ಬೆಂಗಳೂರು: 2023ರಲ್ಲಿ ನಡೆಯಲಿರುವ ರಾಜ್ಯ ವಿಧಾನಸಭಾ ಚುನಾವಣಾ ಅಖಾಡಕ್ಕೆ ಬಿಜೆಪಿ ಹೈಕಮಾಂಡ್ ರಂಗ ಪ್ರವೇಶ ಮಾಡಿದ್ದು, ತಿಂಗಳಿಗೊಮ್ಮೆ ರಾಜ್ಯಕ್ಕೆ ಭೇಟಿ ನೀಡುವ ಕುರಿತು ರಾಜ್ಯ ಘಟಕ ಮಾಡಿದ್ದ ಬೇಡಿಕೆಯನ್ನು ಪುರಸ್ಕರಿಸಿದೆ ಅದರ ಭಾಗವಾಗಿ ಇಂದು ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಿದ್ದಾರೆ.
ಚುನಾವಣಾ ವರ್ಷವಾಗಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮತ್ತೆ ಕಮಲ ಅರಳಿಸಲು ರಾಜ್ಯ ಬಿಜೆಪಿ ನಾಯಕರು ಹೈಕಮಾಂಡ್ ಮೊರೆ ಹೋಗಿದ್ದಾರೆ. ಕೇಂದ್ರದ ನಾಯಕರನ್ನು ಮುಂದಿಟ್ಟುಕೊಂಡು ಚುನಾವಣೆಗೆ ಸಜ್ಜಾಗುತ್ತಿದ್ದಾರೆ. ಅದಕ್ಕಾಗಿಯೇ ಕೇಂದ್ರದ ನಾಯಕರನ್ನು ಕರೆ ತಂದು ಸಮಾವೇಶಗಳನ್ನು ಮಾಡುವ ಪ್ರಯತ್ನ ಆರಂಭಿಸಿದ್ದು, ಇದಕ್ಕೆ ಹೈಕಮಾಂಡ್ ನಾಯಕರು ಒಪ್ಪಿಗೆ ನೀಡಿದ್ದಾರೆ.
ಕಳೆದ ಜೂನ್ 20ರಂದು ಬೆಂಗಳೂರಿಗೆ ಭೇಟಿ ನೀಡಿದ್ದ ಪ್ರಧಾನಿ ಮೋದಿ ಉಪನಗರ ರೈಲ್ವೆ ಯೋಜನೆ ಸೇರಿ ಹಲವು ಕಾರ್ಯಕ್ರಮಗಳ ಶಂಕುಸ್ಥಾಪನೆ, ಉದ್ಘಾಟನೆ ನೆರವೇರಿಸಿದ್ದರು. ಅದಾದ ಬೆನ್ನಲ್ಲೇ ಆಗಸ್ಟ್ 4 ರಂದು ಅಮಿತ್ ಶಾ ಬೆಂಗಳೂರಿಗೆ ಬಂದಿದ್ದರು. ಚಿತ್ರದುರ್ಗದಲ್ಲಿ ಸಹಕಾರಿ ಸಮಾವೇಶದಲ್ಲಿ ಭಾಗಿಯಾಗಿದ್ದರು.
ಇದೆಲ್ಲಾ ಚುನಾವಣಾ ಸಿದ್ದತೆಯ ನಿಮಿತ್ತ ನಡೆದ ಕಾರ್ಯಕ್ರಮಗಳು ಎನ್ನುವುದರಲ್ಲಿ ಎರಡು ಮಾತಿಲ್ಲ, ಈಗ ಅದರ ಮುಂದುವರಿದ ಭಾಗವಾಗಿ ಪ್ರಧಾನಿ ನರೇಂದ್ರ ಮೋದಿ ಇಂದು ರಾಜ್ಯಕ್ಕೆ ಭೇಟಿ ನೀಡಿದ್ದು, ಮಂಗಳೂರಿನಲ್ಲಿ ವಿವಿಧ ಯೋಜನೆಗಳಿಗೆ ಚಾಲನೆ ನೀಡಿದ್ದಾರೆ. ಕಳೆದ ಎರಡೂವರೆ ತಿಂಗಳಿನಲ್ಲಿ ಮೋದಿ ರಾಜ್ಯಕ್ಕೆ ಬರುತ್ತಿರುವುದು ಇದು ಎರಡನೇ ಬಾರಿಯಾಗಿದೆ.
ಇನ್ನು ಮೋದಿ ಭೇಟಿಯ ವಾರದಲ್ಲೇ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ರಾಜ್ಯಕ್ಕೆ ಆಗಮಿಸಲಿದ್ದಾರೆ. ಸೆಪ್ಟೆಂಬರ್ 8 ರಂದು ದೊಡ್ಡಬಳ್ಳಾಪುರದಲ್ಲಿ ಬಿಜೆಪಿ ಜನೋತ್ಸವ ಸಮಾರಂಭ ನಡೆಯಲಿದ್ದು, ಜೆಪಿ ನಡ್ಡಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ. ಸರ್ಕಾರದ ಸಾಧನೆಯನ್ನು ಹಾಡಿ ಹೊಗಳಲಿದ್ದು, ಮತ್ತೊಮ್ಮೆ ಬಿಜೆಪಿ ಸರ್ಕಾರ ತರುವಂತೆ ಕಾರ್ಯಕರ್ತರಿಗೆ ಕರೆ ನೀಡಲಿದ್ದಾರೆ.
