ಬೆಂಗಳೂರು: ಹಿಜಾಬ್ ತೀರ್ಪು ವಿರೋಧಿಸಿ ಕೆಲವು ಮುಸ್ಲಿಂ ಸಂಘಟನೆಗಳು ಕರೆ ನೀಡಿದ ಬಂದ್‌ಗೆ ನಗರದ ಹಲವೆಡೆಗಳಲ್ಲಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿ ಬೆಂಬಲಿಸಿದ್ದು ಕಂಡುಬಂದಿದೆ.
ಮುಸ್ಲಿಂ ಜನಸಂಖ್ಯೆ ಹೆಚ್ಚಿರುವ ನಗರದ ಕೆ.ಜಿ.ಹಳ್ಳಿ, ಡಿ.ಜೆ.ಹಳ್ಳಿ ಹಾಗು ಪಾದರಾಯನಪುರ ಸೇರಿದಂತೆ ನಗರದ ಕೆಲವೆಡೆ ಅಂಗಡಿಗಳನ್ನು ಮುಚ್ಚಲಾಗಿದೆ. ಇಲ್ಲಿ ದಿನಬಳಕೆ ವಸ್ತುಗಳ ಮಾರಾಟ ಹೊರತುಪಡಿಸಿ ವ್ಯಾಪಾರ-ವಹಿವಾಟು ಸ್ಥಗಿತಗೊಳಿಸಲಾಗಿದೆ. ಇದುವರೆಗೆ ನಗರದಲ್ಲಿ ಶಾಂತಿಯುತವಾಗಿ ಬಂದ್ ನಡೆಯುತ್ತಿದೆ. ಯಾವುದೇ ಪ್ರತಿಭಟನೆ, ರ್ಯಾಲಿಗೆ ಅವಕಾಶ ನೀಡಿಲ್ಲ. ಅಹಿತಕರ ಘಟನೆ ನಡೆಯದಂತೆ ಪೊಲೀಸರು ಪಥ ಸಂಚಲನ ನಡೆಸಿದ್ದು, ಕಟ್ಟೆಚ್ಚರ ವಹಿಸಿದ್ದಾರೆ.
ನಗರ ಪೊಲೀಸ್ ಆಯುಕ್ತ ಕಮಲ್ ಪಂತ್ ಮಾತನಾಡಿ, ನಗರದ ಹಲವು ಕಡೆಗಳಲ್ಲಿ ಬಂದ್ ಮಾಡಿದ್ದಾರೆ. ಶಾಂತಿಯುತವಾಗಿ ಬಂದ್ ನಡೆಸುತ್ತಿದ್ದಾರೆ. ಕೆಲವು ಅಂಗಡಿಗಳನ್ನು ಬಂದ್ ಮಾಡಿದ್ದಾರೆ. ಎಲ್ಲಿಯೂ ಪ್ರತಿಭಟನೆ, ಮೆರವಣಿಗೆಯಾಗಿಲ್ಲ. ಸಾರ್ವಜನಿಕ ಜೀವನಕ್ಕೆ ಸಮಸ್ಯೆ ಉಂಟಾಗುವ ರೀತಿಯಲ್ಲಿ ಎಲ್ಲೂ ಏನೂ ಆಗಿಲ್ಲ. ನಿನ್ನೆ ಮುಸ್ಲಿಂ ಮುಖಂಡರ ಜೊತೆ ಸಭೆ ನಡೆಸಿದ್ದೆವು. ಶಾಂತಿ ಕಾಪಾಡಲು ಸೂಚಿಸಿದ್ದೆವು. ಅದರಂತೆ ಎಲ್ಲೆಡೆ ಶಾಂತಿಯುತವಾಗಿ ಬಂದ್ ಮಾಡಲಾಗಿದೆ ಎಂದು ಹೇಳಿದರು.
'ಜೇಮ್ಸ್ ಬಿಡುಗಡೆ ಅಹಿತಕರ ಘಟನೆ ನಡೆದಿಲ್ಲ': ಇಂದು ನಟ ದಿ.ಪುನೀತ್ ರಾಜ್‌ಕುಮಾರ್ ಹುಟ್ಟುಹಬ್ಬ ಹಾಗೂ ಜೇಮ್ಸ್ ಸಿನಿಮಾ ಬಿಡುಗಡೆ ಹಿನ್ನೆಲೆಯಲ್ಲಿ ಎಲ್ಲೆಡೆ ಸಿನಿಮಾ ಬಿಡುಗಡೆ ಆಗಿದೆ. ಸಾವಿರಾರು ಜನ ಸಿನಿಮಾ ವೀಕ್ಷಣೆ ಮಾಡುತ್ತಿದ್ದಾರೆ. ಬೆಳಗ್ಗೆ 5 ಗಂಟೆಗೆ ಶೋ ಶುರುವಾಗಿದೆ. ಎಲ್ಲಾ ಕಡೆ ಪೊಲೀಸ್ ಬಂದೋಬಸ್ತ್ ಮಾಡಲಾಗಿದೆ. ಎಲ್ಲಿಯೂ ಯಾವುದೇ ಅಹಿತಕರ ಘಟನೆ ನಡೆದಿಲ್ಲ. ಅಪ್ಪು ಅಭಿಮಾನಿಗಳು ಪ್ರೀತಿಯಿಂದ ಶಾಂತಿಯುತವಾಗಿ ಸಿನಿಮಾ ನೋಡುತ್ತಿದ್ದಾರೆ. ಈ ಹಿಂದೆಯೂ ಅಪ್ಪು ಅಭಿಮಾನಿಗಳು ಗಲಾಟೆ ಮಾಡಿಲ್ಲ ಎಂದು ಕಮಲ್ ಪಂತ್ ತಿಳಿಸಿದರು.