ಬೆಂಗಳೂರು : ವರುಣಾರ್ಭಟಕ್ಕೆ( Heavy rain in Bengaluru) ಬೆಂಗಳೂರು ಅಕ್ಷರಶಃ ಮುಳುಗಿದೆ. ಹಲವೆಡೆ ಕೆರೆ ಕೋಡಿ ಒಡೆದು ಭಾರೀ ಅವಾಂತರ ಸೃಷ್ಟಿಯಾಗಿದೆ. ಯಲಹಂಕ ಸುತ್ತಮುತ್ತ ಕಂಡು ಕೇಳರಿಯದ (Flood in Yalahanka) ಪ್ರವಾಹದ ಸ್ಥಿತಿ ನಿರ್ಮಾಣವಾದ ಪರಿಣಾಮ ಜನ ತತ್ತರಿಸಿದ್ದಾರೆ.
ನಿನ್ನೆ ತಡರಾತ್ರಿ ಸುರಿದ ಭಾರೀ ಮಳೆಯಿಂದಾಗಿ ಹಲವು ಅಪಾರ್ಟ್ಮೆಂಟ್ಗಳ ಅಡಿಪಾಯ ನೀರಿನಲ್ಲಿ ಮುಳುಗಡೆ(Apartments submerged in water)ಯಾಗಿವೆ. ಸಾವಿರಾರು ನಿವಾಸಿಗಳು ಮನೆಯಿಂದ ಹೊರ ಬರಲಾಗದೆ ಕಂಗಾಲಾಗಿದ್ದಾರೆ.
ಯಲಹಂಕದಲ್ಲಿ ನಿನ್ನೆ ಒಂದೇ ರಾತ್ರಿಯಲ್ಲಿ 144 ಮಿ.ಮೀ ಮಳೆಯಾಗಿದೆ. ಅಟ್ಟೂರು ಲೇಔಟ್ನಲ್ಲಿ 102 ಮಿ.ಮೀ ಹಾಗೂ ದಾಸರಹಳ್ಳಿಯಲ್ಲಿ 105 ಮಿ.ಮೀ ಮಳೆಯಾಗಿದೆ.
ಹಲವಾರು ಮನೆ/ಅಪಾರ್ಟ್ಮೆಂಟ್ಗಳಲ್ಲಿ ಹಾಸಿಗೆ, ಬಟ್ಟೆ, ಆಹಾರ ಸಾಮಗ್ರಿಗಳೆಲ್ಲಾ ನೀರು ಪಾಲಾಗಿವೆ. ಹತ್ತಿರದ ಕೆರೆಗಳು ಕೋಡಿ ಒಡೆದಿರುವುದರಿಂದ ಹಾವು-ಚೇಳುಗಳು ಮನೆಯೊಳಗೆ ಬರುವಂತಾಗಿದೆ. ಅಲ್ಲದೇ, ಬೈಕ್, ಕಾರು, ಆಟೋಗಳು ನೀರಿನಲ್ಲಿ ತೇಲಾಡುತ್ತಿವೆ.
ತಗ್ಗು ಪ್ರದೇಶಗಳ ಮನೆಗಳಿಗೆ ನುಗ್ಗಿದ ನೀರು : ನಿನ್ನೆ ಸಂಜೆ 6 ರಿಂದ ರಾತ್ರಿ 11 ಗಂಟೆವರೆಗೂ ಸುರಿದ ಭಾರೀ ಮಳೆಯಿಂದಾಗಿ ನಗರದ ದಾಸರಹಳ್ಳಿಯ ಸುತ್ತಮುತ್ತಲಿನ ತಗ್ಗು ಪ್ರದೇಶಗಳ ಮನೆಗೆ ನೀರು ನುಗ್ಗಿದ್ದರ ಪರಿಣಾಮ ಜನ ಪರದಾಡುವಂತಾಗಿದೆ.
8ನೇ ಮೈಲಿ, ದಾಸರಹಳ್ಳಿಯಲ್ಲಿ ನಿನ್ನೆ ಸಂಜೆ ಸತತ ನಾಲ್ಕೈದು ಗಂಟೆ ಸುರಿದ ಭಾರೀ ಮಳೆಯಿಂದ ವಾಹನ ಸವಾರರಿಗೆ ಅಡಚಣೆ ಉಂಟಾಗಿದೆ. ಅಲ್ಲದೇ, ಮಹಾಮಳೆಯಿಂದಾಗಿ ಚಿಕ್ಕಬಾಣಾವರ ರೈಲ್ವೆ ಅಂಡರ್ಪಾಸ್, ದಾಸರಹಳ್ಳಿಯ ಮಲ್ಲಸಂದ್ರ, ಬಾಗಲಗುಂಟೆ, ಚಿಕ್ಕಬಾಣಾವರ, ಶೆಟ್ಟಹಳ್ಳಿ ಸೇರಿದಂತೆ ಹಲವೆಡೆ ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ.
ವರುಣನ ಆರ್ಭಟಕ್ಕೆ ಹೆಸರಘಟ್ಟ ರಸ್ತೆ, 8ನೇ ಮೈಲಿ, ತುಮಕೂರು ರಸ್ತೆ ಸೇರಿದಂತೆ ಬೆಂಗಳೂರು ಉತ್ತರಭಾಗದಲ್ಲಿ ಸಂಚಾರ ದಟ್ಟಣೆ ಉಂಟಾಗಿ ಬೈಕ್ ಸವಾರರು ಮತ್ತು ಪಾದಚಾರಿಗಳು ಪರದಾಡುತ್ತಿದ್ದಾರೆ.
ಓದಿ: ಮಳೆ ನಿಂತು ಹೋದರೂ ಕಲಘಟಗಿ ಜನರಿಗೆ ತಪ್ಪದ ಫಜೀತಿ.. ಸೇತುವೆ ಇಲ್ಲದೆ ಸಂಚಾರ ದುಸ್ತರ