ಬೆಂಗಳೂರು: ಯುವತಿ ಸ್ನಾನ ಮಾಡುತ್ತಿದ್ದಾಗ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ಫಿಟ್ನೆಸ್ ಸೆಂಟರ್ ತರಬೇತುದಾರನನ್ನು ರಾಮಮೂರ್ತಿ ನಗರ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಯುವತಿ ನೀಡಿದ ದೂರಿನ ಮೇರೆಗೆ ಆರೋಪಿ ಸಿಬಿಯಾಚನ್ ಎಂಬಾತನನ್ನು ಸೆರೆ ಹಿಡಿಯಲಾಗಿದೆ.
ರಾಮಮೂರ್ತಿ ನಗರದ ಎನ್ಆರ್ಐ ಲೇಔಟಿನಲ್ಲಿರುವ ಫಿಟ್ನೆಸ್ ಸೆಂಟರ್ನಲ್ಲಿ ಬ್ಯಾಡ್ಮಿಂಟನ್ ಹಾಗೂ ಜಿಮ್ ವರ್ಕೌಟ್ ತರಬೇತಿ ಮುಗಿಸಿದ ನಂತರ ಯುವತಿ ಸ್ನಾನ ಮಾಡಲು ಬಾತ್ ರೂಂಗೆ ತೆರಳಿದ್ದರು. ಈ ವೇಳೆ ಜಿಮ್ ಕೋಚ್ ಸಿಬಿಯಾಚನ್, ಕಿಟಕಿಯ ಮೂಲಕ ಮೊಬೈಲ್ನಲ್ಲಿ ಚಿತ್ರೀಕರಿಸುತ್ತಿರುವುದನ್ನು ಗಮನಿಸಿದ್ದರು. ಅನುಮಾನಗೊಂಡು ಹೊರಗೆ ಬಂದು ನೋಡಿದಾಗ ಯಾರೂ ಕಂಡುಬಂದಿರಲಿಲ್ಲ. ತಕ್ಷಣ ಸಿಸಿ ಕ್ಯಾಮರಾ ದೃಶ್ಯಗಳನ್ನು ಪರಿಶೀಲಿಸಿದಾಗ ಸಿಬಿಯಾಚನ್ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣ ಫಿಟ್ನೆಸ್ ಸೆಂಟರ್ ಮ್ಯಾನೇಜರಿಗೆ ವಿಷಯ ತಿಳಿಸಿದ ಯುವತಿ, ನಂತರ ರಾಮಮೂರ್ತಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು, ಆರೋಪಿಯನ್ನು ಬಂಧಿಸಿ, ವಿಚಾರಣೆಗೊಳಪಡಿಸಿದರು.
ಇದನ್ನೂ ಓದಿ: ಬೆಂಗಳೂರು: ಮಳೆಗೆ ಪೊಲೀಸ್ ಶಸ್ತ್ರಾಸ್ತ್ರ ಸಂಗ್ರಹ ಕೊಠಡಿಯ ಗೋಡೆ ಕುಸಿತ, ಒದ್ದೆಯಾದ ಬಂದೂಕುಗಳು
ಬೆಂಗಳೂರಲ್ಲಿ ಮಾಸ್ಕ್ ಧರಿಸಿ ಬಂದ ಪುಂಡರಿಂದ ವಾಹನಗಳು ಮೇಲೆ ದಾಳಿ: ಗೊಂಬೆ ಮಾಸ್ಕ್ ಧರಿಸಿ ಬಂದ ಪುಂಡರ ಗುಂಪೊಂದು ಮನೆ ಮುಂದೆ ನಿಲ್ಲಿಸಿದ್ದ ವಾಹನಗಳ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿದೆ. ತಡರಾತ್ರಿ ಲಗ್ಗೆರೆಯ ರಾಜೀವ್ ಗಾಂಧಿನಗರದಲ್ಲಿ ಮಧ್ಯರಾತ್ರಿ ಕಿಡಿಗೇಡಿಗಳು ಅಟ್ಟಹಾಸ ಮೆರೆದಿದ್ದಾರೆ.
ಮಾಸ್ಕ್ ಧರಿಸಿ ದ್ವಿಚಕ್ರ ವಾಹನದಲ್ಲಿ ಮಧ್ಯರಾತ್ರಿ ಬಂದಿದ್ದ ಮೂವರು ಆರೋಪಿಗಳು, ಮಾರಕಾಸ್ತ್ರಗಳಿಂದ ವಾಹನಗಳಿಗೆ ಹೊಡೆದಿದ್ದಾರೆ. ಇದರಿಂದಾಗಿ ಕಾರು, ಆಟೋ ವಾಹನಗಳ ಗಾಜುಗಳು ಪುಡಿ ಪುಡಿಯಾಗಿವೆ. ಪುಂಡರ ಹಾವಳಿಯಿಂದ ಐದಕ್ಕೂ ಹೆಚ್ಚು ವಾಹನಗಳು ಜಖಂಗೊಂಡಿವೆ. ಸ್ಥಳಕ್ಕೆ ರಾಜಗೋಪಾಲನಗರ ಠಾಣಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪುಂಡರ ವಿರುದ್ಧ ಕ್ರಮ ಕೈಗೊಳ್ಳುವಂತೆ ಸ್ಥಳೀಯರು ಪೊಲೀಸರು ಒತ್ತಾಯಿಸಿದ್ದಾರೆ.