ಬೆಂಗಳೂರು : ಸಾಮಾನ್ಯವಾಗಿ ಕಂಬಳದ ಬಳಿಕ ಕರಾವಳಿಯಲ್ಲಿ ಕೋಳಿ ಅಂಕ ನಡೆಯುತ್ತದೆ. ಆದರೆ ಬೆಂಗಳೂರು ಕಂಬಳದಲ್ಲಿ ಕೋಳಿ ಅಂಕವಿಲ್ಲ, ಆದರೆ ಫೈಟರ್ ಹುಂಜದ ಲಕ್ಕಿಡಿಪ್ ಕೌಂಟರ್ ತೆರೆಯಲಾಗಿದೆ. ವಿಜೇತರಿಗೆ ರುಚಿಯಾದ ಅಂಕದ ಕೋಳಿ ಸಿಗುತ್ತಿದೆ. ಸಿಲಿಕಾನ್ ಸಿಟಿಯವರಿಗೆ ಅಂಕದ ಕೋಳಿಯ ರುಚಿ ತೋರಿಸಲು ಕರಾವಳಿ ಭಾಗದಿಂದ 300ಕ್ಕೂ ಅಧಿಕ ಅಂಕದ ಹುಂಜಗಳನ್ನು ತರಲಾಗಿದೆ.
ಅಂಕ ಹುಂಜದ ಬೆಲೆ ಸಾಮಾನ್ಯವಾಗಿ 3 ರಿಂದ 10 ಸಾವಿರದ ವರೆಗೆ ಇರುತ್ತದೆ. ಇವುಗಳನ್ನು ಮಾಲೀಕರು ವಿಶೇಷವಾಗಿ ಸಾಕುತ್ತಾರೆ. ಪ್ರತ್ಯೇಕ ಗೂಡು ನಿರ್ಮಿಸಿ, ಅದರಲ್ಲಿ ಕಟ್ಟಿ ಹಾಕಿ ಸಮಯಕ್ಕೆ ಸರಿಯಾಗಿ ಡೆಯಟ್ ಆಹಾರ ನೀಡಲಾಗುತ್ತದೆ. ದಿನಕ್ಕೆ ಒಂದರಿಂದ ಎರಡು ಬಾರಿ ಕಾಲಿಗೆ ಹಗ್ಗ ಕಟ್ಟಿಯೇ ವಿಹಾರಕ್ಕೆ ಬಿಡಲಾಗುತ್ತದೆ. ನಿರಂತರವಾಗಿ ಗೂಡಿನಲ್ಲಿ ಕಟ್ಟಿ ಹಾಕಿ ಸಾಕುವುದರಿಂದ ಅದರಲ್ಲಿ ಕಾದಾಡುವ ಹುಮ್ಮಸ್ಸು ಬರುತ್ತದೆ. ಇದರ ಮಾಂಸದ ರುಚಿ ಸಾಮಾನ್ಯ ನಾಟಿ ಕೋಳಿಗಿಂತ ಸ್ವಾದಿಷ್ಟವಾಗಿರುತ್ತದೆ. ಇದರಿಂದಲೇ ಕರಾವಳಿಯಲ್ಲಿ ಕಟ್ಟಿದ ಕೋಳಿ ಮಾಂಸಕ್ಕೆ ದುಬಾರಿ ಬೆಲೆ ನಿಗದಿಯಾಗಿದೆ.
ಕೋಳಿ ಅಂಕದಲ್ಲಿ ಭಾಗವಹಿಸಿ ಗೆಲುವು ಸಾಧಿಸಿದ ಕೋಳಿಗೆ ಬಂಟೆ ಹಾಗೂ ಸೋತ ಕೋಳಿಗೆ ಒಟ್ಟೆ ಎಂದು ಕರೆಯಲಾಗುತ್ತದೆ. ಅಂಕದಲ್ಲಿ ಸೋತ ಕೋಳಿಯನ್ನು ಗೆದ್ದವರು ತೆಗೆದುಕೊಂಡು ಹೋಗುತ್ತಾರೆ. ಈ ವೇಳೆ ಸೋತ ಕೋಳಿ ಜೀವಂತವಾಗಿದ್ದರೆ, ರಕ್ತ ಸ್ರಾವ ಕಡಿಮೆಯಿದ್ದರೆ ವೈದ್ಯರಿಗೂ ಅಥವಾ ಸ್ವಯಂ ವೈದ್ಯ ಪದ್ಧತಿಯ ಮೂಲಕ ಚಿಕಿತ್ಸೆ ಮಾಡಿ, ಇನ್ನೊಂದು ಅಂಕಕ್ಕೆ ತೆಗೆದುಕೊಂಡು ಹೋಗುತ್ತಾರೆ. ಇಲ್ಲವೇ ಯಾವುದೇ ರೀತಿಯಾದ ಅಂಗವೈಕಲ್ಯಗಳಾದರೆ ಅದನ್ನು ಮನೆ ಅಡುಗೆಗೆ ಬಳಕೆ ಮಾಡುತ್ತಾರೆ.
