ಬೆಂಗಳೂರು: ರಾಜ್ಯದಲ್ಲಿ ತೀವ್ರ ಸಂಚಲನ ಮೂಡಿಸಿದ್ದ ಫೋನ್ ಕದ್ದಾಲಿಕೆ(Telephone Tapping) ಪ್ರಕರಣ ಸಂಬಂಧ ನ್ಯಾಯಾಲಯಕ್ಕೆ ಸಿಬಿಐ ಸಲ್ಲಿಸಿದ ಬಿ-ರಿಪೋರ್ಟ್ಗೆ ಹಿರಿಯ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಫೋನ್ ಟ್ಯಾಪಿಂಗ್ ಪ್ರಕರಣದಲ್ಲಿ ಸಾಕಷ್ಟು ಪುರಾವೆ ಹಾಗೂ ಸಾಕ್ಷ್ಯಾಧಾರ ಲಭ್ಯವಿದ್ದರೂ ಆರೋಪಿ ಸ್ಥಾನದಲ್ಲಿರುವ ಐಪಿಎಸ್ ಅಧಿಕಾರಿ ಅಲೋಕ್ ಕುಮಾರ್ ಹಾಗೂ ಪತ್ರಕರ್ತೆ ಹೆಸರನ್ನು ತನಿಖಾ ವರದಿಯಲ್ಲಿ ಸೇರಿಸಿಲ್ಲ. ಸಾಕ್ಷ್ಯಾಧಾರ ಕೊರತೆಯಿಂದ ನ್ಯಾಯಾಲಯಕ್ಕೆ ಸಿಬಿಐ ಬಿ-ರಿಪೋರ್ಟ್ ಸಲ್ಲಿಸಿದ್ದು ಸರಿಯಿಲ್ಲ. ಅಲ್ಲದೆ ಇದು ಸಿಬಿಐ ಹಿರಿಯ ಅಧಿಕಾರಿಗಳ ಗಮನಕ್ಕೆ ಬಂದಿಲ್ಲ ಎಂಬುದು ನನ್ನ ಭಾವನೆ. ಈ ಸಂಬಂಧ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದೇನೆ ಎಂದರು.
ಕಳೆದ ಎರಡು ವರ್ಷಗಳ ಹಿಂದೆ ಫರ್ಹಾಜ್ ಎಂಬುವರ ಜೊತೆ ಮಾತನಾಡಿರುವ ಕರೆಯನ್ನು ನಗರ ಪೊಲೀಸ್ ಆಯುಕ್ತರಾಗಿದ್ದ ಅಲೋಕ್ ಕುಮಾರ್ ಅವರು ಕಿರಿಯ ಪೊಲೀಸ್ ಅಧಿಕಾರಿಗಳಿಂದ ಫೋನ್ ಕದ್ದಾಲಿಕೆ ಮಾಡಿದ್ದರು. ಕರೆ ವಿವರವಿರುವ ಸಂಪೂರ್ಣ ಮಾಹಿತಿಯನ್ನು ಪೆನ್ಡ್ರೈವ್ ಮೂಲಕ ಹಾಕಿಕೊಳ್ಳಲಾಗಿತ್ತು. ತನಿಖೆಯಲ್ಲಿ ಎಲ್ಲಾ ಸಾಕ್ಷ್ಯಾಧಾರ ಲಭ್ಯವಿದ್ದರೂ ನ್ಯಾಯಾಲಯಕ್ಕೆ ಸಿಬಿಐ ಯಾಕೆ ಬಿ-ರಿಪೋರ್ಟ್ ಸಲ್ಲಿಸಿದೆ ಅನ್ನೋದು ಗೊತ್ತಿಲ್ಲ ಎಂದು ಹೇಳಿದರು.
ಹಿರಿಯ ಐಪಿಎಸ್ ಅಧಿಕಾರಿಗಳ ಫೋನ್ ಟ್ಯಾಪಿಂಗ್ ಮಾಡಬೇಕಾದರೆ ರಾಜ್ಯ ಸರ್ಕಾರದ ಅನುಮತಿ ಪಡೆಯಬೇಕು. ಕಾನೂನಿನ ನಿಯಮಗಳನ್ನು ಗಾಳಿಗೆ ತೂರಿ ಫೋನ್ ಕದ್ದಾಲಿಕೆ ಮಾಡಿದ್ದಾರೆ. ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಸಂಬಂಧ ನ್ಯಾಯಾಲಯಕ್ಕೆ ತಕರಾರು ಅರ್ಜಿ ಸಲ್ಲಿಸಿದ್ದು, ಕಾನೂನು ಹೋರಾಟ ಮುಂದುವರೆಸಲಾಗುವುದು ಎಂದು ತಿಳಿಸಿದರು.
