ಬೆಂಗಳೂರು: ಬಿಟ್ ಕಾಯಿನ್ ಹಗರಣದ ಮರು ತನಿಖೆ ಆರಂಭಿಸಿರುವ ಸಿಐಡಿಯ ವಿಶೇಷ ತನಿಖಾ ತಂಡ (ಎಸ್ಐಟಿ) ಬೆಂಗಳೂರಿನ 7 ಕಡೆಗಳಲ್ಲಿ ದಾಳಿ ನಡೆಸಿ, ಶೋಧ ಆರಂಭಿಸಿದೆ. ನಗರದ ಬೊಮ್ಮನಹಳ್ಳಿ, ಕೋರಮಂಗಲ ಸೇರಿದಂತೆ ಈ ಹಿಂದೆ ಬಿಟ್ ಕಾಯಿನ್ ಪ್ರಕರಣದ ತನಿಖೆ ನಡೆಸಿದ್ದ ಐವರು ಅಧಿಕಾರಿಗಳಿಗೆ ಸಂಬಂಧಿಸಿದಂತೆ ಏಳು ಕಡೆಗಳಲ್ಲಿ ಎಡಿಜಿಪಿ ಮನೀಶ್ ಕರ್ಬೀಕರ್ ನೇತೃತ್ವದ ತಂಡದಿಂದ ದಾಳಿ ನಡೆಸಲಾಗಿದ್ದು, ಶೋಧ ಕಾರ್ಯ ಮುಂದುವರೆದಿದೆ.
ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್- ಇಬ್ಬರ ಬಂಧನ: ರಾಜ್ಯ ಸರ್ಕಾರದ ಇ-ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ವಂಚಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ಪ್ರಮುಖ ಆರೋಪಿಗಳನ್ನು ಸಿಐಡಿ ಪೊಲೀಸರು ಬಂಧಿಸಿದ್ದಾರೆ. ವಂಚಿಸಿದ ಹಣ ವರ್ಗಾವಣೆಯಾದ ಖಾತೆಗಳ ಮೂಲ ಬೆನ್ನಟ್ಟಿದ ಸಿಐಡಿಯ ವಿಶೇಷ ತನಿಖಾ ತಂಡ ನಾಗಪುರ ಮೂಲದ ನಿತಿನ್ ಮೆಶ್ರಾಮ್ ಮತ್ತು ದರ್ಶಿತ್ ಪಟೇಲ್ ಎಂಬ ಇಬ್ಬರು ಆರೋಪಿಗಳನ್ನು ಬಂಧಿಸಿದೆ. ಬಂಧಿತರಿಗೆ ಆರೋಪಿ, ಹ್ಯಾಕರ್ ಶ್ರೀಕಿ ಜೊತೆ ನಂಟಿರುವುದು ಪತ್ತೆಯಾಗಿದೆ.
ಪ್ರಕರಣದ ಹಿನ್ನೆಲೆ: 2019 ರಲ್ಲಿ ರಾಜ್ಯ ಸರ್ಕಾರದ ಇ - ಪ್ರೊಕ್ಯೂರ್‌ಮೆಂಟ್ ಪೋರ್ಟಲ್ ಹ್ಯಾಕ್ ಮಾಡಿ 11.5 ಕೋಟಿ ರೂಪಾಯಿ ವಂಚಿಸಲಾಗಿತ್ತು. ಪ್ರಕರಣದ ಆರೋಪಿ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ ಆ ಹಣವನ್ನು ಉತ್ತರ ಭಾರತದ ಕೆಲ ವ್ಯಕ್ತಿಗಳ ಖಾತೆಗೆ ಹಾಕಿದ್ದ. ಅಲ್ಲದೇ ಆ ಹಣವನ್ನು ಹವಾಲ ಮೂಲಕ ವರ್ಗಾವಣೆ ಮಾಡಲಾಗಿತ್ತು. ಆರೋಪಿಗಳು ಬೆಂಗಳೂರಿಗೆ ಹವಾಲ ರೂಪದಲ್ಲಿ ಹಣ ತಲುಪಿಸಿದ್ದರು.
