ಬೆಂಗಳೂರು: ಬಿಜೆಪಿಯಲ್ಲಿ ಸದ್ದಿಲ್ಲದೇ ನಡೆಯುತ್ತಿರುವ ಆಂತರಿಕ ಆಪರೇಷನ್ ಮತ್ತೊಂದು ಹಂತ ತಲುಪಿದ್ದು, ಪಕ್ಷದ ಪ್ರಧಾನ ಕಾರ್ಯದರ್ಶಿಯನ್ನೇ ಕಚೇರಿಯಿಂದ ಹೊರಹಾಕುವ ಪ್ರಯತ್ನ ಆರಂಭಗೊಂಡಿದೆ ಎಂದು ಹೇಳಲಾಗ್ತಿದೆ.
ಕಾರ್ಯಾಲಯ ಕಾರ್ಯದರ್ಶಿಯಿಂದ ಮೊದಲುಗೊಂಡು ಮಾಧ್ಯಮ ಸಂಚಾಲಕ ಸೇರಿದಂತೆ ಭದ್ರತಾ ಸಿಬ್ಬಂದಿವರೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ನೇಮಕಗೊಂಡಿದ್ದವರಿಗೆ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಕೊಕ್ ನೀಡಿದ್ದು, ಇದೀಗ ಪ್ರಧಾನ ಕಾರ್ಯದರ್ಶಿಗೂ ಬಿಸಿ ಮುಟ್ಟಿಸಲು ಟೀಂ ಸಂತೋಷ್ ಬಣ ಮುಂದಾಗಿದೆ.
ಸದ್ಯ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆಗಿರುವ ರವಿಕುಮಾರ್ಗೆ ಬಿಜೆಪಿ ಕಚೇರಿಯಿಂದ ಗೇಟ್ ಪಾಸ್ ನೀಡಲು ಸಕಲ ಸಿದ್ಧತೆ ಮಾಡಿಕೊಂಡಿದೆ ಎನ್ನಲಾಗ್ತಿದೆ. ಸಂಘದಿಂದ ಪಕ್ಷಕ್ಕೆ ಬಂದು ಮಹತ್ವದ ಜವಾಬ್ದಾರಿ ನಿರ್ವಹಣೆ ಮಾಡುವವರಿಗೆ ಮಲ್ಲೇಶ್ವರಂ ನಲ್ಲಿರುವ ರಾಜ್ಯ ಬಿಜೆಪಿ ಪ್ರಧಾನ ಕಚೇರಿ ಜಗನ್ನಾಥ ಭವನದ ನಾಲ್ಕನೇ ಮಹಡಿಯಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗಿದೆ. ಬಿಜೆಪಿ ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಪಕ್ಷದ ಕಚೇರಿಯಲ್ಲೇ ವಾಸ್ತವ್ಯಕ್ಕೆ ಅವಕಾಶವಿದೆ. ಅವರಿಗಾಗಿಯೇ ಕೊಠಡಿಗಳನ್ನು ನೀಡಲಾಗಿದ್ದು, ಅದರಂತೆ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಗೂ ಕೊಠಡಿ ನೀಡಲಾಗಿದೆ. ರವಿಕುಮಾರ್ ಬಿಜೆಪಿ ಕಚೇರಿಯಲ್ಲೇ ವಾಸ್ತವ್ಯ ಹೂಡಿದ್ದಾರೆ.
ರಾಷ್ಟ್ರೀಯ ಸಂಘಟನಾ ಪ್ರಧಾನ ಕಾರ್ಯದರ್ಶಿ ಬಿ.ಎಲ್ ಸಂತೋಷ್ ಸೂಚನೆಯಂತೆ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ನಿರ್ದೇಶನದ ಪ್ರಕಾರ ಕಚೇರಿ ಖಾಲಿ ಮಾಡಿ ಎನ್ನುವ ಸಂದೇಶವನ್ನು ತಲುಪಿಸಲಾಗಿದೆ ಎಂದು ಬಿಜೆಪಿ ಆಪ್ತ ಮೂಲಗಳಿಂದ ತಿಳಿದುಬಂದಿದೆ. ಶಾಸಕರಿಗೆ ಶಾಸಕರ ಭವನದಲ್ಲಿ ಕೊಠಡಿ ಕೊಡಲಾಗುತ್ತದೆ ಅದರಂತೆ ನಿಮ್ಮ ಖೋಟಾದ ಕೊಠಡಿ ಪಡೆದುಕೊಂಡು ಅಲ್ಲಿಗೆ ಹೋಗುವಂತೆ ಸೂಚನೆ ನೀಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಎಲ್ಲಾ ಮಾಹಿತಿಯನ್ನು ರವಿಕುಮಾರ್ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗಮನಕ್ಕೆ ತಂದಿದ್ದಾರೆ. ಆದರೆ. ಸಿಎಂ ಯಾವುದೇ ಭರವಸೆ ನೀಡಿಲ್ಲ ಎನ್ನಲಾಗಿದೆ. ಸದ್ಯ ಪಕ್ಷದಲ್ಲಿ ನಡೆಯುತ್ತಿರುವ ಎಲ್ಲ ವಿದ್ಯಮಾನಗಳಿಂದಲೂ ಸಿಎಂ ಬಿಎಸ್ವೈ ಅಂತರ ಕಾಯ್ದುಕೊಂಡಿದ್ದು ತಮ್ಮ ಪರ ಸಿಎಂ ವಕಾಲತ್ತು ವಹಿಸಲಿದ್ದಾರೆ ಎನ್ನುವ ನಿರೀಕ್ಷೆಯಲ್ಲಿದ್ದ ರವಿಕುಮಾರ್ಗೆ ಇದು ನಿರಾಸೆ ಮೂಡಿಸಿದೆ.