ಬೆಂಗಳೂರು : ಮುಂಬರುವ ವಿಧಾನಸಭಾ ಚುನಾವಣೆಗೂ ಮುನ್ನ ಹಿಂದುಳಿದ ವರ್ಗದ ನಾಯಕ, ಮಾಜಿ ಸಿಎಂ ಸಿದ್ದರಾಮಯ್ಯ ಅವರ ಶಕ್ತಿಯನ್ನು ಕುಗ್ಗಿಸಲು ಮಾಸ್ಟರ್ ಪ್ಲಾನ್ ರೂಪಿಸಿರುವ ಬಿಜೆಪಿ ಸರ್ಕಾರ ಇದೀಗ ಮೀಸಲಾತಿ ಬಯಸುತ್ತಿರುವ ಹಲವು ಲಿಂಗಾಯತ ಒಳಪಂಗಡಗಳನ್ನು 2 ಎ ಪ್ರವರ್ಗಕ್ಕೆ ಸೇರಿಸಲು ಮುಂದಾಗಿದೆ.
ಆರ್ಥಿಕವಾಗಿ ದುರ್ಬಲರಾಗಿರುವ ತಮ್ಮನ್ನು ಹಿಂದುಳಿದ ವರ್ಗಗಳ ಪ್ರವರ್ಗ 2 ಎ ಗೆ ಸೇರಿಸಬೇಕು ಎಂದು ಪಂಚಮಸಾಲಿ ಲಿಂಗಾಯತರು ಸರ್ಕಾರದ ಮುಂದೆ ಬೇಡಿಕೆಯಿಟ್ಟು ಹಲವು ತಿಂಗಳಿಂದ ಹೋರಾಡುತ್ತಿದ್ದು, ಅದನ್ನು ಒಪ್ಪಲು ಬಿಜೆಪಿ ಸರ್ಕಾರ ಸಜ್ಜಾಗಿದೆ ಎಂದು ಉನ್ನತ ಮೂಲಗಳಿಂದ ತಿಳಿದುಬಂದಿದೆ. ಅದೇ ರೀತಿ ಇನ್ನೂ ಕೆಲ ಲಿಂಗಾಯತ ಒಳಪಂಗಡಗಳು ತಮಗೆ ಮೀಸಲಾತಿಯ ಲಾಭ ಸಿಗಬೇಕು ಎಂದು ಬೇಡಿಕೆ ಮುಂದಿಟ್ಟಿದ್ದು, ಇವನ್ನೂ ಪೂರಕವಾಗಿ ಪರಿಗಣಿಸಲು ಸರ್ಕಾರ ಸಜ್ಜಾಗಿದೆ.
ಲಿಂಗಾಯತ ಮತ ಬ್ಯಾಂಕ್ನ ಪ್ರಮುಖ ಷೇರುದಾರರಾದ ಪಂಚಮಸಾಲಿ ಲಿಂಗಾಯತರು ಸ್ವಾಮೀಜಿಗಳ ನೇತೃತ್ವದಲ್ಲಿ ಹೋರಾಟ ನಡೆಸುತ್ತಲೇ ಬಂದಿದೆ. ಇದನ್ನು ಪರಿಗಣಿಸಿದಂತೆಯೂ ಆಗಬೇಕು, ಅದೇ ಕಾಲಕ್ಕೆ ಅಹಿಂದ ನಾಯಕರೆನಿಸಿರುವ ಸಿದ್ದರಾಮಯ್ಯ ಅವರ ಬೆನ್ನ ಹಿಂದಿನ ಶಕ್ತಿ ದುರ್ಬಲವಾಗಬೇಕು ಎಂಬುದು ಬಿಜೆಪಿಯ ಹೊಸ ಮಾಸ್ಟರ್ ಪ್ಲಾನ್ ಆಗಿದೆ ಎನ್ನಲಾಗುತ್ತಿದೆ.
