ಬೆಂಗಳೂರು: ಫೇಸ್ಬುಕ್ನಲ್ಲಿ ಆರೋಪಿ ನವೀನ್ ಮಾಡಿದ್ದ ಅವನಹೇಳನಕಾರಿ ಪೋಸ್ಟ್ಗೆ ಡಿ ಜೆ ಹಳ್ಳಿ, ಕೆ ಜಿ ಹಳ್ಳಿ ಹಾಗೂ ಕಾವಲ್ ಬೈರಸಂದ್ರ ಹೊತ್ತಿ ಉರಿದಿರುವುದು ಗೊತ್ತೇ ಇದೆ. ಆದ್ರೆ ಎಫ್ಬಿ ಪೋಸ್ಟ್ ಹಿಂದಿನ ಅಸಲಿ ಕಾರಣವೂ ಈಗ ಹೊರಬಿದ್ದಿದೆ.
ಎಫ್ಬಿಯಲ್ಲಿ ಪೋಸ್ಟ್ ಹಾಕಿದ ಸಂಬಂಧ ನವೀನ್ನನ್ನು ಬಂಧಿಸಿರುವ ಸಿಸಿಬಿ ಆತನನ್ನು ವಿಚಾರಣೆಗೊಳಪಡಿಸಿದೆ. ಇನ್ನೊಂದೆಡೆ ಕಾನೂನು ಸುವ್ಯವಸ್ಥೆ ಹದಗೆಟ್ಟು ಕೋಟ್ಯಂತರ ರೂಪಾಯಿ ಸಾರ್ವಜನಿಕ ಆಸ್ತಿ ನಷ್ಟವಾಗಿದೆ.
ಗಲಭೆ ನಡೆದ ದಿನದಂದು ಎಂದಿನಂತೆ ನವೀನ್ ಕಾವಲ್ ಬೈರಸಂದ್ರದಲ್ಲಿ ಮನೆಯಲ್ಲಿದ್ದ. ಅಂದು ಸಂಜೆ ಪೈರೋಜ್ ಪಾಷಾ ಎಂಬಾತ ವಿಷಯವೊಂದರ ಕುರಿತು ಆಕ್ಷೇಪಾರ್ಹ ಪೋಸ್ಟ್ ಮಾಡಿರುವುದಕ್ಕೆ ಕೋಪಗೊಂಡ ನವೀನ್, ಪ್ರತಿಯಾಗಿ ತಮ್ಮ ಮೊಬೈಲ್ ಮೂಲಕ ವಿವಾದಾತ್ಮಕವಾಗಿ ಪೋಸ್ಟ್ ಮಾಡಿದ್ದಾನೆ. ಪೋಸ್ಟ್ ಮಾಡಿ ಒಂದೆರೆಡು ಗಂಟೆಗಳ ಕಾಲ ಹೊರಹೋಗಿದ್ದಾನೆ. ಅಷ್ಟೊತ್ತಿಗಾಗಲೇ ವಿವಾದಾತ್ಮಕ ಪೋಸ್ಟ್ ಸ್ಕ್ರೀನ್ಶಾಟ್ನಿಂದ ಸೇವ್ ಮಾಡಿಕೊಂಡು ಇತರರಿಗೆ ಪೋಸ್ಟ್ ಆಗಿದೆ. ಅದಾಗಲೇ ನವೀನ್ಗೆ ಜೀವ ಬೆದರಿಕೆ ಕರೆಗಳು ಬರಲಾರಂಭಿಸಿವೆ. ಇದರಿಂದ ಆತಂಕಗೊಂಡು ಮನೆಗೆ ಬಂದು ನವೀನ್ ಪೋಸ್ಟ್ ಡಿಲೀಟ್ ಮಾಡಿದ್ದಾನೆ. ಬಳಿಕ ಮೊಬೈಲ್ ಹ್ಯಾಕ್ ಆಗಿದೆ ಎಂದು ಮತ್ತೊಂದು ಪೋಸ್ಟ್ ಮಾಡಿದ್ದಾನೆ. ಕೆಲವೇ ಕ್ಷಣಗಳಲ್ಲಿ ಮನೆ ಹತ್ತಿರ ಅಪರಿಚಿತರು ಬರುವುದನ್ನು ಕಂಡ ನವೀನ್ ಸ್ನೇಹಿತರ ಬಳಿ ಹೇಳಿಕೊಂಡು ಪೇಚಾಡಿದ್ದಾನೆ. ಈ ವೇಳೆ ಮೊಬೈಲ್ ಕಳೆದಿರುವ ಬಗ್ಗೆ ದೂರು ನೀಡುವಂತೆ ಸ್ನೇಹಿತರು ಸಲಹೆ ನೀಡಿದ್ದರಂತೆ.
