ಬೆಂಗಳೂರು: ನಾಯಕತ್ವ ಬದಲಾವಣೆ ವದಂತಿಗೆ ತೆರೆ ಎಳೆಯಲು, ಗೊಂದಲ ಸರಿಪಡಿಸಲು ರಾಜ್ಯಕ್ಕೆ ಆಗಮಿಸಿರುವ ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭಗೊಂಡಿದೆ. ಈ ಸಭೆಯಲ್ಲಿ ಎಲ್ಲ ಸಮಸ್ಯೆಗಳಿಗೆ ಪರಿಹಾರಾತ್ಮಕ ನಿರ್ಧಾರವನ್ನು ಕೈಗೊಳ್ಳಲಿದ್ದಾರೆ ಎನ್ನಲಾಗಿದೆ.
ಮಲ್ಲೇಶ್ವರಂನಲ್ಲಿರುವ ಬಿಜೆಪಿ ಕಚೇರಿ ಜಗನ್ನಾಥ ಭವನದಲ್ಲಿ ರಾಜ್ಯ ಬಿಜೆಪಿ ಕೋರ್ ಕಮಿಟಿ ಸಭೆ ಆರಂಭಗೊಂಡಿದೆ. ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ನೇತೃತ್ವದಲ್ಲಿ ನಡೆಯುತ್ತಿರುವ ಸಭೆಯಲ್ಲಿ ಸಮಿತಿ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಸಿಎಂ ಯಡಿಯೂರಪ್ಪ, ಕೇಂದ್ರ ಸಚಿವರಾದ ಪ್ರಲ್ಹಾದ್ ಜೋಶಿ, ಸದಾನಂದ ಗೌಡ, ರಾಜ್ಯ ಸಚಿವರಾದ ಜಗದೀಶ್ ಶೆಟ್ಟರ್, ಕೆ.ಎಸ್.ಈಶ್ವರಪ್ಪ, ಆರ್.ಅಶೋಕ್, ಶ್ರೀರಾಮುಲು, ಡಿಸಿಎಂಗಳಾಗಿರುವ ಗೋವಿಂದ ಕಾರಜೋಳ, ಅಶ್ವತ್ಥ್ ನಾರಾಯಣ್, ಲಕ್ಷ್ಮಣ ಸವದಿ, ವಿಶೇಷ ಆಹ್ವಾನಿತರಾಗಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಸಹ ಪ್ರಭಾರಿ ಡಿ.ಕೆ.ಅರುಣಾ ಭಾಗಿಯಾಗಿದ್ದಾರೆ.
ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಸರಣಿ ಸಭೆ ನಡೆಸಿರುವ ಅರುಣ್ ಸಿಂಗ್, ಸಚಿವರು, ನಾಯಕತ್ವ ಪರ, ವಿರುದ್ಧ ಇರುವ ಶಾಸಕರ ಅಭಿಪ್ರಾಯ ಆಲಿಸಿದ್ದು, ರಾಜ್ಯ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಂತರ ಸಮಸ್ಯೆಗೆ ಪರಿಹಾರ ಸೂಚಿಸುವ ಭಾಗವಾಗಿ ಕೋರ್ ಕಮಿಟಿ ಸಭೆ ನಡೆಸಲಾಗುತ್ತಿದೆ.
ಈಗಾಗಲೇ ನಾಯಕತ್ವ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿರುವ ಹಿನ್ನೆಲೆ ಸಂಪುಟ ಪುನಾರಚನೆ, ವಿಸ್ತರಣೆ, ಕೆಲವರಿಗೆ ಸಚಿವ ಸ್ಥಾನ ನೀಡುವುದು ಹಾಗೂ ಸದ್ಯ ಇರುವ ಗೊಂದಲದ ಬಗ್ಗೆ ಕೋರ್ ಕಮಿಟಿ ಸಭೆಯಲ್ಲಿ ಚರ್ಚೆಯಾಗಲಿದೆ.
ಕೋರ್ ಕಮಿಟಿ ಸಭೆಯ ಅಜೆಂಡಾ:
- ಪಕ್ಷ ಸಂಘಟನೆಗೆ ಚುರುಕು
- ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಯೋಜನೆ ಜಾರಿ ಮತ್ತು ಬೂತ್ ಮಟ್ಟಕ್ಕೆ ತಲುಪಿಸುವ ಬಗ್ಗೆ ಚರ್ಚೆ
- ಕೊರೊನಾ ಸಂಕಷ್ಟದ ಪರಿಹಾರ ಕ್ರಮಗಳನ್ನ ಶೀಘ್ರವಾಗಿ ಜಾರಿ ಮಾಡುವ ಬಗ್ಗೆ ಚರ್ಚೆ
- ತಾಲೂಕು ಪಂಚಾಯಿತಿ ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳಿಗೆ ತಯಾರಿ
- ಮುಂಬರುವ ಎರಡು ಕ್ಷೇತ್ರಗಳ ವಿಧಾನಸಭಾ ಉಪಚುನಾವಣೆಗೆ ತಯಾರಿ
- ರಾಜ್ಯದಲ್ಲಿ ನಡೆಯುತ್ತಿರುವ ಬಿಜೆಪಿ ರಾಜಕೀಯ ನಾಯಕತ್ವ ಬದಲಾವಣೆ ಚರ್ಚೆಗೆ ಇತಿಶ್ರೀ ಹಾಡುವ ಬಗ್ಗೆ
- ಪಕ್ಷ ಮತ್ತು ಸರ್ಕಾರದ ವಿರುದ್ಧ ಹೇಳಿಕೆ ಕೊಡುರುವವರಿಗೆ ಎಚ್ಚರಿಕೆ ಕೊಡುವ ಬಗ್ಗೆ ಸಭೆಯಲ್ಲಿ ಚರ್ಚೆ
- ಪಕ್ಷ ಮತ್ತು ಸರ್ಕಾರದ ನಡುವೆ ಸಮನ್ವಯತೆ ಬಗ್ಗೆ ಚರ್ಚೆ
- ಸಚಿವ ಸಂಪುಟ ಪುನಾರಚನೆ ವಿಚಾರ