ಬೆಂಗಳೂರು: ಒಂದಲ್ಲ, ಎರಡಲ್ಲ.. ಬರೋಬ್ಬರಿ 65 ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಖತರ್ನಾಕ್ ಕಳ್ಳನನ್ನು ಹಲಸೂರು ಗೇಟ್ ಪೊಲೀಸರು ಬಂಧಿಸಿ ಆರೋಪಿಯಿಂದ ಲಕ್ಷಾಂತರ ಮೌಲ್ಯದ ವಸ್ತಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಯಾಸೀನ್ ಖಾನ್ ಆಲಿಯಾಸ್ ಚೋರ್ ಇಮ್ರಾನ್ ಬಂಧಿತ ಆರೋಪಿಯಿಂದ 6 ಲಕ್ಷ ಮೌಲ್ಯದ 100 ಗ್ರಾಂ ಚಿನ್ನ, 2.5 ಕೆಜಿ ಬೆಳ್ಳಿ ಹಾಗೂ 39 ಸಾವಿರ ನಗದು ವಶಪಡಿಸಿಕೊಂಡಿದ್ದಾರೆ. ಮೈಸೂರಿನ ವಾಲ್ಮೀಕಿ ನಗರದ ನಿವಾಸಿಯಾಗಿರುವ ಇಮ್ರಾನ್ ಸುಲಭವಾಗಿ ಹಣ ಸಂಪಾದನೆ ಮಾಡಲು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗುತ್ತಿದ್ದ.
ರಾಜ್ಯದ ಹಲವು ಕಡೆಗಳಲ್ಲಿ ಇಮ್ರಾನ್ ವಿರುದ್ಧ 65ಕ್ಕಿಂತ ಹೆಚ್ಚು ಕಳ್ಳತನ ಪ್ರಕರಣಗಳು ದಾಖಲಾಗಿದ್ದು, ಬೆಂಗಳೂರಿನಲ್ಲಿ 30 ಪ್ರಕರಣ ದಾಖಲಾಗಿವೆ. ಹಲವು ಬಾರಿ ಜೈಲಿಗೆ ಹೋಗಿಬಂದಿದ್ದರೂ ಒಂದೂ ಪ್ರಕರಣದಲ್ಲೂ ಪೂರ್ಣ ಪ್ರಮಾಣದ ಶಿಕ್ಷೆಯಾಗಿರಲಿಲ್ಲ. ಜಾಮೀನಿನ ಮೇರೆಗೆ ಬಿಡುಗಡೆಯಾಗಿ ಮತ್ತೆ ತನ್ನ ಕೈಚಳಕ ತೋರುತ್ತಿದ್ದ.
ಹಣಕ್ಕಾಗಿ ಕಳ್ಳತನವನ್ನೇ ಆಶ್ರಯಿಸಿಕೊಂಡಿದ್ದ ಯಾಸೀನ್, ಮನೆಯಲ್ಲಿ ಅಥವಾ ಅಂಗಡಿ-ಕಚೇರಿಗಳಲ್ಲಿ ಯಾರೂ ಇಲ್ಲದ ಸಮಯ ನೋಡಿಕೊಂಡು ವ್ಯವಸ್ಥಿತವಾಗಿ ಸಂಚು ರೂಪಿಸಿ ಕಳ್ಳತನ ಮಾಡುತ್ತಿದ್ದ. ಕೃತ್ಯ ಬಳಿಕ ಗೋವಾ, ಮೈಸೂರು ಹಾಗೂ ರಾಯಚೂರು ಸೇರಿ ಹಲವು ಕಡೆಗಳಲ್ಲಿ ಕದ್ದ ವಸ್ತುಗಳನ್ನು ಮಾರಾಟ ಮಾಡಿ ಶೋಕಿ ಜೀವನ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ತಂದೆಯಿಂದಲೇ ತರಬೇತಿ ಪಡೆದು ಮನೆಗಳ್ಳತನ : ಯಾಸೀನ್ ತಂದೆ ಏಜಾಜ್ ಖಾನ್ ಆಲಿಯಾಸ್ ದಾದಾಪೀರ್, ಈ ಹಿಂದೆ ಕೆಲ ಕಾಲ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ. ಪೊಲೀಸ್ ಕಾರ್ಯಾಚರಣೆಗಳ ಬಗ್ಗೆ ತಿಳಿದುಕೊಂಡಿದ್ದ ಏಜಾಜ್ ಖಾನ್ ತನ್ನ ಮಗ ಯಾಸೀನ್ಗೆ ಪೊಲೀಸರ ಕಾರ್ಯಾಚರಣೆಗಳ ಬಗ್ಗೆ ತಿಳಿಸಿದ್ದಲ್ಲದೇ, ಆತನಿಗೆ ಚಿಕ್ಕವಯಸ್ಸಿನಲ್ಲೇ ಕಳ್ಳತನ ಮಾಡುವುದರ ಬಗ್ಗೆ ತರಬೇತಿ ನೀಡಿದ್ದನಂತೆ.
ಅಪ್ಪನಿಂದ ಕಳ್ಳತನದ ಟ್ರೈನಿಂಗ್ ಪಡೆದಿದ್ದ ಮಗ ಚೋರ್ ಇಮ್ರಾನ್ ಎಂಥಹದ್ದೇ ಭದ್ರತೆ ಇರುವ ಮನೆಗಳಿಗೂ ನುಗ್ಗಿ ಕಳ್ಳತನ ಮಾಡಿ ಎಸ್ಕೇಪ್ ಆಗುವುದನ್ನು ಕರಗತ ಮಾಡಿಕೊಂಡಿದ್ದ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮಹಿಳೆಗೆ ಖಾರದಪುಡಿ ಎರಚಿ ಮಾಂಗಲ್ಯಸರ ಕದಿಯಲು ಯತ್ನ: ಸರಗಳ್ಳರನ್ನು ಹಿಡಿದು ಥಳಿಸಿದ ಗ್ರಾಮಸ್ಥರು!