ಬೆಂಗಳೂರು : ರಾಜ್ಯದಲ್ಲಿನ ಶಿಕ್ಷಕರ, ಪದವೀಧರರ ಕ್ಷೇತ್ರದ ಚುನಾವಣೆಗೆ ಬಿಜೆಪಿ ಸಜ್ಜಾಗುತ್ತಿದೆ. ಉಸ್ತುವಾರಿಗಳ ಪಟ್ಟಿ ಬಿಡುಗಡೆ ಮಾಡಲಾಗಿದೆ. ಈಗಾಗಲೇ ಅಭ್ಯರ್ಥಿಗಳ ಆಯ್ಕೆ ಪ್ರಕ್ರಿಯೆ ಮುಗಿದಿರುವ ಹಿನ್ನೆಲೆಯಲ್ಲಿ ಚುನಾವಣಾ ಜವಾಬ್ದಾರಿ ಹಂಚಿಕೆ ಮಾಡಿ ಪ್ರಚಾರ ಕಾರ್ಯಕ್ಕೆ ಅಧಿಕೃತ ಚಾಲನೆ ನೀಡಲಾಗಿದೆ.
ವಾಯವ್ಯ ಶಿಕ್ಷಕರ ಕ್ಷೇತ್ರ, ಪಶ್ಚಿವ ಶಿಕ್ಷಕರ ಕ್ಷೇತ್ರ, ವಾಯವ್ಯ ಪದವೀಧರರ ಕ್ಷೇತ್ರ, ದಕ್ಷಿಣ ಪದವೀಧರರ ಕ್ಷೇತ್ರಕ್ಕೆ ಚುನಾವಣೆ ಘೋಷಣೆಯಾಗುತ್ತಿದ್ದಂತೆ ಬಿಜೆಪಿ ಚುನಾವಣಾ ಅಖಾಡಕ್ಕೆ ಧುಮುಕಿದೆ. ಕ್ಷೇತ್ರದಲ್ಲಿ ಕೆಲಸ ಮಾಡಲು ಸಚಿವರು, ಶಾಸಕರು, ಪದಾಧಿಕಾರಿಗಳ ನೇಮಕ ಮಾಡಿದೆ.
ವಾಯವ್ಯ ಶಿಕ್ಷಕರ ಕ್ಷೇತ್ರ : ಬೆಳಗಾವಿ, ವಿಜಯಪುರ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿ ಒಳಗೊಂಡ ವಾಯವ್ಯ ಶಿಕ್ಷಕರ ಕ್ಷೇತ್ರದ ಜವಾಬ್ದಾರಿ ಹಿರಿಯ ಸಚಿವ ಗೋವಿಂದ ಕಾರಜೋಳ ಅವರಿಗೆ ನೀಡಲಾಗಿದೆ. ಅವರ ತಂಡದಲ್ಲಿ ಪರಿಷತ್ ಸದಸ್ಯರಾದ ಲಕ್ಷ್ಮಣ ಸವದಿ, ವೈ ಎ ನಾರಾಯಣಸ್ವಾಮಿ, ಶಶೀಲ್ ನಮೋಶಿ, ಮಾಜಿ ಎಂಎಲ್ಸಿ, ಮಹಾಂತೇಶ್ ಕವಟಗಿಮಠ ಹಾಗೂ ಶಾಸಕ ಪಿ. ರಾಜೀವ್ ಇರಲಿದ್ದಾರೆ. ತಂಡದ ಸಂಯೋಜಕರನ್ನಾಗಿ ಎಂಎಲ್ಸಿ ಎನ್. ರವಿಕುಮಾರ್ ನೇಮಕ ಮಾಡಲಾಗಿದೆ.
