ಬೆಂಗಳೂರು: ನಗರದ ಪಿಜಿಗಳಲ್ಲಿ ಭಯೋತ್ಪಾದಕರು ವಾಸ್ತವ್ಯ ಮಾಡುತ್ತಿದ್ದಾರೆ ಎಂಬ ಆರೋಪ ಹಿನ್ನೆಲೆ, ವಾರಕ್ಕೊಮ್ಮೆ ಪಿಜಿಗಳಲ್ಲಿ ಯಾರು ವಾಸ್ತವ್ಯ ಇದ್ದಾರೆ ಹಾಗೂ ಇರುವವವರ ಬಗ್ಗೆ ಸಂಪೂರ್ಣ ಮಾಹಿತಿ ನೀಡುವಂತೆ ಹಿರಿಯ ಅಧಿಕಾರಿಗಳು ಹಾಗೂ ಸ್ಥಳೀಯ ಪೊಲೀಸರು ಪಿಜಿಗಳ ಮಾಲೀಕರಿಗೆ ಸೂಚಿಸಿದ್ದಾರೆ.
ಇತ್ತೀಚೆಗೆ ಸಿಲಿಕಾನ್ ಸಿಟಿಯಲ್ಲಿ ದುಷ್ಕೃತ್ಯವೆಸಗುವ ನಿಟ್ಟಿನಲ್ಲಿ ಕೆಲವರು ಪಿಜಿಗಳಲ್ಲಿ ವಾಸ್ತವ್ಯ ಹೂಡಿದ್ದರು. ಹೀಗಾಗಿ ಪ್ರತಿನಿತ್ಯ ಪಿಜಿಗಳಿಗೆ ಬಂದು ಹೋಗುವವರ ಬಗ್ಗೆ ಮಾಹಿತಿ ಕಲೆಹಾಕಬೇಕು. ದೇಶ ವಿರೋಧಿ, ಉಗ್ರಗಾಮಿ ಚಟುವಟಿಕೆ, ದುಷ್ಕೃತ್ಯಗಳಲ್ಲಿ ಭಾಗಿಯಾಗುವವರಿಗೆ ಪಿಜಿಗಳಲ್ಲಿ ವಾಸ್ತವ್ಯಕ್ಕೆ ಅವಕಾಶ ನೀಡಬಾರದು. ಯಾವುದೇ ವಿದ್ಯಾರ್ಥಿಗಳು ಪಿಜಿಗೆ ಸೇರುವಾಗ ವೋಟರ್ ಐಡಿ, ಆಧಾರ್ ಕಾರ್ಡ್, ಕಾಲೇಜು ಐಡಿ ಕಾರ್ಡ್ ಪಡೆಯಬೇಕು. ಅಲ್ಲದೆ ವಿದ್ಯಾರ್ಥಿಗಳ ಪೂರ್ವಾಪರ ವಿಚಾರಣೆ ನಡೆಸಿ, ಎಲ್ಲಾ ದಾಖಲೆ ಸಂಗ್ರಹಿಸಬೇಕು. ಈ ಬಗ್ಗೆ ಸ್ಥಳೀಯ ಠಾಣೆಗೆ ಮಾಹಿತಿ ನೀಡುವುದು ಅಗತ್ಯ ಎಂದು ಪೊಲೀಸರು ಹೇಳಿದ್ದಾರೆ.
ಹಾಗೆಯೇ ಪಿಜಿಗೆ ಬಂದು ಹೋಗುವವರ ಬಗ್ಗೆ ಏನಾದರೂ ಅನುಮಾನ ಬಂದಲ್ಲಿ ಕೂಡಲೇ ಪೊಲೀಸರಿಗೆ ತಿಳಿಸಬೇಕು. ಭದ್ರತೆಗಾಗಿ ಪಿಜಿಗಳಲ್ಲಿ ಸಿಸಿಟಿವಿ ಅಳವಡಿಸಬೇಕು. ಸೆಕ್ಯೂರಿಟಿ ಗಾರ್ಡ್ ನೇಮಿಸಿ, ಪಿಜಿಯಲ್ಲಿ ನೋಂದಣಿ ಬುಕ್ ಇಟ್ಟು, ಅದರಲ್ಲಿ ಪ್ರತಿಯೊಬ್ಬರ ಹೆಸರು ನಮೂದಿಸಿ ಪಿಜಿಯಲ್ಲಿರುವವರ ಚಟುವಟಿಕೆ ಮೇಲೆ ನಿಗಾ ಇಡಬೇಕು ಎಂದು ನಗರ ಪೊಲೀಸರು ಖಡಕ್ ಸೂಚನೆ ರವಾನಿಸಿದ್ದಾರೆ.