ಬೆಂಗಳೂರು: ಸಿಲಿಕಾನ್ ಸಿಟಿಯ ಉತ್ತರ ಪೊಲೀಸ್ ವಿಭಾಗದ ನಂದಿನಿ ಲೇಔಟ್ ಮತ್ತು ಯಶವಂತಪುರ ಠಾಣೆಯ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಮಾದಕ ವಸ್ತು ಮಾರಾಟ ಮಾಡುತ್ತಿದ್ದ ನಾಲ್ವರು ಆರೋಪಿಗಳನ್ನು ಬಂಧಿಸಿ ಒಟ್ಟು 13.3 ಕೆ.ಜಿ ಗಾಂಜಾ ಮತ್ತು ₹2000 ನಗದು ವಶಪಡಿಸಿಕೊಂಡಿದ್ದಾರೆ.
ನಂದಿನಿ ಲೇಔಟ್ ಠಾಣೆಯ ಪೊಲೀಸರು ಮಾದಕ ವಸ್ತು ಗಾಂಜಾ ಮಾರಾಟ ಮಾಡುತ್ತಿದ್ದ ಸೆಕ್ಯುರಿಟಿ ಗಾರ್ಡ್ ಸೇರಿದಂತೆ ಮೂವರನ್ನು ಲಕ್ಷ್ಮಿ ದೇವಿ ನಗರದ ಬ್ರಿಡ್ಜ್ ಕೆಳಗೆ ಗಾಂಜಾ ಮಾರಾಟ ಮಾಡುತ್ತಿರುವ ಖಚಿತ ಮಾಹಿತಿಯ ಮೇರೆಗೆ ಬಂಧಿಸಿದ್ದಾರೆ.
ಒಡಿಶಾ ಮೂಲದ ಆರೋಪಿ ಬೆಂಗಳೂರಿನ ಕಂಪನಿಯೊಂದರಲ್ಲಿ ಸೆಕ್ಯುರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದ. ಒಡಿಶಾಗೆ ಹೋದಾಗ ಅಲ್ಲಿಂದ ಗಾಂಜಾ ತಂದು ನಗರದಲ್ಲಿ ಇಬ್ಬರ ಸಹಾಯದಿಂದ ಮಾರಾಟ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಯಶವಂತಪುರ ಠಾಣೆ ಪೊಲೀಸರು ಮಾದಕ ವಸ್ತು ಮಾರಾಟ ಮಾಡುತ್ತಿದ ಓರ್ವ ಆರೋಪಿಯನ್ನು ಬಂಧಿಸಿ 3.3 ಕೆ.ಜಿ ಗಾಂಜಾ ವಶಕ್ಕೆ ಪಡೆದಿದ್ದಾರೆ. ಇಬ್ಬರು ಮಾದಕ ವಸ್ತು ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಪಡೆದ ಪೊಲೀಸರು ದಾಳಿ ನಡೆಸಿ ಒಬ್ಬನನ್ನು ವಶಕ್ಕೆ ಪಡೆದಿದ್ದಾರೆ, ಮತ್ತೊಬ್ಬ ತಲೆಮರೆಸಿಕೊಂಡಿದ್ದು ಶೋಧ ನಡೆಸಲಾಗುತ್ತಿದೆ.
ಇದನ್ನೂ ಓದಿ: ರಾಜ್ಯದ ವಿವಿಧೆಡೆ ಆಕಾಶದಲ್ಲಿ ಕಂಡುಬಂತು ವಿಚಿತ್ರ ಬೆಳಕು: ಜನರಲ್ಲಿ ಕುತೂಹಲ, ಆತಂಕ