ವಾಯವ್ಯ ಪದವೀಧರರ ಕ್ಷೇತ್ರ : ಬೆಳಗಾವಿ, ವಿಜಯಪುರ, ಚಿಕ್ಕೋಡಿ, ಬಾಗಲಕೋಟೆ ಜಿಲ್ಲೆಯ ವ್ಯಾಪ್ತಿ ಒಳಗೊಂಡಿರುವ ವಾಯವ್ಯ ಪದವೀಧರರ ಕ್ಷೇತ್ರದ ಜವಾಬ್ದಾರಿಯನ್ನು ಶಾಸಕ ಅಭಯ್ ಪಾಟೀಲ್ ಅವರಿಗೆ ವಹಿಸಲಾಗಿದೆ. ಅವರ ತಂಡದಲ್ಲಿ ಎಂಎಲ್ಸಿಗಳಾದ ಚಿದಾನಂದ ಗೌಡ, ಪ್ರತಾಪ್ ಸಿಂಹ ನಾಯಕ್, ಎಂ.ವೈ. ಸತೀಶ್ ಇರಲಿದ್ದಾರೆ. ತಂಡದ ಸಂಯೋಜಕರಾಗಿ ಮಾಜಿ ಎಂಎಲ್ಸಿ ಅಶ್ವತ್ಥ್ ನಾರಾಯಣ ನೇಮಕಗೊಂಡಿದ್ದಾರೆ.
ಪಶ್ಚಿಮ ಶಿಕ್ಷಕರ ಕ್ಷೇತ್ರ : ಹುಬ್ಬಳ್ಳಿ-ಧಾರವಾಡ, ಧಾರವಾಡ ಗ್ರಾಮಾಂತರ, ಗದಗ, ಹಾವೇರಿ, ಉತ್ತರಕನ್ನಡ ಜಿಲ್ಲೆ ವ್ಯಾಪ್ತಿ ಒಳಗೊಂಡಿರುವ ಪಶ್ಚಿಮ ಶಿಕ್ಷಕರ ಕ್ಷೇತ್ರದ ಜವಾಬ್ದಾರಿ ಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಅವರಿಗೆ ವಹಿಸಲಾಗಿದೆ. ಸಚಿವ ಡಾ. ಸಿ.ಎನ್. ಅಶ್ವತ್ಥ್ ನಾರಾಯಣ, ಎಂಎಲ್ಸಿಗಳಾದ ಪ್ರದೀಪ್ ಶೆಟ್ಟರ್, ಡಿ.ಎಸ್. ಅರುಣ್, ಲಿಂಗರಾಜ ಪಾಟೀಲ್, ಭೋಜರಾಜ ಕರೂದಿ, ರವಿ ದಂಡಿನ್ ಇರಲಿದ್ದಾರೆ. ತಂಡದ ಸಂಯೋಜಕರಾಗಿ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್ ಟೆಂಗಿನಕಾಯಿ ನೇಮಕವಾಗಿದ್ದಾರೆ.
ದಕ್ಷಿಣ ಪದವೀಧರರ ಕ್ಷೇತ್ರ : ಮೈಸೂರು, ಚಾಮರಾಜನಗರ, ಹಾಸನ, ಮಂಡ್ಯ ಜಿಲ್ಲೆ ವ್ಯಾಪ್ತಿ ಒಳಗೊಂಡಿರುವ ದಕ್ಷಿಣ ಪದವೀಧರರ ಕ್ಷೇತ್ರದ ಜವಾಬ್ದಾರಿಯನ್ನು ಸಹಕಾರಿ ಸಚಿವ ಎಸ್.ಟಿ. ಸೋಮಶೇಖರ್ ಅವರಿಗೆ ವಹಿಸಲಾಗಿದೆ. ಅವರ ತಂಡದಲ್ಲಿ ಸಚಿವರಾದ ವಿ. ಸೋಮಣ್ಣ, ಕೆ.ಸಿ. ನಾರಾಯಣಗೌಡ, ಕೆ.ಗೋಪಾಲಯ್ಯ, ಶಾಸಕರಾದ ಹೆಚ್.ಎಸ್. ಗೋಪಿನಾಥ ರೆಡ್ಡಿ, ಪ್ರೀತಂ ಗೌಡ, ಎಂಎಲ್ಸಿಗಳಾದ ಎಂ.ಕೆ. ಪ್ರಾಣೇಶ್, ಪುಟ್ಟಣ್ಣ ಅ. ದೇವೇಗೌಡ ಇದ್ದಾರೆ. ತಂಡದ ಸಂಯೋಜಕರಾಗಿ ಸಿದ್ದರಾಜು ನೇಮಕವಾಗಿದೆ.