ಇದಕ್ಕೂ ಒಂದೂವರೆ ತಿಂಗಳ ಹಿಂದೆ ಜೂನ್ 18 ರಂದು ಕೂಡ ನಡ್ಡಾ ರಾಜ್ಯಕ್ಕೆ ಭೇಟಿ ನೀಡಿದ್ದರು. ಚಿತ್ರದುರ್ಗದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಭಾಗವಹಿಸಿದ್ದರು. ಜೊತೆಗೆ ಮುರುಘಾ ಮಠಕ್ಕೂ ಭೇಟಿ ನೀಡಿದ್ದರು.
ಕಳೆದ ಮೂರು ತಿಂಗಳಿನಿಂದ ಹೈಕಮಾಂಡ್ ನಾಯಕರಾದ ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹ ಸಚಿವ ಅಮಿತ್ ಶಾ, ರಾಷ್ಟ್ರೀಯ ಅಧ್ಯಕ್ಷ ಜೆಪಿ ನಡ್ಡಾ ಪದೇ ಪದೆ ರಾಜ್ಯಕ್ಕೆ ಭೇಟಿ ನೀಡಿ ರಾಜ್ಯ ಘಟಕಕ್ಕೆ ಟಾನಿಕ್ ನೀಡುತ್ತಿದ್ದಾರೆ. ಇದು ರಾಜ್ಯ ಬಿಜೆಪಿಗೆ ಹೊಸ ಹುಮ್ಮಸ್ಸು ತರುತ್ತಿದೆ. ಹಿಂದೂಪರ ಕಾರ್ಯಕರ್ತರ ಹತ್ಯೆ ಘಟನೆಯಿಂದ ಸ್ವಪಕ್ಷೀಯ ಕಾರ್ಯಕರ್ತರಿಂದಲೇ ಆಕ್ರೋಶಕ್ಕೆ ಗುರಿಯಾಗಿದ್ದ ಸರ್ಕಾರ ಮತ್ತು ಪಕ್ಷದ ನಾಯಕರಿಗೆ ಇದೀಗ ಹೈಕಮಾಂಡ್ ನಾಯಕರ ಭೇಟಿ ಸ್ವಲ್ಪ ರಿಲೀಫ್ ನೀಡಿದಂತಾಗಿದೆ.
ಶತಾಯ ಗತಾಯ ರಾಜ್ಯದಲ್ಲಿ ಬಿಜೆಪಿ ಸರ್ಕಾರವನ್ನು ಮರಳಿ ಅಧಿಕಾರಕ್ಕೆ ತರಬೇಕು ಎನ್ನುವುದಕ್ಕಾಗಿ ಹೈಕಮಾಂಡ್ ನಾಯಕರು ರಾಜ್ಯ ನಾಯಕರಿಗೆ ಟಾಸ್ಕ್ ನೀಡಿದ್ದು, ಅದಕ್ಕೆ ಪೂರಕವಾಗಿ ರಾಜ್ಯದ ನಾಯಕರು ಹೈಕಮಾಂಡ್ ನಾಯಕರಿಗೆ ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಲು ಮನವಿ ಮಾಡಿದ್ದಾರೆ. ಅದಕ್ಕೆ ಮಾಜಿ ಸಿಎಂ ಯಡಿಯೂರಪ್ಪ ಕೂಡ ದನಿಗೂಡಿಸಿದ್ದಾರೆ.
ಯಡಿಯೂರಪ್ಪ ಕೂಡ ಪ್ರತಿ ತಿಂಗಳು ರಾಜ್ಯಕ್ಕೆ ಭೇಟಿ ನೀಡಿದರೆ ಅನುಕೂಲ ಆಗಲಿದೆ. ಹಾಗಾಗಿ ಚುನಾವಣೆವರೆಗೂ ಹೆಚ್ಚು ಹೆಚ್ಚು ಭೇಟಿ ನೀಡುವಂತೆ ಮನವಿ ಮಾಡಿದ್ದು, ಯಡಿಯೂರಪ್ಪ ಅವರು ಕೇಂದ್ರ ಸಂಸದೀಯ ಮಂಡಳಿ ಸದಸ್ಯರಾದ ನಂತರ ಹೈಕಮಾಂಡ್ ನಾಯಕರ ಭೇಟಿ ಮಾಡಿದ್ದ ವೇಳೆಯೂ ಈ ಪ್ರಸ್ತಾಪ ಮಾಡಿದ್ದರು. ಈ ಭೇಟಿಯಾಗುತ್ತಿದ್ದಂತೆ ಮೋದಿ, ನಡ್ಡಾ ರಾಜ್ಯಕ್ಕೆ ಬರುತ್ತಿದ್ದಾರೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಮತ್ತೊಮ್ಮೆ ಕಮಲ ಅರಳಲು ಹೈಕಮಾಂಡ್ ನಾಯಕರು ತಿಂಗಳಿಗೊಮ್ಮೆ ರಾಜ್ಯ ಪ್ರವಾಸಕ್ಕೆ ಮುಂದಾಗಿದ್ದು, ಚುನಾವಣಾ ಸಿದ್ದತೆಯನ್ನು ಕೇಸರಿ ಪಡೆ ಭರ್ಜರಿಯಾಗಿ ಆರಂಭಿಸಿದೆ.
ಇದನ್ನೂ ಓದಿ: ಡಬಲ್ ಇಂಜಿನ್ ಸರ್ಕಾರ ಅಭಿವೃದ್ಧಿಯೊಂದಿಗೆ ಮುನ್ನಡೆಯುತ್ತಿದೆ: ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭಾಷಣ