ಬೆಂಗಳೂರು: ಇಂದು 23ನೇ ಆವೃತ್ತಿಯ ಬೆಂಗಳೂರು ಟೆಕ್ ಶೃಂಗಸಭೆ - 2020 ಪ್ರಾರಂಭವಾಗಲಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಫರೆನ್ಸ್ ಮೂಲಕ ಉದ್ಘಾಟಿಸಲಿದ್ದಾರೆ.
ಇಂದಿನಿಂದ ನವೆಂಬರ್ 21ರವರೆಗೆ ಬೆಂಗಳೂರಿನ ಶಾಂಗ್ರಿಲ್ಲಾ ಹೋಟೆಲ್ನಲ್ಲಿ ಶೃಂಗಸಭೆ ನಡೆಯಲಿದೆ. ಈ ಬಾರಿ ಸಂಪೂರ್ಣ ವರ್ಚುವಲ್ ಮೂಲಕ ಟೆಕ್ ಸಮ್ಮಿಟ್ ನಡೆಯುತ್ತಿದ್ದು, ಸಿಎಂ ಯಡಿಯೂರಪ್ಪ, ಡಿಸಿಎಂ ಅಶ್ವತ್ಥ ನಾರಾಯಣ ಸೇರಿದಂತೆ ಅನೇಕ ಗಣ್ಯರು ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
ಡಿಸಿಎಂ ಅಶ್ವತ್ಥ ನಾರಾಯಣ ಈ ಕಾರ್ಯಕ್ರಮದ ಉಸ್ತುವಾರಿ ವಹಿಸಿದ್ದಾರೆ. ಆವಿಷ್ಕಾರ ಮತ್ತು ತಂತ್ರಜ್ಞಾನದ ಪೂರಕವಾಗಿ ಈ ಟೆಕ್ ಸಮ್ಮಿಟ್ ನಡೆಯುತ್ತಿದೆ. ಕಳೆದ ವರ್ಷವೇ ದಿನಾಂಕ ನಿಗದಿಯಾದ್ದು, ಕೊರೊನಾ ಇದ್ದರೂ ವಿಶೇಷವಾಗಿ ಕಾರ್ಯಕ್ರಮ ಆಯೋಜನೆ ಮಾಡಲಾಗಿದೆ. ಬೇರೆ ದೇಶಗಳಿಗಿಂತ ಬೆಂಗಳೂರು ವೇಗವಾಗಿ ಬೆಳೆಯಬೇಕು. ಹೀಗಾಗಿ ಈ ಕಾರ್ಯಕ್ರಮ ಆಯೋಜನೆ ಮಾಡಿದ್ದೇವೆ. 1999ರಲ್ಲಿ ಆಗಿನ ಪ್ರಧಾನಿ ವಾಜಪೇಯಿ ಅವರು ಟೆಕ್ ಸಮ್ಮಿಟ್ ಉದ್ಘಾಟನೆ ಮಾಡಿದ್ದರು. ಈಗ 21 ವರ್ಷಗಳ ನಂತರ ಪ್ರಧಾನಿ ಮೋದಿ ಅವರು ಉದ್ಘಾಟನೆ ಮಾಡಲಿದ್ದು, ಆಸ್ಟ್ರೇಲಿಯಾ, ಸ್ವಿಜರ್ಲ್ಯಾಂಡ್ನ ಪ್ರಧಾನಿ, ಉಪ ಪ್ರಧಾನಿಗಳು ಕಾರ್ಯಕ್ರಮದಲ್ಲಿ ಭಾಗವಹಿಸುತ್ತಾರೆ ಎಂದು ಡಿಸಿಎಂ ಅಶ್ವತ್ಥ ನಾರಾಯಣ ತಿಳಿಸಿದ್ದಾರೆ.
ಬೆಳಗ್ಗೆ 11 ಗಂಟೆಗೆ ಕಾರ್ಯಕ್ರಮ ಉದ್ಘಾಟನೆ ಆಗಲಿದ್ದು, 25ಕ್ಕೂ ಹೆಚ್ಚು ದೇಶಗಳುಗಳ ಪ್ರತಿನಿಧಿಗಳು, ಕೆಲ ದೇಶಗಳ ಪ್ರಧಾನಿಗಳು ಇದೇ ಮೊದಲ ಬಾರಿಗೆ ಭಾಗವಹಿಸುತ್ತಿದ್ದಾರೆ. ಕೃಷಿ, ಸಂಶೋಧನೆ ಮತ್ತು ಅಭಿವೃದ್ಧಿ, ಸ್ಟಾರ್ಟ್ ಅಪ್ ಪಾಲುದಾರಿಕೆ ವಲಯಗಳಗಳಲ್ಲಿ 7 ಒಪ್ಪಂದಗಳಿಗೆ ಸಹಿ ಹಾಕಲಾಗುತ್ತದೆ. ಟೆಕ್ ಸಮ್ಮಿಟ್ನಲ್ಲಿ ಜಾಗತಿಕ ಆವಿಷ್ಕಾರ ಮೈತ್ರಿಗೆ ಸಂಬಂಧಿಸಿದಂತೆ 15 ಅಧಿವೇಶನಗಳು ನಡೆಯಲಿವೆ. ವಿವಿಧ ದೇಶಗಳ 10ಕ್ಕೂ ಹೆಚ್ಚು ಸಚಿವರ ನಿಯೋಗ ಸಮ್ಮಿಟ್ನಲ್ಲಿ ಭಾಗಿಯಾಗಲಿದೆ. 60ಕ್ಕೂ ಹೆಚ್ಚು ಭಾಷಣಕಾರರು ಉಪನ್ಯಾಸ ನೀಡಲಿದ್ದಾರೆ.
500ಕ್ಕೂ ಹೆಚ್ಚು ಅಂತಾರಾಷ್ಟ್ರೀಯ ನಿಯೋಗಗಳು ಟೆಕ್ ಸಮ್ಮಿಟ್ನಲ್ಲಿ ಭಾಗಿಯಾಗಲಿದ್ದು, 100ಕ್ಕೂ ಹೆಚ್ಚು ಸ್ಟಾರ್ಟ್ ಅಪ್ಗಳು, 4,000ಕ್ಕೂ ಹೆಚ್ಚು ವಹಿವಾಟು ಪ್ರತಿನಿಧಿಗಳು ವರ್ಚುವಲ್ ಮೂಲಕ ಭಾಗವಹಿಸಲಿದ್ದಾರೆ. 40,000ಕ್ಕೂ ಹೆಚ್ಚು ಜನರು ವರ್ಚುವಲ್ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದಲ್ಲದೆ ಟೆಕ್ ಸಮ್ಮಿಟ್ನಲ್ಲಿ ವಿಚಾರಗೋಷ್ಠಿ, ಜೈವಿಕ ಪಾಲುದಾರಿಕೆ, ಸಂಶೋಧನೆಗಳ ಮಂಡನೆ, ರಾಷ್ಟ್ರೀಯ ಹಾಗೂ ಜಾಗತಿಕ ಮೈತ್ರಿ ಮತ್ತು ರಸಪ್ರಶ್ನೆ ಕಾರ್ಯಕ್ರಮ ಇರಲಿವೆ. ಆನ್ಲೈನ್ ಮೂಲಕ ಸಾರ್ವಜನಿಕರು ಟೆಕ್ ಸಮ್ಮಿಟ್ನಲ್ಲಿ ಭಾಗವಹಿಸಬಹುದಾಗಿದೆ.