ಬೆಂಗಳೂರು : ಬಿಎಂಟಿಸಿ ಬಸ್‌ನಲ್ಲಿ ನಿರ್ವಾಹಕರೊಬ್ಬರು ಸಜೀವ ದಹನವಾದ ಪ್ರಕರಣದ ತನಿಖೆಯಲ್ಲಿ ಸ್ಪೋಟಕ ತಿರುವು ಸಿಕ್ಕಿದೆ. ತನಿಖೆಯ ಅಂಶಗಳನ್ನು ಗಮನಿಸಿದಾಗ ಬಸ್‌ನಲ್ಲಿ ಇಂಜಿನ್ ದೋಷವಿರಲಿಲ್ಲ, ಇದೊಂದು ಹತ್ಯೆಯೂ ಅಲ್ಲ ಬದಲಾಗಿ ನಿರ್ವಾಹಕ ಮುತ್ತಯ್ಯ ತಾನೇ ಆತ್ಮಹತ್ಯೆಗೆ ಶರಣಾಗಿರಬಹುದು ಎಂಬ ಶಂಕೆ ಬಲವಾಗುತ್ತಿದೆ.
ಘಟನೆಯ ವಿವರ: ನಿಂತಿದ್ದ ಬಿಎಂಟಿಸಿ ಬಸ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಮುತ್ತಯ್ಯ ಸಜೀವ ದಹನವಾದ ಘಟನೆ ಮಾರ್ಚ್ 9ರ ರಾತ್ರಿ ಲಿಂಗಧೀರನಹಳ್ಳಿ ಡಿಪೋ ಬಳಿ ನಡೆದಿತ್ತು. ಲಿಂಗಧೀರನಹಳ್ಳಿ ಡಿಪೋ ತಲುಪಿದ್ದ ಬಸ್‌ನಲ್ಲಿದ್ದ ಮುತ್ತಯ್ಯ ಮಧ್ಯರಾತ್ರಿ ಒಂದು ಗಂಟೆಯವರೆಗೂ ಫೋನ್ ಸಂಭಾಷಣೆಯಲ್ಲಿ ತೊಡಗಿದ್ದರು. ಆ ಬಳಿಕ ಚಾಲಕ ಪ್ರಕಾಶ್ನನ್ನು ರೂಮಿನಲ್ಲಿ ಮಲಗುವಂತೆ ಹೇಳಿ, ಆ ಮಾರ್ಗದ ಕಲೆಕ್ಷನ್ ಹಣವನ್ನು ಅವರ ಕೈಗೆ ನೀಡಿದ್ದಾರೆ. ಚಾಲಕ ಮಲಗಿದ ಬಳಿಕ ಮುತ್ತಯ್ಯ ಬಸ್ಸಿನಿಂದ ಹೊರ ಹೋಗಿದ್ದಾರೆ ಎಂದು ಹೇಳಲಾಗಿದೆ.
ಅದೇ ದಿನ ರಾತ್ರಿ ವೇಳೆ ಮುತ್ತಯ್ಯ ಅವರ ಯುಪಿಐ ಐಡಿಯಿಂದ 700 ರೂಪಾಯಿ ಹಣ ವರ್ಗಾವಣೆಯಾಗಿದೆ. ಘಟನೆ ನಡೆದ ಸ್ಥಳದಿಂದ ಸ್ವಲ್ಪ ದೂರದಲ್ಲಿದ್ದ ಪೆಟ್ರೋಲ್ ಬಂಕ್ ಖಾತೆಗೆ ಹಣ ವರ್ಗಾವಣೆಯಾಗಿದೆ. ಬಂಕ್‌ನಿಂದ ಮುತ್ತಯ್ಯ ಐದು ಲೀಟರ್ ಪೆಟ್ರೋಲ್, ಎರಡು ಲೀಟರ್ ಡೀಸೆಲ್ ನ್ನು ಖರೀದಿಸಿದ್ದಾರೆ. ಪೆಟ್ರೋಲ್ ಬಂಕ್ ಸಿಬ್ಬಂದಿಯಿಂದಲೂ ಮಾಹಿತಿ ದೊರೆತಿದ್ದು, ಸಿಸಿಟಿವಿಯಲ್ಲಿ ಮುತ್ತಯ್ಯ ಅವರ ಚಲನವಲನ ಸೆರೆಯಾಗಿದೆ ಎಂದು ತಿಳಿದುಬಂದಿದೆ.
ಬ್ಯಾಡರಹಳ್ಳಿ ಠಾಣಾ ಪೊಲೀಸರ ತನಿಖೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ. ಹಣಕಾಸಿನ ತೊಂದರೆಗೆ ಸಿಲುಕಿದ್ದ ಮುತ್ತಯ್ಯ ಮುಂಜಾನೆ ವೇಳೆಗೆ ಬಸ್‌ನ ಎಲ್ಲ ಕಿಟಕಿಗಳು ಹಾಗೂ ಡೋರ್ ಅನ್ನು ಒಳಗಿನಿಂದ ಮುಚ್ಚಿ ಪೆಟ್ರೋಲ್, ಡೀಸೆಲ್ ಸುರಿದು ಬೆಂಕಿ ಹಚ್ಚಿಕೊಂಡಿರಬಹುದು ಎನ್ನಲಾಗಿದೆ. ವಿಧಿ ವಿಜ್ಞಾನ ಪ್ರಯೋಗಾಲಯದ ವರದಿ ಬಂದ ಬಳಿಕ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್ಶೀಟ್ ಸಲ್ಲಿಸಲಿದ್ದಾರೆ.
ಇದನ್ನೂ ಓದಿ : ಮಲಗಿದ ಜಾಗದಲ್ಲೇ ಸಜೀವ ದಹನವಾದ ಬಿಎಂಟಿಸಿ ಕಂಡಕ್ಟರ್: ದುರಂತದ ಹಿಂದಿದೆ ಸಾಕಷ್ಟು ಗುಮಾನಿ