ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ 22 ಸೀಟು ಗೆಲ್ಲೋದು ನಿಶ್ಚಿತ, ಎಲ್ಲ ಚುನಾವಣೋತ್ತರ ಸಮೀಕ್ಷೆಗಳಲ್ಲಿಯೂ ಇದು ಸ್ಪಷ್ಟವಾಗಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಬೆಂಗಳೂರಲ್ಲಿ ಮಾತನಾಡಿದ ಅವರು, ಮೊದಲಿಗೆ ಬಿಜೆಪಿ 22 ಸ್ಥಾನ ಗೆಲ್ಲುತ್ತದೆ ಎಂಬುದನ್ನು ಯಾರೂ ನಂಬಿರಲಿಲ್ಲ. ನಮ್ಮ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಕ್ಕಿದೆ. ಎರಡು ಉಪ ಚುನಾವಣೆಯಲ್ಲೂ ನಾವು ಗೆಲ್ಲುತ್ತೇವೆ. 10 ಸಾವಿರ ಮತಗಳ ಅಂತರದಿಂದ ಗೆಲ್ತೇವೆ. ಮೇ 23 ರಂದು ವಾಸ್ತವಿಕ ಸತ್ಯ ಎಲ್ಲರಿಗೂ ಗೊತ್ತಾಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚುನಾವಣೋತ್ತರ ಸಮೀಕ್ಷೆಯಲ್ಲಿ ಬಿಜೆಪಿಗೆ ಬಹುಮತ ಸಿಗುವ ಭವಿಷ್ಯ ನುಡಿದಿರುವ ಬಗ್ಗೆ ಪ್ರತಿಕ್ರಿಯಿಸುತ್ತಾ, ನಾವು 300 ಸೀಟು ಗೆಲ್ತೇವೆ ಅಂತ ಪ್ರಧಾನಿ ಹೇಳಿದ್ದರು. ನಾವು ಇನ್ನೂ ಹೆಚ್ಚು ಸ್ಥಾನ ಗೆಲ್ತೇವೆ. ಮೋದಿಯವರು ಪ್ರಧಾನಿ ಆಗುವುದು ನಿಶ್ಚಿತ ಎಂದು ಸ್ಪಷ್ಟಪಡಿಸಿದರು.
ರಾಜ್ಯ ರಾಜಕಾರಣದ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ಮೇ 23 ರ ಫಲಿತಾಂಶದ ನಂತರ ಗೊತ್ತಾಗಲಿದೆ. ಯಾವ ಪಕ್ಷಗಳು ಏನು ತೀರ್ಮಾನ ತೆಗೆದುಕೊಳ್ತಾರೆ ನೋಡೋಣ. ಆ ನಂತರ ಎಲ್ಲವೂ ನಿಮಗೆ ತಿಳಿಯುತ್ತದೆ ಎಂದು ಸೂಚ್ಯವಾಗಿ ತಿಳಿಸಿದರು.
ರಾಹುಲ್ ಗಾಂಧಿಯವರನ್ನೂ ರಾಜ್ಯ ಕಾಂಗ್ರೆಸ್ ನಾಯಕರು ಭೇಟಿ ಮಾಡಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲವೂ ಕಷ್ಟ ಅಂತ ಹೇಳಿಕೊಂಡಿದ್ದಾರೆ. ರಾಹುಲ್ ಗಾಂಧಿ ಕೂಡ ಫಲಿತಾಂಶದ ಬಳಿಕ ನೋಡೋಣ ಅಂದಿದ್ದಾರೆ. ಇದೆಲ್ಲವನ್ನೂ ಗಮನಿಸಿದಾಗ ಮುಂದೆ ಗೊತ್ತಾಗುತ್ತದೆ ಎಂದು ವಿವರಿಸಿದರು.
ಮಂಡ್ಯದಲ್ಲಿ ಪಕ್ಷೇತರ ಅಭ್ಯರ್ಥಿ ಗೆಲ್ತಾರೆಂಬ ಸಮೀಕ್ಷೆ ಬಗ್ಗೆ ಮಾತನಾಡಿದ ಅವರು, ಅವರು ಅಲ್ಲಿ ಗೆದ್ದೇ ಗೆಲ್ತಾರೆ. ನಮ್ಮ 2 ಲಕ್ಷ ಮತಗಳು ಅವರಿಗೆ ಬಿದ್ದಿವೆ. ಅತ್ಯಧಿಕ ಮತಗಳಿಂದ ಅವರು ಗೆಲ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಇವಿಎಂ ದೋಷದ ಬಗ್ಗೆ ಮಮತಾ ಬ್ಯಾನರ್ಜಿ ಆಕ್ಷೇಪ ವ್ಯಕ್ತಪಡಿಸಿದ ಬಗ್ಗೆ ಪ್ರತಿಕ್ರಿಯಿಸಿದ ಬಿಎಸ್ ವೈ, ಯಾರಿಗೆ ಚುನಾವಣೆ ಸೋಲು ಒಪ್ಪಿಕೊಳ್ಳೋಕೆ ಆಗಲ್ಲ, ಅವರು ಇಂತಹ ಮಾತನ್ನು ಹೇಳ್ತಾರೆ. ಮಮತಾ ಅಧಿಕಾರ ದುರುಪಯೋಗ ಮಾಡಿಕೊಂಡಿದ್ದಾರೆ. ಅಮಿತ್ ಶಾಗೂ ಭದ್ರತೆಯನ್ನು ನೀಡಿರಲಿಲ್ಲ. ಹತಾಶರಾಗಿ ಅವರು ಇಂತಹ ಆರೋಪ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.