ಕೋಪ ತಣಿಸಲು ಮೀಸಲಾತಿ : ಈಗಾಗಲೇ ನಾಯಕತ್ವದ ವಿಷಯದಲ್ಲಿ ಬಿಜೆಪಿ ತೋರುತ್ತಿರುವ ಅಸಡ್ಡೆಯಿಂದ ಪಂಚಮಸಾಲಿ ಲಿಂಗಾಯತರು ಅಸಮಾಧಾನಗೊಂಡಿದ್ದು, ಈಗ ಅವರ ಬೇಡಿಕೆಯನ್ನು ಈಡೇರಿಸಿದರೆ ಸಹಜವಾಗಿಯೇ ಅವರ ಕೋಪ ತಣ್ಣಗಾಗುತ್ತದೆ. ಇದೇ ರೀತಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿಯನ್ನು ಬೆಂಬಲಿಸುವ ಮನಃಸ್ಥಿತಿಗೆ ಅದು ಬರುತ್ತದೆ ಎಂಬುದು ಲೆಕ್ಕಾಚಾರ.
ಈ ಮಧ್ಯೆ ಪಂಚಮಸಾಲಿ ಲಿಂಗಾಯತರಿಗೆ ಇಂತಹ ಸೌಲಭ್ಯ ನೀಡಿದರೆ ಹಿಂದುಳಿದ ಮತಬ್ಯಾಂಕ್ನಲ್ಲಿ ವಿರೋಧ ವ್ಯಕ್ತವಾಗಬಹುದಾದರೂ ಅದರ ಗಣನೀಯ ಪ್ರಮಾಣದ ಷೇರುಗಳು ಸಿದ್ದರಾಮಯ್ಯ ಅವರ ಬೆನ್ನ ಹಿಂದಿರುವುದರಿಂದ ತಮಗೇನೂ ನಷ್ಟವಿಲ್ಲ ಎಂಬುದು ಬಿಜೆಪಿ ಲೆಕ್ಕಾಚಾರ.
ಕುರುಬ ಸಮುದಾಯಕ್ಕಿಲ್ಲ ಮೀಸಲಾತಿ: ಈ ಮಧ್ಯೆ ತಮ್ಮನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಬೇಕು ಎಂಬ ಕುರುಬ ಸಮುದಾಯದ ಬೇಡಿಕೆಯನ್ನು ಮಾತ್ರ ಒಪ್ಪದೇ ಇರಲು ಬಿಜೆಪಿ ಯೋಚಿಸಿದೆ. ಯಾಕೆಂದರೆ ಕುರುಬ ಸಮುದಾಯವನ್ನು ಪರಿಶಿಷ್ಟ ಪಂಗಡದ ಪಟ್ಟಿಗೆ ಸೇರಿಸಿದರೆ, ಈಗಾಗಲೇ ತಮಗೆ ಗಣನೀಯ ಬೆಂಬಲ ನೀಡುತ್ತಿರುವ ಪರಿಶಿಷ್ಟ ಪಂಗಡ ವಿರೋಧಿಸುತ್ತದೆ.
ಕುರುಬ ಸಮುದಾಯ ಮತಕ್ಕೆ ಬಿಜೆಪಿ ನಿರಾಸಕ್ತಿ : ಆದರೆ ಮುಂದಿನ ಚುನಾವಣೆಯ ವೇಳೆಗೆ ಅದರ ವಿರೋಧವನ್ನು ಕಟ್ಟಿಕೊಳ್ಳುವುದು ತನಗೆ ಭಾರವಾಗಬಹುದು ಎಂಬುದು ಬಿಜೆಪಿ ಯೋಚನೆ. ಈ ಮಧ್ಯೆ ಕುರುಬ ಮತಬ್ಯಾಂಕಿನ ಗಣನೀಯ ಪ್ರಮಾಣದ ಮತಗಳು ಸಿದ್ದರಾಮಯ್ಯ ಅವರ ಬೆನ್ನ ಹಿಂದಿದ್ದು, ಭವಿಷ್ಯದಲ್ಲಿ ಅವರು ಮುಖ್ಯಮಂತ್ರಿಯಾಗಬೇಕು ಎಂಬ ಆಕಾಂಕ್ಷೆ ಹೊಂದಿರುವುದರಿಂದ ಕುರುಬ ಸಮುದಾಯದ ಬೇಡಿಕೆಯನ್ನು ಈಡೇರಿಸುವ ವಿಷಯದಲ್ಲಿ ಬಿಜೆಪಿಗೆ ಉತ್ಸುಕತೆ ವಹಿಸಿಲ್ಲ.