ಬಿ-ರಿಪೋರ್ಟ್ನಲ್ಲಿ ಏನಿದೆ?:
ಇಬ್ಬರು ಐಪಿಎಸ್ ಅಧಿಕಾರಿಗಳ ಶೀತಲ ಸಮರದ ನಡುವೆಯೂ ಫೋನ್ ಟ್ಯಾಪಿಂಗ್ ಪ್ರಕರಣ ಸಂಬಂಧ ಅಂದಿನ ಸಿಸಿಬಿ ಡಿಸಿಪಿ ಕುಲದೀಪ್ ಕುಮಾರ್ ನೀಡಿದ ದೂರಿನ ಮೇರೆಗೆ ರಾಜ್ಯ ಸರ್ಕಾರ ಸಿಬಿಐ ತನಿಖೆಗೆ ಆದೇಶಿಸಿತ್ತು. ಈ ಸಂಬಂಧ ತನಿಖೆ ಕೈಗೆತ್ತಿಕೊಂಡಿತ್ತು. ಐಟಿ ಕಾಯ್ದೆಯ ಸೆಕ್ಷನ್ 26 ಮತ್ತು ಇಂಡಿಯನ್ ಟೆಲಿಗ್ರಾಫ್ ಕಾಯ್ದೆಯಡಿ ಸಿಬಿಐ ಪ್ರಕರಣ ದಾಖಲಿಸಿಕೊಂಡಿತ್ತು.
ತನಿಖೆಯಲ್ಲಿ ಕಂಡುಬಂದು ಅಂಶಗಳು:
ವಿಲ್ಸನ್ ಗಾರ್ಡನ್ ಪೊಲೀಸ್ ಠಾಣೆಯಲ್ಲಿ ಇಂಜಾಜ್ ಚಿಟ್ ಫಂಡ್ ವಂಚನೆ ಪ್ರಕರಣ ದಾಖಲಾಗಿತ್ತು. ಪ್ರಕರಣ ತನಿಖೆ ನಡೆಸುವಂತೆ ಸಿಸಿಬಿಗೆ ಅಂದಿನ ನಗರ ಪೊಲೀಸ್ ಆಯುಕ್ತ ಟಿ.ಸುನಿಲ್ ಕುಮಾರ್ ಆದೇಶಿಸಿದ್ದರು. ಈ ಸಂಬಂಧ ಸಿಸಿಬಿಯು ಆಡುಗೋಡಿ ಟೆಕ್ನಿಕಲ್ ಸೆಂಟರ್ನಲ್ಲಿ ಕೆಲ ಆರೋಪಿಗಳ ಫೋನ್ ಟ್ಯಾಪಿಂಗ್ ಮಾಡಿತ್ತು.
ಟ್ಯಾಪಿಂಗ್ ವೇಳೆ ಐಪಿಎಸ್ ಅಧಿಕಾರಿ ಭಾಸ್ಕರ್ ರಾವ್ ಓರ್ವ ಆರೋಪಿ ಫರ್ಹಾಜ್ ಅಹ್ಮದ್ ಜೊತೆಗೆ ಮಾತಾನಾಡಿದ್ದು ಕೇಳಿಬಂದಿತ್ತು. ಬಳಿಕ ಈ ವಿಚಾರವನ್ನು ಟೆಕ್ನಿಕಲ್ ಸೆಂಟರ್ ಇನ್ಸ್ಪೆಕ್ಟರ್ ಆಗಿದ್ದ ಮಿರ್ಜಾ ಆಲಿ ಹಿರಿಯ ಅಧಿಕಾರಿ ಅಲೋಕ್ ಕುಮಾರ್ ಅವರಿಗೆ ಮಾಹಿತಿ ನೀಡಿದ್ದರು. ಬಳಿಕ 2019ರ ಆ.2 ರಂದು ಮಿರ್ಜಾ ಅಲಿಗೆ ಆಡಿಯೋ ತರುವಂತೆ ಸೂಚಿಸಿದ್ದರು. ಅಲೋಕ್ ಕುಮಾರ್ ಸೂಚನೆಯಂತೆ ಹೆಡ್ಕಾನ್ಸ್ಟೇಬಲ್ ಆನಂದ್ ಕುಮಾರ್ ಕಡೆಯಿಂದ ಆಡಿಯೋ ಕಾಪಿ ಮಾಡಿ, ಅದನ್ನು ಕಮಿಷನರ್ ಕಚೇರಿಯಲ್ಲಿ ಮಧ್ಯಾಹ್ನ 1:30ರ ವೇಳೆಗೆ ನೀಡಿದ್ದರು.