ಸಾಮಾನ್ಯವಾಗಿ ಕೋಳಿ ಅಂಕಕ್ಕೆ ಹೋಗುವವರಿಗೆ ಅನೇಕ ಶಕುನಗಳಿವೆ. ಕೋಳಿ ಅಂಕದಲ್ಲಿ ಮಹಿಳೆಯರು ಭಾಗವಹಿಸುವಂತಿಲ್ಲ. ಇನ್ನು ಅಂಕಕ್ಕೆ ತೆರಳುವ ವ್ಯಕ್ತಿಗೆ ನಾಗರಹಾವು, ಎದುರಾದರೆ ಸೋಲು ಖಚಿತ ಎಂದೇ ನಂಬುತ್ತಾರೆ. ಈ ವೇಳೆ ಯಾರು ಅಂಕ ಕಟ್ಟುವುದಿಲ್ಲ. ಕೆರೆ ಹಾವು, ಮಕ್ಕಳು, ವಿವಾಹಿತರು ಕಂಡರೆ ಶುಭ ಎನ್ನುವ ನಂಬಿಕೆ ಇದೆ.
ಅಂಕದ ಕೋಳಿಗಳನ್ನು ಅದರ ಬಣ್ಣ ಹಾಗೂ ಹಾವಭಾವಕ್ಕೆ ಅನುಗುಣವಾಗಿ ಕರೆಯಲಾಗುತ್ತದೆ. ಬೊಳ್ಳೆ (ಬಿಳಿ ಕೋಳಿ), ಕಪ್ಪು ಗಿಡಿಯೆ(ಕಪ್ಪು ಚುಕ್ಕಿಯ ಕೋಳಿ), ಪರಂದ್ ಗಿಡಿಯೆ( ಹಳದಿ ಚುಕ್ಕಿಯ ಕೋಳಿ), ಕರ್ಬೊಳ್ಳೆ (ಕಪ್ಪು ,ಬಿಳಿ), ಉರ್ಯೆ(ಕೆಂಪು ಕಪ್ಪು ), ಪೆರಡಿಂಗೆ (ಹೇಂಟೆ ತರ ಇರುವ ಹುಂಜ), ಮೈಪೆ ಹೀಗೆ ಬಣ್ಣದ ಮೇಲೆ ಕೋಳಿಗಳಿಗೆ ಹೆಸರಿಡಲಾಗುತ್ತದೆ. ಕೆಲವರಿಗೆ ಇಷ್ಟವಾದ ಬಣ್ಣದ ಕೋಳಿಗಳಿಗೆ ಹಣ ಎಷ್ಟೇ ಆದರೂ ಕೊಂಡುಕೊಳ್ಳುತ್ತಾರೆ.
ಬೆಂಗಳೂರು ಕಂಬಳಕ್ಕೆ ಸುಮಾರು 150 ಫೈಟರ್ ಕೋಳಿಯನ್ನು ತರಲಾಗಿತ್ತು. ಇವುಗಳ ಬೆಲೆ 5000 ರೂ. ನಿಂದ ಶುರುವಾಗಿ 7,000 ರೂ. ಇದೆ. ಟೋಕನ್ ನೀಡಿ ಲಕ್ಕಿ ಡಿಪ್ ನಲ್ಲಿ ಗೆದ್ದವರಿಗೆ ಒಂದು ಬಾರಿಗೆ ಒಂದರಂತೆ ಫೈಟರ್ ಕೋಳಿಗಳನ್ನು ನೀಡಲಾಗುತ್ತಿದೆ. ಈವರೆಗೆ ಸುಮಾರು 100 ಕೋಳಿಗಳನ್ನು ನೀಡಲಾಗಿದೆ ಎಂದು ಮಾಲೀಕರಾದ ರಮೇಶ್ ತಿಳಿಸಿದ್ದಾರೆ.
ಇದನ್ನೂ ಓದಿ : ಬೆಂಗಳೂರು ಕಂಬಳ: ಚಿನ್ನದ ಪದಕ ಪಡೆದ 'ಕಾಂತಾರ ಕೋಣಗಳು'