ಬೆಂಗಳೂರು: ಆರ್.ಆರ್. ನಗರ ಮತ್ತು ಶಿರಾ ಎರಡೂ ಕ್ಷೇತ್ರಗಳ ಉಪ ಚುನಾವಣೆಗೆ ಬಿಜೆಪಿಯಿಂದ ಸರ್ವಸಮ್ಮತ ಅಭ್ಯರ್ಥಿಯನ್ನೇ ಪಕ್ಷ ಆಯ್ಕೆ ಮಾಡಲಿದೆ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹೇಳಿದ್ದಾರೆ.
ಬಿಜೆಪಿ ಕಾರ್ಯಾಲಯದಲ್ಲಿ ಮಾತನಾಡಿದ ಅವರು ರಾಜ್ಯದ ಕೋರ್ ಕಮಿಟಿ ಅಭ್ಯರ್ಥಿ ಹೆಸರನ್ನು ಶಿಫಾರಸು ಮಾಡಲಿದ್ದು, ಪಕ್ಷದ ಕೇಂದ್ರ ಸಂಸದೀಯ ಮಂಡಳಿ ಅಭ್ಯರ್ಥಿ ಹೆಸರನ್ನು ಅಂತಿಮಗೊಳಿಸಲಿದೆ ಎಂದರು.
ಮಸ್ಕಿ, ಬಸವಕಲ್ಯಾಣ ವಿಧಾನಸಭಾ ಕ್ಷೇತ್ರ ಹಾಗೂ ಬೆಳಗಾವಿ ಲೋಕಸಭಾ ಕ್ಷೇತ್ರಗಳಿಗೆ ಉಪ ಚುನಾವಣೆ ಇದೆ. ಇದರ ಜೊತೆಯಲ್ಲಿ ನಾಲ್ಕು ವಿಧಾನಪರಿಷತ್ ಕ್ಷೇತ್ರಗಳ ಚುನಾವಣೆ ಕೂಡ ಇದೆ. ಬಿಜೆಪಿ ಪ್ರತಿ ಚುನಾವಣೆಯನ್ನೂ ಗಂಭೀರವಾಗಿ ಪರಿಗಣಿಸಲಿದೆ. ಎಲ್ಲಾ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸಲಿದೆ ಎಂದು ಸಚಿವ ರವಿ ಹೇಳಿದರು.
ಯಡಿಯೂರಪ್ಪ ನೇತೃತ್ವದಲ್ಲಿ ಮತ್ತು ನಳಿನ್ ಕುಮಾರ್ ಕಟೀಲ್ ನಾಯಕತ್ವದಲ್ಲಿ ಚುನಾವಣೆ ಗೆಲ್ಲುವ ಮೂಲಕ ಸಾಮರ್ಥ್ಯವನ್ನು ತೋರಿಸಲಿದ್ದೇವೆ. ಮುನಿರತ್ನ ನಮ್ಮ ಪಕ್ಷಕ್ಕೆ ಸೇರಿದ್ದಾರೆ. ಮುನಿರಾಜುಗೌಡ ಪಕ್ಷದ ಹಳೆಯ ಕಾರ್ಯಕರ್ತ. ಯುವ ಮೋರ್ಚಾ ಅಧ್ಯಕ್ಷರಾಗಿ ಕೆಲಸ ಮಾಡಿದವರು. ನಮ್ಮಲ್ಲಿ ಸರ್ವಸಮ್ಮತ ಅಭ್ಯರ್ಥಿಯನ್ನೇ ಆಯ್ಕೆ ಮಾಡಲಾಗುತ್ತದೆ. ಆಕಾಂಕ್ಷಿಗಳು ಹಲವರು ಇರುವುದು ಸ್ವಾಭಾವಿಕ, ಆದರೆ ಆಕಾಂಕ್ಷೆಗಳೆಲ್ಲರೂ ಅಭ್ಯರ್ಥಿಗಳಾಗಲು ಸಾಧ್ಯವಿಲ್ಲ ಎಂದರು.