ಬೆಂಗಳೂರು : ಸಿಲಿಕಾನ್ ಸಿಟಿಯಲ್ಲಿ ಭೂಮಿ ಕಬಳಿಸಲು ಕಿಡಿಗೇಡಿಗಳು ಇಲ್ಲದ ದಾಖಲೆಗಳನ್ನು ಸೃಷ್ಟಿ ಮಾಡಿ ಮೋಸ ಮಾಡುತ್ತಿರುವ ಹಲವು ಪ್ರಕರಣಗಳು ಕಂಡುಬಂದಿವೆ. ಅದೇ ರೀತಿಯಲ್ಲಿ ಬೋಗಸ್ ಹೌಸಿಂಗ್ ಸೊಸೈಟಿ ಮಾಡಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂಸ್ಥೆಯ ನಿರ್ದೇಶಕ ಹಾಗೂ ಸಿಇಒ ಬಂಧಿಸಿರುವ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ಇತ್ತೀಚೆಗೆ ವಂಚನೆ ಪ್ರಕರಣವೊಂದು ಶೇಷಾದ್ರಿಪುರಂ ಪೊಲೀಸ್ ಠಾಣೆಯ ಮೆಟ್ಟಿಲೇರಿತ್ತು.ಈ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಹೌಸಿಂಗ್ ಸೊಸೈಟಿಯ ಹಾಲಿ ನಿರ್ದೇಶಕ ಕಂ ಸಿಇಒ ಪ್ರತಾಪ್ ಚಂದ್ ರಾಥೋಡ್ ಎಂಬವನನ್ನು ಬಂಧಿಸಿದ್ದಾರೆ. ಶೇಷಾದ್ರಿಪುರಂ ರೈಲ್ವೆ ಪ್ಯಾರಲಲ್ ರಸ್ತೆಯಲ್ಲಿರುವ ನ್ಯಾಷನಲ್ ಟೆಕ್ನಿಕಲ್ ಇನ್ಸ್ಟಿಟ್ಯೂಷನ್ ನ ಹೌಸಿಂಗ್ ಸೊಸೈಟಿಯಲ್ಲಿ ಹಾಲಿ ನಿರ್ದೇಶಕನಾಗಿ ಹಾಗೂ ಸಿಇಒ ಆಗಿ ಕೆಲಸ ಮಾಡುತ್ತಿದ್ದ ಎಂದು ಪ್ರಕರಣದ ಕುರಿತು ಕೇಂದ್ರ ವಿಭಾಗದ ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಆರೋಪಿಗಳ ವಿರುದ್ಧ ದೂರುಗಳು : ಎನ್ಟಿಐನಿಂದ ಕೊಡಿಗೇಹಳ್ಳಿ ಬಳಿ ನಿರ್ಮಿಸಿರುವ ಲೇಔಟ್ ನಲ್ಲಿ ಬಿಡಿಎ ಅನುಮೋದಿತ ನಕ್ಷೆಯಲ್ಲಿರುವ ನಿವೇಶನಗಳನ್ನು ಮಾರಾಟ ಮಾಡಲು ಎನ್.ಟಿ.ಐ ಗೃಹ ನಿರ್ಮಾಣ ಸಹಕಾರ ಸಂಘಕ್ಕೆ ಅನುಮತಿ ನೀಡಿತ್ತು. ಆದರೆ, ಬಿಡಿಎ ನಕ್ಷೆಯಲ್ಲಿ ಅನುಮೋದನೆ ಪಡೆಯದೇ ಇರುವ ಸೈಟ್ ಗಳನ್ನು ನಕಲಿ ದಾಖಲೆ ಸೃಷ್ಟಿಸಿ ಮಾರಾಟ ಮಾಡಲಾಗಿದೆ ಎನ್ನುವ ಆರೋಪ ಕೇಳಿ ಬಂದಿದೆ ಮತ್ತು ಈ ಸಂಬಂಧ ಆರೋಪಿಗಳ ವಿರುದ್ಧ ಹಲವು ದೂರುಗಳು ಬಂದಿವೆ ಎಂದು ಹೇಳಿದ್ದಾರೆ.
ಸಂಸ್ಥೆಯ ಹೆಸರು ದುರ್ಬಳಕೆ : ಮಾಜಿ ಅಧ್ಯಕ್ಷ ನೀಡಿದ ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು, ಆರೋಪಿಗಳ ವಿರುದ್ಧ ಶೇಷಾದ್ರಿಪುರಂ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ತನಿಖೆಯ ವೇಳೆ ಆರೋಪಿಗಳು ನಕಲಿ ದಾಖಲೆ ಸೃಷ್ಟಿಸಿ, ಎನ್.ಐ.ಟಿ ಗೃಹ ನಿರ್ಮಾಣ ಸಂಸ್ಥೆಯ ಹೆಸರನ್ನು ದುರ್ಬಳಕೆ ಮಾಡಿಕೊಂಡು ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ. ಈ ಹಿನ್ನೆಲೆಯಲ್ಲಿ ಸಂಘದ ಹಾಲಿ ನಿರ್ದೇಶಕ ರಾಮಕೃಷ್ಣರೆಡ್ಡಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರತಾಪ್ ಚಂದ್ ರಾಥೋಡ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಮಾಜಿ ಅಧ್ಯಕ್ಷನ ಬಂಧನಕ್ಕೆ ಮುಂದಾದ ಪೊಲೀಸರು : ಆರೋಪಿಗಳನ್ನು ಹೆಚ್ಚಿನ ವಿಚಾರಣೆಗೆ ವಶಕ್ಕೆ ಪಡೆದಿರುವ ಪೊಲೀಸರು ಆರೋಪಿಗಳು ಈ ರೀತಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಇನ್ನೆಷ್ಟು ಮಂದಿಗೆ ವಂಚಿಸಿದ್ದಾರೆ ಎನ್ನುವುದರ ಬಗ್ಗೆ ತನಿಖೆ ಮುಂದುವರೆಸಿದ್ದಾರೆ. ಮತ್ತೊಬ್ಬ ತಲೆ ಮರೆಸಿಕೊಂಡಿರುವ ಮಾಜಿ ಅಧ್ಯಕ್ಷ ಶೃಂಗೇಶ್ವರ ಬಂಧನಕ್ಕೆ ಬಲೆ ಬೀಸಲಾಗಿದೆ ಎಂದು ಡಿಸಿಪಿ ಶ್ರೀನಿವಾಸ್ ಗೌಡ ಹೇಳಿದ್ದಾರೆ.
ಇದನ್ನೂ ಓದಿ :ರಾಮನಗರ: ನಿಂತಿದ್ದ ವಾಹನಗಳಿಗೆ ಬಸ್ ಡಿಕ್ಕಿ ಮಗು ಸಾವು