ಬೆಂಗಳೂರು: ಈದ್ಗಾ ಮೈದಾನ ವಿವಾದ ಮುಗಿಯುವ ಲಕ್ಷಣಗಳು ಕಾಣುತ್ತಿಲ್ಲ. ಕಿಚ್ಚು ಜ್ವಲಂತ ಸಮಸ್ಯೆಯಾಗಿ ಈಗ ತೀವ್ರ ಸ್ವರೂಪ ಪಡೆಯುತ್ತಿದೆ. ಮುಂದಿನ ಹೋರಾಟಕ್ಕಾಗಿ ಹೊಸ ಯೋಜನೆ ರೂಪಿಸಿಕೊಳ್ಳಲು ಚಾಮರಾಜಪೇಟೆಯ ನಾಗರಿಕರು ನಿರ್ಧರಿಸಿದ್ದಾರೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟದಿಂದ ಮತ್ತೆ ನಿನ್ನೆ ಸಭೆ ನಡೆಯಿತು. ಸರ್ಕಾರಕ್ಕೆ ಮನವಿ ಕೊಡಲು ಒಮ್ಮತದ ನಿರ್ಧಾರ ಕೈಗೊಂಡು ಸಿಎಂ, ಗೃಹ ಸಚಿವರು ಮತ್ತು ಬಿಬಿಎಂಪಿ ಕಮಿಷನರ್ ಭೇಟಿ ಮಾಡಲು ವೇದಿಕೆ ತೀರ್ಮಾನಿಸಿತು. ಬಿಬಿಎಂಪಿ ಸ್ವತ್ತು ಎಂದು ಘೋಷಣೆ ಆಗುವ ತನಕ ಜಗ್ಗಲ್ಲ ಎಂದು ಒಕ್ಕೂಟದ ಪದಾಧಿಕಾರಿಗಳು ನಿರ್ಣಯ ಕೈಗೊಂಡಿದ್ದಾರೆ.
ಮೈದಾನದ ಉಳಿವಿಗಾಗಿ ಚಾಮರಾಜಪೇಟೆ ಬಂದ್ಗೆ ಕರೆ ನೀಡಿದ್ದೆವು. ಈಗ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದೇವೆ. ಆಟದ ಮೈದಾನವನ್ನಾಗಿ ಉಳಿಸಿಕೊಳ್ಳಲು ಸಭೆ ಮಾಡಿ ಹೋರಾಟದ ರೂಪುರೇಷೆಯ ಬಗ್ಗೆ ಚರ್ಚೆ ಮಾಡಿದ್ದೇವೆ ಎಂದು ನಾಗರಿಕರ ಒಕ್ಕೂಟದ ಅಧ್ಯಕ್ಷ ರಾಮೇಗೌಡ ತಿಳಿಸಿದರು.
3 ದಿನದಲ್ಲಿ ಬೈಕ್ ರ‍್ಯಾಲಿ: 2-3 ದಿನದೊಳಗೆ ನೂರಾರು ಬೈಕ್ಗಳ ಮೂಲಕ ರ‍್ಯಾಲಿ ನಡೆಸಿ ಬಿಬಿಎಂಪಿ ಹಾಗೂ ನಗರಾಭಿವೃದ್ಧಿ ಇಲಾಖೆಗೆ ಮನವಿ ಪತ್ರ ನೀಡಲು ಚಿಂತನೆ ನಡೆಸಿದ್ದೇವೆ. ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಸಂಸದ ಪಿ.ಸಿ.ಮೋಹನ್ ಅವರ ಮೇಲೂ ಒತ್ತಡ ಹೇರಲು ನಿರ್ಧರಿಸಿದ್ದೇವೆ ಎಂದು ವೇದಿಕೆಯ ಸಂಚಾಲಕ ರುಕ್ಮಾಂಗದ ಹೇಳಿದರು.
ಇದನ್ನೂ ಓದಿ: ಈದ್ಗಾ ಮೈದಾನ ವಿವಾದ: ಹಿಂದೂ ಸಂಘಟನೆಗಳು ಪೊಲೀಸರ ಜಟಾಪಟಿ, ಕಾರ್ಯಕರ್ತರ ವಶ