ಇದನ್ನೂ ಓದಿ: ಬಿಟ್ ಕಾಯಿನ್ ಪ್ರಕರಣದ ತನಿಖೆಗೆ ತಜ್ಞರ ತಂಡ, ಸೇವಾಶುಲ್ಕ ಭರಿಸಲು ಗರಿಷ್ಠ ₹50 ಲಕ್ಷ ಮಿತಿ
ಹವಾಲ ಮೂಲಕ ಹಣ ವರ್ಗಾವಣೆಗೆ ಸಹಾಯ ಮಾಡಿದ್ದ ಆರೋಪದಡಿ ಇತ್ತೀಚಿಗೆ ಪಂಜಾಬ್ ಮೂಲದ ಆರೋಪಿ ಹರ್ವಿಂದರ್ ಸಿಂಗ್ ಎಂಬಾತನನ್ನು ಬಂಧಿಸಲಾಗಿತ್ತು. ಆದರೆ, ಎಸ್ಐಟಿ ತನಿಖೆ ವೇಳೆ ಬಿಟ್ ಕಾಯಿನ್ ಪ್ರಕರಣಕ್ಕೂ ಹರ್ವಿಂದರ್ ಸಿಂಗ್ಗೂ ಸಂಬಂಧವಿಲ್ಲ ಎಂಬುದು ತಿಳಿದು ಬಂದಿತ್ತು. ಸದ್ಯ ಇನ್ನಿಬ್ಬರು ಆರೋಪಿಗಳ ಬಂಧನವಾಗಿದ್ದು, ಎಸ್ಐಟಿಯಿಂದ ತನಿಖೆ ಮುಂದುವರೆದಿದೆ.
ಬಿಟ್ ಕಾಯಿನ್ ಪ್ರಕರಣ ಬೇಧಿಸಲು ತಜ್ಞರ ತಂಡ ರಚನೆ: ಇತ್ತೀಚೆಗೆ ರಾಜ್ಯ ಸರ್ಕಾರವು ಬಿಟ್ ಕಾಯಿನ್ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿಯ ಎಸ್ಐಟಿ ತಂಡಕ್ಕೆ ತಾಂತ್ರಿಕವಾಗಿ ಪರಿಣತಿ ಪಡೆದಿರುವ ಸೈಬರ್ ಫೊರೆನ್ಸಿಕ್ ಹಾಗೂ ಕ್ರಿಪ್ಟೊ ಕರೆನ್ಸಿ ತಜ್ಞರ ತಂಡವನ್ನು ನೇಮಿಸಲು ಹಸಿರು ನಿಶಾನೆ ತೋರಿತ್ತು. ಆರ್ಥಿಕ ಸ್ವರೂಪದ ಅಪರಾಧ ಪ್ರಕರಣವನ್ನು ಭೇದಿಸಬೇಕಾದರೆ ಪೊಲೀಸರು ತಾಂತ್ರಿಕವಾಗಿ ಪಳಗಬೇಕಿದೆ. ಸಿಐಡಿ ಜೊತೆಗೆ ಎಫ್ಎಸ್ಎಲ್ನ ಕೆಲವೇ ಅಧಿಕಾರಿಗಳು ಬಿಟ್ ಕಾಯಿನ್ ವ್ಯವಹಾರ ಸ್ವರೂಪದ ಬಗ್ಗೆ ಬಲ್ಲವರಾಗಿದ್ದಾರೆ. ಕೋಟ್ಯಂತರ ರೂಪಾಯಿ ಮೌಲ್ಯದ ವಂಚನೆಯನ್ನು ಬಗೆಹರಿಸಬೇಕಿದೆ.
ಹೀಗಾಗಿ ಎಸ್ಐಟಿ ತಂಡ ಸರ್ಕಾರಕ್ಕೆ ಪತ್ರ ಬರೆದು ವಿಶೇಷ ತಜ್ಞರ ತಂಡ ನಿಯೋಜಿಸುವ ಅಗತ್ಯವಿದೆ ಎಂದು ಹೇಳಿತ್ತು. ಇದನ್ನು ಮನಗಂಡ ಸರ್ಕಾರ ಕಳೆದ ಆಗಸ್ಟ್ 31ರಂದು ತಜ್ಞರ ತಂಡ ನೇಮಕಕ್ಕೆ ಒಪ್ಪಿಗೆ ನೀಡಿ ಗರಿಷ್ಠ ₹50 ಲಕ್ಷದವರೆಗೂ ಸೇವಾಶುಲ್ಕವಾಗಿ ಪಾವತಿಸಲು ಆದೇಶಿಸಿತ್ತು. ಈ ಆದೇಶ ಪತ್ರ ಈಟಿವಿ ಭಾರತ್‌ಗೆ ಲಭ್ಯವಾಗಿ ವರದಿಯಾಗಿತ್ತು.
ಇದನ್ನೂ ಓದಿ: ಒಂದೇ ದಿನದಲ್ಲಿ 7 ಲಕ್ಷ ವಹಿವಾಟು ದಾಖಲಿಸಿದ ಬಿಟ್ ಕಾಯಿನ್; 2 ವರ್ಷಗಳಲ್ಲೇ ಗರಿಷ್ಠ