ಇದನ್ನು ಓದಿ: ವಿಧಾನಪರಿಷತ್, ರಾಜ್ಯಸಭೆಯ ತಲಾ 4 ಸ್ಥಾನಗಳ ಚುನಾವಣೆಗೆ ಮುಹೂರ್ತ ಫಿಕ್ಸ್
ಹೆಚ್ಚುವರಿಯಾಗಿ ಆಯಾ ಜಿಲ್ಲೆಗಳ ಜಿಲ್ಲಾ ಉಸ್ತುವಾರಿ ಸಚಿವರು, ಸಂಸದರು, ಶಾಸಕರು ಮತ್ತು ಉಳಿದ ಎಲ್ಲಾ ಜನಪ್ರತಿನಿಧಿ, ಪಕ್ಷದ ಪ್ರಮುಖರು ಈ ತಂಡಗಳಲ್ಲಿ ಪ್ರಮುಖರಾಗಿರುತ್ತಾರೆ ಎಂದು ಬಿಜೆಪಿ ಪ್ರಕಟಿಸಿದೆ.
ಅಭ್ಯರ್ಥಿ ಆಯ್ಕೆ ಪೂರ್ಣ : ಬಿಜೆಪಿ ವಾಯವ್ಯ ಶಿಕ್ಷಕರ ಕ್ಷೇತ್ರಕ್ಕೆ ಹಾಲಿ ಸದಸ್ಯ ಅರುಣ್ ಶಹಾಪುರ್, ವಾಯವ್ಯ ಪದವೀಧರ ಕ್ಷೇತ್ರಕ್ಕೆ ಹಾಲಿ ಸದಸ್ಯ ಹನುಮಂತ ರುದ್ರಪ್ಪ ನಿರಾಣಿ ಮತ್ತು ದಕ್ಷಿಣ ಪದವೀಧರ ಕ್ಷೇತ್ರಕ್ಕೆ ಎಂ.ವಿ. ರವಿಶಂಕರ್ ಹೆಸರನ್ನು ಘೋಷಣೆ ಮಾಡಿರುವ ಹೈಕಮಾಂಡ್, ಪಶ್ಚಿಮ ಶಿಕ್ಷಕರ ಕ್ಷೇತ್ರಕ್ಕೆ ಅಭ್ಯರ್ಥಿ ಹೆಸರು ಪ್ರಕಟಿಸಿರಲಿಲ್ಲ. ಜೆಡಿಎಸ್ ತೊರೆದು ಬಿಜೆಪಿ ಸೇರಲಿರುವ ಬಸವರಾಜ ಹೊರಟ್ಟಿ ಅವರಿಗೆ ಕ್ಷೇತ್ರದ ಟಿಕೆಟ್ ಕಾಯ್ದಿರಿಸಿದ್ದು, ಪಕ್ಷ ಸೇರ್ಪಡೆ ಬಳಿಕ ಹೆಸರು ಪ್ರಕಟಿಸಲಾಗುತ್ತದೆ. ಹಾಗಾಗಿ, ನಾಲ್ಕೂ ಕ್ಷೇತ್ರಕ್ಕೆ ಈಗ ಅಭ್ಯರ್ಥಿ ಆಯ್ಕೆ ಮಾಡುವ ಗೊಂದಲ ಬಿಜೆಪಿಗೆ ಉಳಿದಿಲ್ಲ, ಇನ್ನೇನಿದ್ದರೂ ಪ್ರಚಾರ ಕಾರ್ಯ ಆರಂಭಿಸಬೇಕಿದೆ.
ಇದನ್ನು ಓದಿ: ಬಿಎಸ್ವೈ ಭೇಟಿ ಮಾಡಿದ ಸಿಎಂ ಬೊಮ್ಮಾಯಿ: ಚುನಾವಣೆ ಕುರಿತು ಉಭಯ ನಾಯಕರ ಚರ್ಚೆ