ಬೆಂಗಳೂರು: ಬಿಡಿಎ ನಿರ್ಮಾಣ ಮಾಡುವ ಅಪಾರ್ಟ್ಮೆಂಟ್ಗಳಿಗೆ ಪೈಪ್ ಲೈನ್ ಮೂಲಕ ಅಡುಗೆ ಅನಿಲ ಪೂರೈಸುವ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್ ತಿಳಿಸಿದ್ದಾರೆ.
ಮಾಳಗಾಳದಲ್ಲಿ ನಿರ್ಮಾಣವಾಗಿರುವ ಬ್ರಹ್ಮಗಿರಿ ವಸತಿ ಸಂಕೀರ್ಣಕ್ಕೆ ಭೇಟಿ ನೀಡಿ ಮಾಲೀಕರ ಸಂಘದ ನೂತನ ಕಚೇರಿ ಉದ್ಘಾಟಿಸಿ ಮಾತನಾಡಿದರು. ಮಾಳಗಾಳ ಸೇರಿದಂತೆ ಬಿಡಿಎ ಕೈಗೆತ್ತಿಕೊಂಡಿರುವ ವಸತಿ ಸಂಕೀರ್ಣಗಳಿಗೆ ಪೈಪ್ಲೈನ್ ಮೂಲಕ ಅಡುಗೆ ಅನಿಲ ಪೂರೈಸುವಂತೆ ಕೇಂದ್ರ ಸರ್ಕಾರಿ ಸ್ವಾಮ್ಯದ ಗೇಲ್ ಸಂಸ್ಥೆಗೆ ಪತ್ರ ವ್ಯವಹಾರಗಳನ್ನು ನಡೆಸಲಾಗಿದೆ. ಈಗಾಗಲೇ ಕೆಲವು ವಸತಿ ಸಂಕೀರ್ಣಗಳಿಗೆ ಅಡುಗೆ ಅನಿಲ ಪೂರೈಸುವ ಬಗ್ಗೆ ಗೇಲ್ ಸಂಸ್ಥೆಯವರು ಆಸಕ್ತಿ ತೋರಿದ್ದಾರೆ ಎಂದು ಹೇಳಿದರು.
ಓಪನ್ ಜಿಮ್ ಸ್ಥಾಪನೆಗೆ ಸೂಚನೆ:
ಮಾಳಗಾಳ ಅಪಾರ್ಟ್ಮೆಂಟ್ನಲ್ಲಿ ನಿವಾಸಿಗಳ ಅನುಕೂಲಕ್ಕಾಗಿ ಓಪನ್ ಜಿಮ್ ಮತ್ತು ಮಕ್ಕಳಿಗಾಗಿ ಕ್ರೀಡಾ ಪರಿಕರಗಳನ್ನು ಅಳವಡಿಸುವಂತೆ ವಿಶ್ವನಾಥ್ ಅಧಿಕಾರಿಗಳಿಗೆ ಸೂಚನೆ ನೀಡಿದರು. ಅಲ್ಲದೇ, ಅಪಾರ್ಟ್ಮೆಂಟ್ನಲ್ಲಿ ಬಾಕಿ ಇರುವ ಕಾಮಗಾರಿಗಳನ್ನು ತ್ವರಿತಗತಿಯಲ್ಲಿ ಪೂರ್ಣಗೊಳಿಸುವಂತೆ ನಿರ್ದೇಶನ ನೀಡಿದ ಅವರು, ಸಾಂಕೇತಿಕವಾಗಿ ಗಿಡ ನೆಡುವ ಮೂಲಕ ಮನೆಗೊಂದು ಸಸಿಯನ್ನು ನೆಟ್ಟು ಸುತ್ತಮುತ್ತಲಿನ ಪರಿಸರವನ್ನು ಹಸಿರುಮಯವನ್ನಾಗಿಸುವಂತೆ ಕರೆ ನೀಡಿದರು.
ನಾಗರಭಾವಿ, ಕೊಮ್ಮಘಟ್ಟಗಳಿಗೆ ಭೇಟಿ:
ನಾಗರಭಾವಿ ವ್ಯಾಪ್ತಿಯ ಚಂದ್ರಾ ಲೇಔಟ್ನಲ್ಲಿ ನಿರ್ಮಾಣವಾಗುತ್ತಿರುವ ವಸತಿ ಸಂಕೀರ್ಣಕ್ಕೆ ಭೇಟಿ ನೀಡಿ, ಆದಷ್ಟೂ ಬೇಗ ಕಾಮಗಾರಿ ಪೂರ್ಣಗೊಳಿಸಿ ನಾಗರಿಕರಿಗೆ ಹಂಚಿಕೆ ಮಾಡುವ ಪ್ರಕ್ರಿಯೆಗೆ ಚಾಲನೆ ನೀಡಬೇಕೆಂದು ಸೂಚನೆ ನೀಡಿದರು.
ಸೂಕ್ತ ಸೌಲಭ್ಯಗಳ ಪೂರೈಕೆ
ಕಾಮಗಾರಿ ಪೂರ್ಣಗೊಳ್ಳುವ ಮೊದಲೇ ನಾಗರಿಕರಿಗೆ ಕುಡಿಯುವ ನೀರು, ರಸ್ತೆ, ವಿದ್ಯುತ್ ಸೇರಿದಂತೆ ಇನ್ನಿತರ ಮೂಲ ಸೌಕರ್ಯಗಳು ಹಾಗೂ ಪಾರ್ಕ್, ಜಿಮ್ ವ್ಯವಸ್ಥೆಯನ್ನು ಕಲ್ಪಿಸಲಾಗುತ್ತದೆ ಎಂದು ತಿಳಿಸಿದರು.
ಈ ಸುದ್ದಿಯನ್ನೂ ಓದಿ: ನಿವೃತ್ತಿ ಹೊಂದಿದ ಹೈಕೋರ್ಟ್ ನ್ಯಾ. ಬಿ.ಎ. ಪಾಟೀಲ್ಗೆ ಬೀಳ್ಕೊಡುಗೆ
ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಕ್ಕೆ ಸೂಚನೆ:
ಕೊಮ್ಮಘಟ್ಟದಲ್ಲಿ ನಿರ್ಮಾಣವಾಗುತ್ತಿರುವ 3 ರಿಂದ 5 ನೇ ಹಂತದ ವಸತಿ ಸಂಕೀರ್ಣದ ಕಾಮಗಾರಿ ಶೇ.70 ರಷ್ಟು ಪೂರ್ಣಗೊಂಡಿದ್ದು, ಉಳಿದ ಕಾಮಗಾರಿಯನ್ನು ಮುಂದಿನ ಮೂರು ತಿಂಗಳೊಳಗೆ ಪೂರ್ಣಗೊಳಿಸಬೇಕೆಂದು ಗುತ್ತಿಗೆದಾರರಿಗೆ ಆದೇಶ ನೀಡಿದರು.