ಬೆಂಗಳೂರು: ಚಲಿಸುವ ಸ್ಕೂಟರ್ನಲ್ಲಿ ಜೋತುಬಿದ್ದ ಸ್ಥಿತಿಯಲ್ಲಿ ಚಾಲಕನನ್ನು ಎಳೆದೊಯ್ದು ಅಮಾನವೀಯವಾಗಿ ನಡೆದುಕೊಂಡಿದ್ದ ಸವಾರನನ್ನು ಗೋವಿಂದರಾಜನಗರ ಪೊಲೀಸರು ವಶಕ್ಕೆ ಪಡೆದುಕೊಂಡು ತೀವ್ರ ವಿಚಾರಣೆಗೊಳಪಡಿಸಿದ್ದಾರೆ. ಸಾರ್ವಜನಿಕರು ಥಳಿಸುತ್ತಾರೆ ಎಂಬ ಭಯದಿಂದಲೇ ಅಪಘಾತ ಸ್ಥಳದಿಂದ ಪರಾರಿಯಾಗಲು ಯತ್ನಿಸಿದೆ ಎಂದು ಪೊಲೀಸ್ ವಿಚಾರಣೆ ವೇಳೆ ತಿಳಿದುಬಂದಿದೆ.
ಮತ್ತೊಂದೆಡೆ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬೊಲೊರೊ ಲಗೇಜ್ ಗಾಡಿ ಚಾಲಕ 71 ವರ್ಷದ ಮುತ್ತಪ್ಪ ಪ್ರತಿಕ್ರಿಯಿಸಿದ್ದಾರೆ. ಹಿಂಬದಿಯಿಂದ ಗುದ್ದಿ ಅಗೌರವದಿಂದ ಮಾತನಾಡಿದ. ಆತನನ್ನು ಬಿಡಬಾರದೆಂಬ ಕಾರಣಕ್ಕಾಗಿಯೇ ಸವಾರನ ಸ್ಕೂಟರ್ನಲ್ಲಿ ಪಟ್ಟು ಬಿಡದೆ ಹಿಡಿದುಕೊಂಡಿದ್ದೆ ಎಂದು ಹೇಳಿದ್ದಾರೆ.
ಮಾಗಡಿ ರೋಡ್ನಲ್ಲಿ ಆ್ಯಕ್ಸಿಡೆಂಟ್ ಸಂಬಂಧ ವಿಜಯನಗರ ಸಂಚಾರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಗೋವಿಂದರಾಜನಗರದ ಕಾನೂನು ವಿಭಾಗದ ಪೊಲೀಸರು ಅಮಾನವೀಯ ವರ್ತನೆ ತೋರಿದ ಆರೋಪದಡಿ ಮತ್ತೊಂದು ಪ್ರಕರಣ ದಾಖಲಿಸಕೊಂಡಿದ್ದಾರೆ ಎಂದು ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ ನಿಂಬರಗಿ ಮಾಹಿತಿ ನೀಡಿದ್ದಾರೆ.
ಮುತ್ತಪ್ಪ ಅವರ ಆರೋಗ್ಯ ಸ್ಥಿರ: ಅಪಘಾತಕ್ಕೊಳಗಾದ ಮುತ್ತಪ್ಪ ಅವರ ಆರೋಗ್ಯ ಸ್ಥಿರವಾಗಿದೆ. ಗಾಯಾಳುವಿಗೆ ಚಿಕಿತ್ಸೆ ಕೊಡಲಾಗಿದೆ ಸಣ್ಣ ಪುಟ್ಟ ಗಾಯಗಳಾಗಿವೆ. ಈ ಸಂಬಂಧ ಚಿಕಿತ್ಸೆ ನೀಡಲಾಗಿದೆ. ಎಕ್ಸರೇನಲ್ಲಿ ಯಾವುದೇ ಮೂಳೆ ಮುರಿತ ಕಂಡು ಬಂದಿಲ್ಲ. ಸಿಟಿ ಸ್ಕ್ಯಾನ್ ಮಾಡಿ ಹೆಚ್ಚಿನ ಅರೋಗ್ಯದ ಸಮಸ್ಯೆ ಬಗ್ಗೆ ತಿಳಿಯುತ್ತೇವೆ. 70 ವರ್ಷದ ವ್ಯಕ್ತಿ ಈ ರೀತಿ ಏಟು ಬಿದ್ದಾಗಲೂ ಮೂಳೆ ಮುರಿತ ವಾಗದಿರುವುದು ಅಚ್ಚರಿಯೇ ಸರಿ. ಸರ್ಕಾರವೇ ಚಿಕಿತ್ಸಾ ವೆಚ್ಚ ಭರಿಸುವ ಭರವಸೆ ನೀಡಿದ್ದು, ಮೂರು ದಿನಗಳ ಚಿಕಿತ್ಸೆ ಕೊಡಲಾಗುವುದು ಎಂದು ವಿಜಯನಗರದ ಗಾಯತ್ರಿ ಆಸ್ಪತ್ರೆಯ ವೈದ್ಯ ಸುನೀಲ್ ಬಾಬು ಮಾಹಿತಿ ನೀಡಿದ್ದಾರೆ.
ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ: ಘಟನಾ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಪಡೆದುಕೊಂಡಿದ್ದು, ಪಶ್ಚಿಮ ವಿಭಾಗದ ಹೆಚ್ಚುವರಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಘಟನೆ ಸಂಬಂಧ ಇಬ್ಬರಿಗೂ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆಶ್ವಾಸನೆ ನೀಡಿದ್ದಾರೆ.
ಭಯದಲ್ಲಿ ಪರಾರಿ ಯತ್ನ: ಪೊಲೀಸ್ ವಶದಲ್ಲಿರುವ ಆರೋಪಿ ಸಾಹಿಲ್ ಯುನೈಟೆಡ್ ಅಸೋಸಿಯೇಷನ್ನಲ್ಲಿ ಸೇಲ್ಸ್ ಮ್ಯಾನ್ ಆಗಿ ಕೆಲಸ ಮಾಡುತ್ತಿದ್ದರು. ಪೊಲೀಸರ ಪ್ರಾಥಮಿಕ ವಿಚಾರಣೆ ವೇಳೆ ತಾನು ಸಾರ್ವಜನಿಕರು ಹೊಡೆಯುತ್ತಾರೆ ಎಂಬ ಭಯದಿಂದ ಸ್ಕೂಟರ್ ಚಲಾಯಿಸಿ ಪರಾರಿಯಾಗಲು ಯತ್ನಿಸಿ ಎಂದು ಆರೋಪಿ ಹೇಳಿಕೆ ನೀಡಿರುವುದಾಗಿ ತಿಳಿದು ಬಂದಿದೆ.
ಅಗೌರವದಿಂದ ಮಾತನಾಡಿದ ಹೀಗಾಗಿ ಅವನ ಸೂಟ್ಕರ್ ಹಿಡಿದಿದ್ದೆ: ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ 71 ವರ್ಷದ ವೃದ್ದ ಮುತ್ತಪ್ಪ, ಮಾಗಡಿ ರೋಡ್ ಟೋಲ್ನಲ್ಲಿ ಬರುವಾಗ ಮೊಬೈಲ್ನಲ್ಲಿ ಮಾತನಾಡಿಕೊಂಡು ನನ್ನ ವಾಹನದ ಹಿಂಬದಿ ಭಾಗಕ್ಕೆ ಡಿಕ್ಕಿ ಹೊಡೆದಿದ್ದ. ಪ್ರಶ್ನಿಸಿದಕ್ಕೆ ನನ್ನೊಂದಿಗೆ ವಾಕ್ಸಮರ ನಡೆಸಿದ. ಹಿರಿಯ ನಾಗರಿಕ ಎಂದು ಬೆಲೆಕೊಡದೇ ಅಗೌರವದಿಂದ ಕಠೋರವಾಗಿ ನನ್ನೊಂದಿಗೆ ವರ್ತಿಸಿದ. ಪರಾರಿಯಾಗಲು ಯತ್ನಿಸಿದ. ಆತನನ್ನ ಬುದ್ಧಿಕಲಿಸಲು ತೀರ್ಮಾಸಿ ಅವನ ಸ್ಕೂಟರನ್ನು ಪಟ್ಟು ಬಿಡದೆ ಹಿಡಿದುಕೊಂಡಿದ್ದೆ. ಒಂದು ವೇಳೆ ಕ್ಷಮೆಯಾಚಿಸಿದ್ದರೆ ಬಿಟ್ಟುಬಿಡುತ್ತಿದ್ದೆ. ತನ್ನೊಂದಿಗೆ ಅನಾಗರಿಕನಾಗಿ ವರ್ತಿಸಿದ್ದರಿಂದ ಹೀಗೆ ಮಾಡಿದೆ. ಹೊಸಹಳ್ಳಿ ಮೆಟ್ರೊ ನಿಲ್ದಾಣ ಬಳಿ ಸಾರ್ವಜನಿಕರು ಬೈಕ್ ಸವಾರನನ್ನು ತಡೆಗಟ್ಟಿದ್ದರು ಎಂದು ಹೇಳಿಕೆ ನೀಡಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಟೋಲ್ಗೇಟ್ ಅಪಘಾತ: ಪ್ರಶ್ನಿಸಿದ್ದಕ್ಕೆ ಬೈಕ್ನಲ್ಲಿ ಎಳೆದುಕೊಂಡು ಹೋದ ಸವಾರ