ಬೆಂಗಳೂರು: ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತರು, ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರೊಂದಿಗೆ ಹೊಸ ವರ್ಷ ಬರಮಾಡಿಕೊಳ್ಳುವ ಮೂಲಕ ಬೆಂಗಳೂರು ಪೊಲೀಸ್ ಇಲಾಖೆ ಮಾದರಿಯಾಗಿದೆ. ಪೊಲೀಸ್ ಕಮ್ಯಾಂಡ್ ಸೆಂಟರ್ ಹಾಗೂ ಸಿಎಆರ್ ಕಾರ್ಯಾಲಯದಲ್ಲಿ ಆ್ಯಸಿಡ್ ದಾಳಿ ಪ್ರಕರಣದ ಸಂತ್ರಸ್ತರು, ಕೋವಿಡ್ ತುರ್ತು ಪರಿಸ್ಥಿತಿಯಲ್ಲಿ ಮೃತಪಟ್ಟ ಪೊಲೀಸ್ ಸಿಬ್ಬಂದಿಗಳ ಕುಟುಂಬಸ್ಥರನ್ನು ಕರೆಸಿ ಹೊಸ ವರ್ಷಾಚರಣೆ ಆಚರಿಸಲಾಗಿದೆ.
![bengaluru police celebrate new year with Family of deceased police personnel](https://etvbharatimages.akamaized.net/etvbharat/prod-images/01-01-2024/kn-bng-cp-byte-7211560_01012024135417_0101f_1704097457_850.jpg)
ಈ ಸಂದರ್ಭದಲ್ಲಿ ಬೆಂಗಳೂರಿನ ಎಲ್ಲಾ ಪ್ರಜ್ಞಾವಂತ ನಾಗರೀಕರಿಗೂ ಹೊಸವರ್ಷದ ಶುಭಾಶಯ ಕೋರಿ ಮಾತನಾಡಿದ ನಗರ ಪೊಲೀಸ್ ಆಯುಕ್ತ ಬಿ ದಯಾನಂದ್, ''ಹೊಸ ವರ್ಷಕ್ಕೆ ಹಿರಿಯ ಅಧಿಕಾರಿಗಳಿಗೆ ಸಿಹಿ ಅಥವಾ ಹೂಗುಚ್ಛ ನೀಡಿ ಶುಭ ಕೋರುವುದು ಇಲಾಖೆಯಲ್ಲಿ ಹಿಂದಿನಿಂದಲೂ ಬಂದ ಸಾಂಪ್ರದಾಯಿಕ ಪದ್ಧತಿ. ಆದರೆ ಈ ಬಾರಿ ಅದರ ಬದಲು ಅನಾಥಾಶ್ರಮ, ವೃದ್ಧಾಶ್ರಮ, ವಿಶೇಷಚೇತನ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡುವ ಮೂಲಕ ಅರ್ಥಪೂರ್ಣವಾಗಿ ಹೊಸ ವರ್ಷಾಚರಣೆ ಆಚರಿಸಲು ಸೂಚಿಸಲಾಗಿತ್ತು. ಅದರಂತೆ ಸಿಬ್ಬಂದಿಗಳು ಆಚರಿಸುತ್ತಿದ್ದಾರೆ'' ಎಂದರು.
![bengaluru police celebrate new year with Family of deceased police personnel](https://etvbharatimages.akamaized.net/etvbharat/prod-images/01-01-2024/kn-bng-cp-byte-7211560_01012024135417_0101f_1704097457_1048.jpg)
"ಹಾಗೆಯೇ ಪೊಲೀಸ್ ಇಲಾಖೆ ಹಣವಂತರಿಗೆ ಮಾತ್ರ ಎಂಬ ಅಪವಾದವಿದೆ. ಆದರೆ ಇಲಾಖೆ ನಿಜವಾಗಿ ತಲುಪಬೇಕಿರುವುದು ಸಮಾಜದ ಕಟ್ಟಕಡೆಯ ವ್ಯಕ್ತಿಗಳನ್ನು, ಅವರೊಂದಿಗೆ ಪೊಲೀಸ್ ಇಲಾಖೆ ಸದಾ ಇದೆ ಎಂಬುದನ್ನು ಸಾರಲು ಈ ವಿಭಿನ್ನ ಪ್ರಯತ್ನ ಮಾಡಿದ್ದೇವೆ" ಎಂದು ತಿಳಿಸಿದರು.
![bengaluru police celebrate new year with Family of deceased police personnel](https://etvbharatimages.akamaized.net/etvbharat/prod-images/01-01-2024/kn-bng-cp-byte-7211560_01012024135417_0101f_1704097457_141.jpg)
ಹೊಸ ವರ್ಷಾಚರಣೆಗೂ ಮುನ್ನ ಸಿಬ್ಬಂದಿಗಳನ್ನು ಉದ್ದೇಶಿಸಿ ಮಾತನಾಡಿದ್ದ ನಗರ ಪೊಲೀಸ್ ಆಯುಕ್ತರು ''ಪ್ರತೀ ವರ್ಷದಂತೆ ಶುಭಾಶಯ ಕೋರಲು ಹೂಗುಚ್ಛ ಸಿಹಿ ತರಲು ಸಾವಿರಾರು ರೂಪಾಯಿ ಖರ್ಚು ಮಾಡಬೇಡಿ. ಅದರ ಬದಲಿಗೆ ಅದೇ ಹಣದಿಂದ ಅನಾಥಾಶ್ರಮ, ವೃದ್ಧಾಶ್ರಮಗಳಿಗೆ ದಿನಸಿ, ಬಟ್ಟೆ ಅಥವಾ ಊಟಕ್ಕೆ ನೆರವಾಗುವಂತೆ ಏನಾದರೂ ನೀಡಿ. ಮತ್ತೊಬ್ಬರಿಗೂ ಮಾದರಿಯಾಗುವಂತೆ ಆಚರಿಸಿ" ಎಂದು ಕರೆ ನೀಡಿದ್ದರು.
![bengaluru police celebrate new year with Family of deceased police personnel](https://etvbharatimages.akamaized.net/etvbharat/prod-images/01-01-2024/kn-bng-cp-byte-7211560_01012024135417_0101f_1704097457_1089.jpg)
ಇದನ್ನೂ ಓದಿ: 2024ನ್ನು ಪ್ರಯಾಣಿಕ ಸ್ನೇಹಿ ವರ್ಷವೆಂದು ಘೋಷಿಸಿದ ಕೆಎಸ್ಆರ್ಟಿಸಿ