ಬೆಂಗಳೂರು: ಜಿಂದಾಲ್ಗೆ ಸರ್ಕಾರಿ ಜಮೀನು ಮಾರಾಟ ಹಾಗೂ ಬರ ನಿರ್ವಹಣೆ ವೈಫಲ್ಯ ಖಂಡಿಸಿ ಎರಡು ದಿನಗಳ ಕಾಲ ಅಹೋರಾತ್ರಿ ಧರಣಿ ನಡೆಸುತ್ತೇವೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ತಿಳಿಸಿದ್ದಾರೆ.
ಡಾಲರ್ಸ್ ಕಾಲೋನಿ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜಿಂದಾಲ್ಗೆ ಭೂಮಿ ಮಾರಾಟ ನಿರ್ಧಾರದ ಮರು ಪರಿಶೀಲನೆ ಮುಖ್ಯಮಂತ್ರಿಗಳು ನಿರ್ಧರಿಸಿದ್ದು ಸ್ವಾಗತಾರ್ಹ. ಆದರೆ, ಜಿಂದಾಲ್ ಕಂಪನಿಗೆ ಭೂಮಿ ಮಾರಾಟವೇ ಬೇಡ ಎಂದು ನಾವು ವಿರೋಧಿಸುತ್ತಿದ್ದು, ಇದರ ವಿರುದ್ಧ ಪ್ರತಿಭಟನೆ ನಡೆಸಲಿದ್ದೇವೆ ಎಂದರು.
ಸರ್ಕಾರ ಮಾರಾಟ ಮಾಡಲು ಮುಂದಾಗಿರುವ ಭೂಮಿಯಲ್ಲಿ ಕೋಟ್ಯಂತರ ಮೌಲ್ಯದ ಕಬ್ಬಿಣ ಅದಿರಿನ ನಿಕ್ಷೇಪಗಳಿವೆ. ಕಬ್ಬಿಣದ ನಿಕ್ಷೇಪ ಕುರಿತು ಸರ್ಕಾರ ತಜ್ಞರಿಂದ ಅಧ್ಯಯನ ನಡೆಸಬೇಕು. ಸಿಎಂ ಭರವಸೆ ಕೊಟ್ಟಿರುವ 45 ಸಾವಿರ ಕೋಟಿ ರೂ. ಸಾಲಮನ್ನಾ ಕೂಡಲೇ ಮಾಡಬೇಕು. ಬರ ನಿರ್ವಹಣೆ ಸಮರ್ಥವಾಗಿ ನಿರ್ವಹಿಸಬೇಕು ಎಂದು ಒತ್ತಾಯಿಸಿದರು. ಈ ಮೊದಲು ಮೂರು ದಿನ ಪ್ರತಿಭಟನೆ ಮಾಡಲು ನಿರ್ಧರಿಸಲಾಗಿತ್ತು. ಆದರೆ, ಜೂನ್16 ರಂದು ನಮ್ಮ ಎಲ್ಲ ಸಂಸದರೂ ದೆಹಲಿಗೆ ಹೋಗುತ್ತಿದ್ದಾರೆ. ಹಾಗಾಗಿ ಜೂನ್ 14 ಮತ್ತು 15 ಇವೆರಡೂ ದಿನ ಧರಣಿ ಮಾಡ್ತಿದ್ದೇವೆ ಅಂತಾ ಯಡಿಯೂರಪ್ಪ ಹೇಳಿದ್ದಾರೆ.