ಬೆಂಗಳೂರು: ತಮ್ಮ ಜನಪರ ಕಾಳಜಿ, ಕಾರ್ಯಕ್ರಮಗಳ ಮೂಲಕವೇ ಮಾಜಿ ಮುಖ್ಯಮಂತ್ರಿ ದಿ.ದೇವರಾಜ ಅರಸು ಅವರು ಭಾರತದ ಇತಿಹಾಸದಲ್ಲಿ ಅಜರಾಮರರಾಗಿ ಉಳಿದುಕೊಂಡಿದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.
ಮಾಜಿ ಸಿಎಂ ದಿ.ದೇವರಾಜ ಅರಸು ಅವರ 105 ನೇ ಜನ್ಮ ದಿನಾಚರಣೆ ಪ್ರಯುಕ್ತ ವಿಧಾನಸೌಧದ ಪಶ್ಚಿಮ ದ್ವಾರದ ಬಳಿ ಅರಸು ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿದ ಸಿಎಂ, ಬಳಿಕ ಅವರು ಬಳಸುತ್ತಿದ್ದ ಕಾರನ್ನು ವೀಕ್ಷಿಸಿ, ಫೋಟೋ ತೆಗೆಸಿಕೊಂಡು ಗಮನಸೆಳೆದರು.
![Birth Anniversary of former CM Devaraju Aras](https://etvbharatimages.akamaized.net/etvbharat/prod-images/kn-bng-03-cm-arasu-birthday-video-7208080_20082020160535_2008f_1597919735_87.jpg)
ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿ, ಸಾಮಾಜಿಕ ನ್ಯಾಯದ ಹರಿಕಾರ, ನಾಡು ಕಂಡ ಮಹಾನ್ ಚೇತನ ದೇವರಾಜ ಅರಸು ಅವರ 105 ನೇ ಜನ್ಮದಿನಾಚರಣೆ ಮಾಡಿದ್ದೇವೆ. ಜನಸಾಮಾನ್ಯರ ಬಗ್ಗೆ ಅರಸು ಅವರಿಗಿದ್ದ ಕಾಳಜಿ, ದೂರದೃಷ್ಟಿ ಆಡಳಿತ ವಿಚಾರಗಳು ರಾಜ್ಯದಲ್ಲಿ ಒಂದು ಕ್ರಾಂತಿಕಾರಿ ಬದಲಾವಣೆ ತರಲು ಕಾರಣವಾಯಿತು. ಎಂಟು ವರ್ಷಗಳ ಕಾಲ ಅವರು ರಾಜ್ಯದ ಮುಖ್ಯಮಂತ್ರಿಯಾಗಿದ್ದರು. ಅವರು ನೀಡಿದ ಆಡಳಿತದಿಂದಲೇ ಸ್ವತಂತ್ರ ಭಾರತದ ಇತಿಹಾಸದಲ್ಲಿ ಅಜರಾಮರರಾಗಿದ್ದಾರೆ. ಸಾಮಾಜಿಕವಾಗಿ ಶೈಕ್ಷಣಿಕವಾಗಿ ಹಿಂದುಳಿದವರಿಗೆ, ದೀನ-ದಲಿತರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ ದುರ್ಬಲರಾಗಿದ್ದವರಿಗಾಗಿಯೇ ಹಲವು ಕಾರ್ಯಕ್ರಮಗಳನ್ನು ಜಾರಿಗೆ ತಂದಿದ್ದರು. ನಾಡಿಗೆ ಅವರ ಕೊಡುಗೆ ಅಪಾರ ಎಂದರು.