ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ನೇತೃತ್ವದ ಬಿಜೆಪಿ ಸರ್ಕಾರಕ್ಕೆ ನೂರು ದಿನದ ಸಂಭ್ರಮ ಮತ್ತೊಂದು ಸುತ್ತಿನ ಆಂತರಿಕ ಕಲಹದ ಸ್ಪೋಟಕ್ಕೆ ವೇದಿಕೆಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಸಂಭ್ರಮಕ್ಕೆ ಪಕ್ಷ ಹಾಗು ಸರ್ಕಾರ ಪೈಪೋಟಿಗಿಳಿದಿದ್ದು ಬಿಜೆಪಿಯಲ್ಲಿ ತಲ್ಲಣ ಸೃಷ್ಟಿಸಿದೆ.
ನವೆಂಬರ್ 2ಕ್ಕೆ ಯಡಿಯೂರಪ್ಪ ಸರ್ಕಾರಕ್ಕೆ ನೂರು ದಿನ ತುಂಬುತ್ತಿದೆ. ಇದರ ಸಂಭ್ರಮಾಚರಣೆಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸಿದ್ದತೆ ನಡೆಸುತ್ತಿದ್ದಾರೆ. ಈಗಾಗಲೇ ಹಿರಿಯ ಅಧಿಕಾರಿಗಳಿಗೆ ಸಿಎಂ ನಗರದ ಅರಮನೆ ಮೈದಾನದಲ್ಲಿ ಸರ್ಕಾರದ ಸಾಧನಾ ಸಮಾವೇಶ ಆಯೋಜನೆ ಮಾಡಲು ಸೂಚನೆ ನೀಡಿದ್ದಾರೆ. ನೂರು ದಿನದಲ್ಲಿ ಸರ್ಕಾರ ಯಾವ ರೀತಿ ಜನಪರ ಕೆಲಸ ಮಾಡಿದೆ, ಯಾವೆಲ್ಲಾ ಕಾರ್ಯಕ್ರಮ ಜಾರಿಗೆ ತಂದಿದೆ, ಎಷ್ಟು ಫಲಾನುಭವಿಗಳಿದ್ದಾರೆ, ನೆರೆ ಪರಿಹಾರ ಕಾರ್ಯ ಸೇರಿದಂತೆ ಸರ್ಕಾರದ ಸಾಧನೆ ಅನಾವರಣಗೊಳ್ಳುವಂತೆ ಸಿದ್ದತೆ ನಡೆಸಲು ಸೂಚನೆ ನೀಡಿದ್ದಾರೆ ಎಂದು ತಿಳಿದುಬಂದಿದೆ.
ಇನ್ನು ಬಿಜೆಪಿ ಕೂಡ ಸರ್ಕಾರದ ನೂರು ದಿನದ ಸಂಭ್ರಮಾಚರಣೆ ಕಾರ್ಯಕ್ರಮ ನಡೆಸಲು ಪಟ್ಟುಹಿಡಿದಿದೆ. ಸರ್ಕಾರದಿಂದ ಕಾರ್ಯಕ್ರಮ ಆಯೋಜನೆ ಮಾಡುವುದು ಬೇಡ, ಪಕ್ಷದಿಂದಲೇ ಕಾರ್ಯಕ್ರಮ ನಡೆಸಿ. ಸರ್ಕಾರದ ಸಾಧನೆ ಜನರ ಮುಂದಿಡೋಣ ಎಂದು ಬಿಜೆಪಿಯ ಕೆಲ ನಾಯಕರು ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ಗೆ ಸಲಹೆ ನೀಡಿದ್ದಾರೆ.
ಸರ್ಕಾರದಿಂದ ಸಮಾರಂಭ ನಡೆಸಿದರೆ ಸಾಧನೆಯ ಕ್ರೆಡಿಟ್ ಸಂಪೂರ್ಣವಾಗಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಪಾಲಾಗಲಿದೆ ಎನ್ನುವ ಕಾರಣಕ್ಕೆ ಪಕ್ಷದಿಂದ ಕಾರ್ಯಕ್ರಮ ನಡೆಸಬೇಕು ಎನ್ನುವ ಚಿಂತನೆ ನಡೆಸಿದ್ದಾರೆ ಎನ್ನಲಾಗಿದೆ.
ಈಗಾಗಲೇ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಪಕ್ಷದಿಂದ ಪರೋಕ್ಷವಾಗಿ ದೂರ ಇಡುವ ಕೆಲಸ ವ್ಯವಸ್ಥಿತವಾಗಿ ನಡೆಯುತ್ತಿದ್ದು, ನೂರು ದಿನದ ಸಂಭ್ರಮಾಚರಣೆ ವೇಳೆಯೂ ಸಿಎಂ ಬಲ ಕುಗ್ಗಿಸುವ ಕೆಲಸಕ್ಕೆ ಬಿಎಸ್ವೈ ವಿರೋಧಿ ಬಣ ಮುಂದಾಗಿದೆ ಎನ್ನುವ ಮಾತುಗಳು ಕೇಳಿಬಂದಿವೆ.
ಸದ್ಯ ಸಿಎಂ ಬೆಳಗಾವಿಯಲ್ಲಿದ್ದು, ಎರಡು ದಿನದ ಮಹಾರಾಷ್ಟ್ರ ಪ್ರವಾಸದ ನಂತರ ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ. ನಂತರ ನೂರು ದಿನದ ಸಂಭ್ರಮಾಚರಣೆ ನಡೆಸುವ ಕುರಿತು ಬಿಎಸ್ವೈ ನಿರ್ಧಾರ ಪ್ರಕಟಿಸುವ ಸಾಧ್ಯತೆ ಇದೆ.