಆರೋಪದ ಬಗ್ಗೆ ಸಮಗ್ರ ತನಿಖೆಯಾದರೆ ಈ ಡ್ರಾಮಾ ಯಾರು ಮಾಡಿದ್ದಾರೆ?. ಡ್ರಾಮದ ಹಿಂದೆ ಇರುವ ನಿರ್ಮಾಪಕರು ಯಾರು?. ಡೈರೆಕ್ಟರ್ ಯಾರು? ಎಂಬುದು ಎಲ್ಲವೂ ಗೊತ್ತಾಗುತ್ತದೆ. ಅದೆಲ್ಲವೂ ಟಿಆರ್ಎಸ್ ಪ್ರಾಯೋಜಿತ ಡ್ರಾಮ. 'ಈ ನಾಟಕ ಕಂ'. ಬೇರೆ ಬೇರೆ ಪಾತ್ರ ಹಾಕಿದ ತಕ್ಷಣ ಪಾತ್ರದಾರಿ ಬದಲಾಗಲು ಸಾಧ್ಯವಿಲ್ಲ. ಪಾತ್ರದ ಹಿಂದೆ ಇರುವ ಪಾತ್ರಧಾರಿ ಯಾರು ಎಂಬುದನ್ನು ತೆಲಂಗಾಣದ ಜನ ಗುರುತಿಸಿದ್ದಾರೆ ಎಂದು ಹೇಳಿದರು.
ಇದನ್ನೂ ಓದಿ: ಟಿಆರ್ಎಸ್ ಶಾಸಕ ಖರೀದಿ ಯತ್ನ ಆರೋಪ ಪ್ರಕರಣ: ತನಿಖೆಗೆ ಹೈಕೋರ್ಟ್ ತಡೆ