ಕ್ಲೀನ್ ಚೀಟ್ ಸಿಕ್ಕಿದರೂ ಈಶ್ವರಪ್ಪನಿಗೆ ಸಿಗದ ಸ್ಥಾನ : ಒಂದು ವೇಳೆ ಇದ್ದಿದ್ದರೆ ಅದು ಈಗ ಸಂಪುಟದಿಂದ ಹೊರಬಿದ್ದಿರುವ ಹಿರಿಯ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ತ್ವರಿತವಾಗಿ ಸಂಪುಟಕ್ಕೆ ಮರಳಿ ಸೇರಿಸಿಕೊಳ್ಳಲು ಬಯಸುತ್ತಿತ್ತು. ಆದರೆ ಕುರುಬ ಸಮುದಾಯದ ಗಣನೀಯ ಪ್ರಮಾಣದ ಮತಗಳು ಸಿದ್ದರಾಮಯ್ಯ ಅವರನ್ನು ಬಿಟ್ಟು ಬಿಜೆಪಿ ಕಡೆ ಬರುವ ಲಕ್ಷಣಗಳು ಕಾಣುತ್ತಿಲ್ಲ. ಹೀಗಾಗಿ ಈಶ್ವರಪ್ಪ ಅವರನ್ನು ಸಂಪುಟಕ್ಕೆ ಸೇರಿಸಿಕೊಂಡರೂ ಪ್ರಯೋಜನ ಕಡಿಮೆ ಎಂಬುದು ಅದರ ಲೆಕ್ಕಾಚಾರದ ಭಾಗವಾಗಿದೆ ಎಂದು ಹೇಳಲಾಗುತ್ತಿದೆ.
ಲಿಂಗಾಯತ, ಪಪಂ ಮತ್ತು ಪಜಾ ಮೂಲಕ ಚುನಾವಣೆಗೆ : ಈಗಾಗಲೇ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದ ಮೀಸಲಾತಿಯ ಪ್ರಮಾಣವನ್ನು ಹೆಚ್ಚಿಸಿರುವ ಬಿಜೆಪಿ ಸರ್ಕಾರ ಆ ಮೂಲಕ ಪರಿಶಿಷ್ಟರ ಮತ ಬ್ಯಾಂಕಿನ ಮೇಜರ್ ಷೇರು ತನಗೆ ದಕ್ಕುತ್ತದೆ ಎಂದು ಭಾವಿಸಿದೆ. ಇದೇ ಕಾಲಕ್ಕೆ ಪಂಚಮಸಾಲಿಗಳು ಸೇರಿದಂತೆ ಲಿಂಗಾಯತ ಒಳಪಂಗಡಗಳ ಬೇಡಿಕೆಯನ್ನು ಈಡೇರಿಸಿದರೆ ದಲಿತ ಪ್ಲಸ್ ಲಿಂಗಾಯತ ಮತಬ್ಯಾಂಕ್ ಏಕತ್ವಗೊಂಡು 2022 ರ ವಿಧಾನಸಭಾ ಚುನಾವಣೆಯಲ್ಲಿ ತನ್ನನ್ನು ಮರಳಿ ಅಧಿಕಾರದ ಗದ್ದುಗೆಗೇರಿಸುತ್ತದೆ ಎಂದು ಬಿಜೆಪಿ ಲೆಕ್ಕ ಹಾಕಿದೆ.
ಈ ಬೆಳವಣಿಗೆ ಸಹಜವಾಗಿಯೇ ಭಾರೀ ಕುತೂಹಲಕ್ಕೆ ಕಾರಣವಾಗಿದೆ. ಮುಂದಿನ ದಿನಗಳಲ್ಲಿ ಬಿಜೆಪಿ ಸರ್ಕಾರ ಯಾವ ನಿರ್ಧಾರ ತೆಗೆದುಕೊಳ್ಳುತ್ತದೆ ಎಂಬುದು ಕಾದುನೋಡಬೇಕು.
ಇದನ್ನೂ ಓದಿ : ಇಷ್ಟೊಂದು ಸುಳ್ಳು ಹೇಳೋ ಪ್ರಧಾನಿಯನ್ನ ಹಿಂದೆಂದೂ ನೋಡಿಲ್ಲ.. ಸಿದ್ದರಾಮಯ್ಯ