ಒಂದು ಸೋನಿ ಪೆನ್ಡ್ರೈವ್, ಒಂದು ಹೆಚ್ಪಿ ಪೆನ್ಡ್ರೈವ್ಗೆ ಆಡಿಯೋ ಕಾಪಿ ಮಾಡಲಾಗಿತ್ತು. ಒಂದು ಪೆನ್ಡ್ರೈವ್, ಒಂದು ಲ್ಯಾಪ್ಟಾಪ್ ಮತ್ತು ಹೆಡ್ಫೋನ್ ನೀಡಲಾಗಿತ್ತು. ಆಡಿಯೋ ಕಾಪಿ ಮಾಡಿದ ಬಳಿಕ ಲ್ಯಾಪ್ಟಾಪ್ ಮತ್ತು ಹೆಡ್ಫೋನ್ ಅನ್ನು ಅಲೋಕ್ ಕುಮಾರ್ ವಾಪಸ್ ನೀಡಿದ್ದರು. ನಂತರ ಹಲವು ಅಧಿಕಾರಿಗಳ ಮೂಲಕ ವಾಟ್ಸಾಪ್ಗೆ ಮೂರು ಆಡಿಯೋಗಳನ್ನು ತರಿಸಿಕೊಂಡಿದ್ದರು. ಅದೇ ದಿನ ಮಧ್ಯಾಹ್ನ ಭಾಸ್ಕರ್ ರಾವ್ ಅವರು ಪೊಲೀಸ್ ಕಮೀಷನರ್ ಆಗಿ ಅಧಿಕಾರ ಸ್ವೀಕರಿಸಿದ್ದರು.
ರಹಸ್ಯ ಬಿಚ್ಚಿಟ್ಟ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆ ಇ-ಮೇಲ್:
ಈ ಸಂದರ್ಭದಲ್ಲಿ ಭಾಸ್ಕರ್ ರಾವ್ಗೆ ಖಾಸಗಿ ಸುದ್ದಿವಾಹಿನಿಯ ಪತ್ರಕರ್ತೆ ಆಡಿಯೋ ಬಗ್ಗೆ ಪ್ರತಿಕ್ರಿಯೆ ನೀಡುವಂತೆ ಇ-ಮೇಲ್ ಮಾಡಿದ್ದರು. ಈ ವಿಷಯ ಗೊತ್ತಾಗುತ್ತಿದ್ದಂತೆ ತನಿಖೆ ನಡೆಸುವಂತೆ ಸಿಸಿಬಿ ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಅವರಿಗೆ ಭಾಸ್ಕರ್ ರಾವ್ ಆದೇಶಿಸಿದ್ದರು.
ತನಿಖೆ ವೇಳೆ ಪತ್ರಕರ್ತೆಗೆ ಆಡಿಯೋ ತಲುಪಿದ್ದು ಹೇಗೆ ಎಂಬುದು ಪತ್ತೆಯಾಗಿಲ್ಲ. ಆದರೆ ಇ- ಮೇಲ್ ಮಾಡಿದ್ದ ಕಾರಣ ಪತ್ರಕರ್ತೆಗೆ ಆಡಿಯೋ ಸಿಕ್ಕಿದೆ ಎಂಬುದು ದೃಢವಾಗಿದೆ. ಆದರೆ ಆಡಿಯೋ ಮೂಲವನ್ನು ಪತ್ರಕರ್ತೆ ತಿಳಿಸಿಲ್ಲ. ಹೀಗಾಗಿ ಯಾರು ಆಡಿಯೋವನ್ನು ನೀಡಿದ್ದರು ಎಂಬುದು ಸ್ಪಷ್ಟವಾಗಿಲ್ಲ. ಈ ಆರೋಪದ ಸಂಬಂಧ ಸೂಕ್ತ ಸಾಕ್ಷಿಗಳು ಇಲ್ಲದ ಕಾರಣ ಬಿ- ರಿಪೋರ್ಟ್ ಸಲ್ಲಿಕೆ ಮಾಡಲಾಗಿದೆ ಎಂದು ವರದಿಯಲ್ಲಿ ಹೇಳಿದೆ.