ಮನೆಯವರಿಗೆ ಪೋಸ್ಟ್ ವಿಷಯ ಗೊತ್ತಾಗಿ ನವೀನ್ ಹೊರತುಪಡಿಸಿ ಶಾಸಕ ಅಖಂಡ ಶ್ರೀನಿವಾಸಮೂರ್ತಿ ಮನೆಗೆ ಎಲ್ಲರೂ ಹೋಗಿದ್ದಾರೆ. ಮನೆ ಬಳಿ ಗಲಾಟೆ ಆರಂಭವಾಗುತ್ತಿದ್ದಂತೆ ಮನೆಯ ಹಿಂಬದಿ ಬಾಗಿಲಿನಿಂದ ಹೋಗಿ 3ನೇ ಕಟ್ಟಡದ ಮೊದಲ ಮಹಡಿಯಲ್ಲಿ ನವೀನ್ ಅವಿತುಕೊಂಡಿದ್ದಾನೆ.
ಅವಹೇಳನಕಾರಿ ಪೋಸ್ಟ್ಗೆ ಕೆಂಡಾಮಂಡಲರಾಗಿದ್ದ ಗಲಭೆಕೋರರು ಶಾಸಕ ಅಖಂಡ ಶ್ರೀನಿವಾಸಮೂರ್ತಿ ಅವರ ಮನೆಯನ್ನು ಸುಟ್ಟಿದ್ದಾರೆ. ನವೀನ್ ಬಗ್ಗೆ ಹಿರಿಯ ಅಧಿಕಾರಿಗಳು ಶಾಸಕರಲ್ಲಿ ಕೇಳಿದಾಗ ಅವರು, ಆತನ ಬಗ್ಗೆ ನನ್ನ ಬಳಿ ಯಾಕೆ ಕೇಳ್ತೀರಿ. ಇಷ್ಟೊತ್ತು ಏನ್ ಮಾಡುತ್ತಿದ್ದೀರಿ ಎಂದು ಅಸಮಾಧಾನದಿಂದ ಉತ್ತರಿಸಿದ್ದಾರೆ ಎನ್ನಲಾಗ್ತಿದೆ.
ಅಷ್ಟೊತ್ತಿಗೆ ನವೀನ್ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ನವೀನ್ ತಾಯಿಗೆ ಪರಿಸ್ಥಿತಿ ಬಗ್ಗೆ ವಿವರಿಸಿ ನವೀನ್ ಬಗ್ಗೆ ಪೊಲೀಸರು ವಿಚಾರಿಸಿದ್ದಾರೆ. ನಂತರ ಒಬ್ಬ ಹುಡುಗನ ಜೊತೆ ಕಳಿಸಿ ನವೀನ್ ಬಗ್ಗೆ ಮಾಹಿತಿ ನೀಡಿದ್ದಾರೆ. ಮೊದಲು ಪೊಲೀಸರ ಜೊತೆ ಬರಲು ಒಪ್ಪದ ನವೀನ್ ಮನವೊಲಿಸಿದ್ದಾರೆ. ಯಾರಿಗೂ ಅನುಮಾನ ಬಾರದಂತೆ ನವೀನ್ ಮುಖಕ್ಕೆ ಬೆಡ್ ಶೀಟ್ ಸುತ್ತಿ ಮನೆಯಿಂದ ಕೆ ಜಿ ಹಳ್ಳಿ ಠಾಣೆಗೆ ಕರೆತಂದಿದ್ದಾರೆ. ನಂತರ ಕೆ.ಜಿ. ಹಳ್ಳಿ ಠಾಣೆ ಸುರಕ್ಷಿತವಲ್ಲ ಎಂದು ಅಲ್ಲಿಂದಲೂ ಕರೆದೊಯ್ದಿದ್ದಾರೆ.
ಸದ್ಯ ಬಂಧಿತನನ್ನು ನವೀನ್ ಮನೆಯಲ್ಲಿ ಮಹಜರು ಪರಿಶೀಲಿಸುವಾಗ ಮೊಬೈಲ್ ಪತ್ತೆಯಾಗಿದೆ. ಇದರಿಂದ ಪ್ರಕರಣಕ್ಕೆ ಪ್ರಮುಖ ಸಾಕ್ಷ್ಯ ಸಿಕ್ಕಂತಾಗಿದೆ.