ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿವಿಧ ಯೋಜನೆಗಳ ಕಾಮಗಾರಿಗೆ ಬಂಡವಾಳದ ಸಮಸ್ಯೆ ಎದುರಾಗಿದ್ದು, ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಪ್ರಾಧಿಕಾರ ಬ್ಯಾಂಕಿನಿಂದ 13,352 ಕೋಟಿ ರೂ. ಸಾಲ ಪಡೆದುಕೊಂಡಿದೆ.
ಏರ್ಪೊರ್ಟ್ನಲ್ಲಿ ನಿರ್ಮಾಣಗೊಳ್ಳುತ್ತಿರುವ ಅತ್ಯಾಧುನಿಕ ಟರ್ಮಿನಲ್ 2 ಮತ್ತು ಅದರ ಸಹಯೋಗಿ ಯೋಜನೆಗಳ ನಿರ್ಮಾಣಕ್ಕೆ 13 ಸಾವಿರ ಕೋಟಿಗೂ ಹೆಚ್ಚು ಹಣ ಬೇಕಿದೆ. ಇದೀಗ ಬಿಐಎಎಲ್ ಸಂಸ್ಥೆಯು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಮತ್ತು ಆಕ್ಸಿಸ್ ಬ್ಯಾಂಕ್‍ಗಳನ್ನು ಒಳಗೊಂಡ ಸಿಂಡಿಕೇಟ್ ಮೂಲಕ 10,206 ಕೋಟಿ ರೂ. ಸಾಲ ಪಡೆದುಕೊಂಡಿದೆ. 2021ರ ಮಧ್ಯಭಾಗದಲ್ಲಿ ಪೂರ್ಣವಾಗಲಿರುವ ಈ ಯೋಜನೆಗೆ ಆಕ್ಸಿಸ್ ಬ್ಯಾಂಕ್ 5,106 ಕೋಟಿ ರೂ. ಮುಂಗಡವಾಗಿ ನೀಡಿದರೆ, ಎಸ್‍ಬಿಐ 5,100 ಕೋಟಿ ರೂ. ನೀಡಲಿದೆ. ಸಾಲ ಮರುಪಾವತಿಯ ಅವಧಿ ಸೇರಿದಂತೆ ಸುಮಾರು 14.25 ವರ್ಷಗಳ ಒಳಗೆ ಈ ಸಾಲವನ್ನು ಮರುಪಾವತಿ ಮಾಡಬೇಕಾಗಿದೆ. ಕೆಐಎಎಲ್ ಹಾಕಿಕೊಂಡಿರುವ ಯೋಜನೆ ಪೂರ್ಣವಾದ ಒಂದು ವರ್ಷದವರೆಗೆ ಸಾಲ ಮರುಪಾವತಿಯ ವಿನಾಯಿತಿ ಇದ್ದು, ಬಳಿಕ 10 ವರ್ಷಗಳ ಒಳಗೆ ಈ ಮೊತ್ತವನ್ನು ಮರುಪಾವತಿ ಮಾಡುತ್ತೇವೆ ಎಂದು ಬಿಐಎಎಲ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
ಇದೇ ವೇಳೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಉಪ ವ್ಯವಸ್ಥಾಪಕ ನಿರ್ದೇಶಕರು ಹಾಗೂ ಸಿಸಿಜಿ ಆದ ಪಿ.ಎನ್. ಪ್ರಸಾದ್ ಮಾತನಾಡಿ, ಎಸ್‍ಬಿಐ ಈ ಹಿಂದಿನಿಂದಲೂ ಅನೇಕ ಮೂಲಸೌಕರ್ಯ ಯೋಜನೆಗಳಿಗೆ ಸಕ್ರಿಯವಾಗಿ ಬೆಂಬಲಿಸುತ್ತ ಬಂದಿದೆ. ಅದೇ ರೀತಿ ಕೆಐಎಎಲ್ಗೂ ಬೆಂಬಲ ನೀಡುತ್ತಿದ್ದೇವೆ. ಬಿಐಎಎಲ್‍ಗೆ ಪ್ರಸ್ತುತ ಸಾಲ ನೀಡುವ ಸಂಸ್ಥೆಯಾಗಿರುವ ಎಸ್‍ಬಿಐ ಈಗಾಗಲೇ 2ನೇ ಹಂತದ ಯೋಜನೆಯ ನಿರ್ದಿಷ್ಟ ಭಾಗಕ್ಕೆ ನಿಧಿ ನೆರವು ನೀಡಿದೆ. ಇದರಲ್ಲಿ ರನ್‍ವೇಗಾಗಿ ಮಣ್ಣು ತೆಗೆಯುವ ಕಾರ್ಯ ಸೇರಿದೆ. ಈಗಾಗಲೇ ಸಂಸ್ಥೆ 500 ಕೋಟಿ ರೂ.ಗಳನ್ನು ಈ ಸಂಬಂಧ ನೀಡಿದ್ದು, ಉಳಿದ ಸಾಲದ ಮೊತ್ತವನ್ನು ಪ್ರಸ್ತುತ ಲೀಡ್ ಬ್ಯಾಂಕ್ ಆಗಿ ಎಸ್‍ಬಿಐ ಜೊತೆಗೆ ಆಕ್ಸಿಸ್ ಬ್ಯಾಂಕ್ ನೀಡಲಿವೆ ಎಂದು ತಿಳಿಸಿದ್ದಾರೆ.