ಬೆಂಗಳೂರು: ರಾಷ್ಟ್ರೀಕೃತ ಬ್ಯಾಂಕ್ ಮತ್ತು ಮತ್ತಿತರ ಹಣಕಾಸು ಸಂಸ್ಥೆಗಳು ಕಳೆದ ಐದು ವರ್ಷದಲ್ಲಿ ದೊಡ್ಡ ಕಂಪನಿ ಮತ್ತು ಉದ್ದಿಮೆದಾರರಿಗೆ 10 ಲಕ್ಷ ಕೋಟಿ ಬೃಹತ್ ಮೊತ್ತದ ಸಾಲ ಮನ್ನಾ ಮಾಡಿರುವುದನ್ನು ಆಮ್ ಆದ್ಮಿ ಪಾರ್ಟಿ ಮುಖಂಡ ಮತ್ತು ನಿವೃತ್ತ ಪೊಲೀಸ ಅಧಿಕಾರಿ ಭಾಸ್ಕರ್ ರಾವ್ ಖಂಡಿಸಿದರು.
ಪ್ರೆಸ್ಕ್ಲಬ್ನಲ್ಲಿ ಮಾಧ್ಯಮಗೋಷ್ಟಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಕೇಂದ್ರ ಸರ್ಕಾರ ಕೇವಲ ಶ್ರೀಮಂತರಿಗಾಗಿ ಉಪಯೋಗವಾಗುವಂತಹ ಹಣಕಾಸು ನೀತಿಗಳನ್ನು ಜಾರಿ ಮಾಡಿ ಪ್ರತ್ಯಕ್ಷ ಮತ್ತು ಪರೋಕ್ಷವಾಗಿ ಅವರ ಆದಾಯ ಹೆಚ್ಚಾಗಲು ಕಾರಣವಾಗುತ್ತಿದೆ ಎಂದು ಆರೋಪಿಸಿದರು.
ಸದಾ ಸಮಸ್ಯೆಗಳಿಂದ ಬಳಲುತ್ತಿರುವ ರೈತರು ಮತ್ತು ಜನ ಸಾಮಾನ್ಯರನ್ನು ಕಡೆಗಣಿಸಿ ಹೊಸ ನೀತಿಗಳನ್ನು ತಂದು ಆರ್ಥಿಕತೆಯನ್ನು ಹಾಳು ಮಾಡುತ್ತಿದ್ದಾರೆ ಎಂದು ದೂರಿದರು. ದೊಡ್ಡ ದೊಡ್ಡ ಉದ್ದಿಮೆದಾರರು ಬ್ಯಾಂಕುಗಳಲ್ಲಿ ಸಾಲ ಪಡೆದು ಮರುಪಾವತಿಸದೆ ವಿದೇಶಗಳಲ್ಲಿ ತಲೆಮರಿಸಿಕೊಂಡಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಸಾರ್ವಜನಿಕರ ಹಣವನ್ನು ಕೊಳ್ಳೆ ಹೊಡೆದು, ಉದ್ದಿಮೆದಾರರು ಈ ರೀತಿ ಕಾರ್ಯದಲ್ಲಿ ತೊಡಗಿದ್ದರೂ ಸಹ ಅವರ ವಿರುದ್ಧ ಯಾವುದೇ ಕಠಿಣ ಕ್ರಮ ಕೈಗೊಳ್ಳದೆ ಮೃದು ಧೋರಣೆ ಹೊಂದಿದ್ದು, ಪರೋಕ್ಷವಾಗಿ ಭ್ರಷ್ಟಾಚಾರವನ್ನು ಬೆಂಬಲಿಸುತ್ತಿದ್ದಾರೆ ಎಂದು ಭಾಸ್ಕರ್ ರಾವ್ ಕಿಡಿಕಾರಿದರು.
ಉದ್ದಿಮೆದಾರರು ಸಂಕಷ್ಟದಲ್ಲಿ: ದೇಶದ ರೈತರು, ಸಣ್ಣ ಮತ್ತು ಅತಿ ಸಣ್ಣ ಉದ್ಯಮಿದಾರರು, ಚಿಕ್ಕ ಚಿಕ್ಕ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟದಲ್ಲಿದ್ದಾರೆ. ದೊಡ್ಡ ದೊಡ್ಡ ಕಂಪನಿಯ ಉದ್ಯಮದಾರರಿಗೆ ಸುಮಾರು 10 ಲಕ್ಷ ಕೋಟಿ ಸಾಲ ಮನ್ನಾ ಮಾಡುವ ಮೂಲಕ ಬಿಜೆಪಿ ಸರ್ಕಾರ ಅವರ ಪರವಾಗಿದೆ ಎಂದರು.
ಸುಮಾರು ವರ್ಷಗಳಿಂದ ಸಾಲದ ಕೂಪದಲ್ಲಿ ಸಿಲುಕಿರುವ ರೈತರ ಸಾಲ ಮನ್ನಾ ಮಾಡಿ ಎಂದು ಕೇಳಿದರೆ ಅದಕ್ಕೆ ತಲೆಕೆಡಿಸಿಕೊಳ್ಳುತ್ತಿಲ್ಲ, ರೈತರ ಉದ್ಧಾರ ಇವರಿಗೆ ಬೇಕಾಗಿಲ್ಲ. ಕೂಡಲೇ ಕೇಂದ್ರ ಸರ್ಕಾರ ಬಡವರ ಆರ್ಥಿಕ ಜೀವನ ಸರಿಗೊಳ್ಳಲು ಹೊಸ ನೀತಿಗಳನ್ನು ತಂದು ರೈತರ ಸಾಲ ಮನ್ನಾ ಮಾಡಲು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದರು.
ಈ ವೇಳೆ ರೈತ ನಾಯಕರಾದ ಪ್ರಕಾಶ್ ಕಮ್ಮರಡಿ, ಬಡಗಲಪುರ ನಾಗೇಂದ್ರ, ಮೈಕಲ್ ಫರ್ನಾಂಡಿಸ್, ಬಿ .ಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು.
ಇದನ್ನೂ ಓದಿ: ಹಣಕಾಸು ಸಹಾಯಕ್ಕಾಗಿ ಅಂಗಲಾಚುತ್ತಿರುವ ಪಾಕಿಸ್ತಾನ; ಗ್ಯಾರಂಟಿ ನೀಡಿ ಎಂದ IMF