ಬೆಂಗಳೂರು : ಮೋದಿ ನೇತೃತ್ವದ ಕೇಂದ್ರ ಸರ್ಕಾರ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ ವಿಶೇಷ ಸ್ಥಾನಮಾನದ ಆರ್ಟಿಕಲ್ 370 35ಎ ಅನ್ನು ರದ್ದುಪಡಿಸಿದ ಐತಿಹಾಸಿಕ ನಿರ್ಣಯಕ್ಕೆ ಭಾರತದಾದ್ಯಂತ ಮೆಚ್ಚುಗೆಯ ಮಹಾ ಪೂರವೇ ಹರಿದು ಬಂದಿದೆ. ಇದೀಗ ಕೇಂದ್ರ ಸರ್ಕಾರದ ಈ ಐತಿಹಾಸಿಕ ನಿರ್ಣಯವನ್ನು ಬೆಂಬಲಿಸಿ ರಾಜಲಕ್ಷ್ಮಿ ಎಂಬ ಮಹಿಳೆ ಹಾಗೂ ಅವರ ತಂಡ ಕನ್ಯಾಕುಮಾರಿಯಿಂದ ಕಾಶ್ಮೀರದ ಶ್ರೀನಗರದವರೆಗೆ 21 ದಿನಗಳ ಬೈಕ್ ಯಾತ್ರೆ ಆರಂಭಿಸಿದ್ದು, ಬೈಕ್ ಯಾತ್ರಿಗಳು ನಿನ್ನೆ ಕನ್ಯಾಕುಮಾರಿಯಿಂದ ಹೊರಟು ಇಂದು ಬೆಂಗಳೂರಿಗೆ ಬಂದು ತಲುಪಿದ್ದಾರೆ.
ಇನ್ನು ಬೈಕ್ ಯಾತ್ರಿಗಳನ್ನು ಬೆಂಗಳೂರಿನ ಬಿಜೆಪಿ ಕಚೇರಿ ಬಳಿ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿಗಳಾದ ರವಿಕುಮಾರ್ ಅವರು ಸ್ವಾಗತಿಸಿದ್ರು. ಅಲ್ಲದೆ ಬಿಜೆಪಿ ಕಚೇರಿ ಬಳಿ ನಿಂತು ಕಾಶ್ಮೀರ ನಮ್ಮದು ಎಂಬ ಘೋಷಣೆ ಕೂಗುತ್ತಾ ಭಾರತಾಂಬೆಗೆ ಜೈಕಾರ ಹಾಕಿದ್ದಾರೆ. ಅಲ್ಲದೆ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್ ಯಾತ್ರಿಗಳ ಜೊತೆ ಬೈಕ್ನಲ್ಲಿ ಒಂದು ರೌಂಡ್ ಹಾಕಿ ಮತ್ತೆ ಅವರಿಗೆ ಕಾಶ್ಮೀರದ ಕಡೆ ಹೊರಡಲು ಚಾಲನೆ ಕೊಟ್ಟರು.
ಇನ್ನೂ ಈ ಯಾತ್ರಿಗಳು 4 ಬೈಕ್ ಹಾಗೂ ಒಂದು ಟಿಟಿಯಲ್ಲಿ ಒಟ್ಟು 21 ಜನ ಸುಮಾರು 5400 ಕಿಲೋಮೀಟರ್ ಗಳನ್ನು ಪ್ರಯಾಣ ಮಾಡಲಿದ್ದಾರೆ. ಅಲ್ಲದೆ ದೆಹಲಿಯಲ್ಲಿ ಪ್ರಧಾನ ಮಂತ್ರಿಯನ್ನು ಭೇಟಿಯಾಗಿ ಕಾಶ್ಮೀರದ ಶ್ರೀನಗರದಲ್ಲಿ ಬಾವುಟ ಹಾರಿಸಿ ಮತ್ತೆ ತಮಿಳುನಾಡಿಗೆ ವಾಪಸ್ಸಾಗಲಿದ್ದಾರೆ.