ಬೆಂಗಳೂರು: ಪ್ರಸಕ್ತ ರಾಜ್ಯ ರಾಜಕೀಯ ಬೆಳವಣಿಗೆಗಳ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ ನಾಯಕರಿಗೆ ಹೈಕಮಾಂಡ್ ಬುಲಾವ್ ನೀಡಿದ್ದು ರಾತ್ರಿ 9 ಗಂಟೆ ವಿಮಾನದಲ್ಲಿ ಇಬ್ಬರೂ ನಾಯಕರು ದೆಹಲಿಗೆ ಪ್ರಯಾಣ ಬೆಳೆಸುತ್ತಿದ್ದಾರೆ.
ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅರವಿಂದ ಲಿಂಬಾವಳಿ ಮತ್ತು ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿಗೆ ದೆಹಲಿಗೆ ಬರುವಂತೆ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಬುಲಾವ್ ನೀಡಿದ್ದಾರೆ. ಅಮಿತ್ ಶಾ ಕರೆ ಹಿನ್ನೆಲೆಯಲ್ಲಿ ಲಿಂಬಾವಳಿ ಮತ್ತು ಜಾರಕಿಹೊಳಿ ರಾತ್ರಿ 9 ಗಂಟೆ ವಿಮಾನದಲ್ಲಿ ದಿಢೀರ್ ದೆಹಲಿಗೆ ತೆರಳುತ್ತಿದ್ದು, ಇಂದು ತಡರಾತ್ರಿ ಅಥವಾ ನಾಳೆ ಬೆಳಗ್ಗೆ ಅಮಿತ್ ಶಾ ಅವರನ್ನು ಭೇಟಿ ಮಾಡಲಿದ್ದಾರೆ ಎನ್ನಲಾಗಿದೆ.
ಈಗಾಗಲೇ ಬಿಜೆಪಿ ಶಾಸಕರು ರೆಸಾರ್ಟ್ ವಾಸದಲ್ಲಿದ್ದು ಅತೃಪ್ತ ಶಾಸಕರು ಮುಂಬೈ ರೆಸಾರ್ಟ್ನಲ್ಲಿದ್ದಾರೆ,ಅತೃಪ್ತ ಶಾಸಕರ ಪ್ರಕರಣ ಸುಪ್ರೀಂ ಕೋರ್ಟ್ ಅಂಗಳದಲ್ಲಿದ್ದು ವಿಧಾನಸಭೆ ಅಧಿವೇಶನ ಆರಂಭಗೊಂಡಿದೆ. ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಈವರೆಗೆ ಬಿಜೆಪಿ ತೆಗೆದುಕೊಂಡಿರುವ ನಿಲುವುಗಳ ಬಗ್ಗೆ ಮಾಹಿತಿ ಪಡೆದು ಮುಂದೇನು ಮಾಡಬೇಕು ಎನ್ನುವ ಸೂಚನೆ ನೀಡಲಾಗುತ್ತದೆ ಎನ್ನಲಾಗಿದೆ.
ಒಂದು ವಾರಕ್ಕೂ ಹೆಚ್ಚಿನ ಸಮಯದಿಂದ ರಾಜ್ಯ ರಾಜಕೀಯದಲ್ಲಿ ಹೈಡ್ರಾಮಾ ನಡೆಯುತ್ತಿದ್ದರೂ ತಲೆಹಾಕದ ಬಿಜೆಪಿ ಹೈಕಮಾಂಡ್ ಮೊದಲ ಬಾರಿಗೆ ರಾಜ್ಯ ನಾಯಕರಿಗೆ ಬುಲಾವ್ ನೀಡಿದ್ದು ಅಧಿಕೃತವಾಗಿ ಬಿಜೆಪಿ ಹೈಕಮಾಂಡ್ ರಂಗ ಪ್ರವೇಶಕ್ಕೆ ಮುಂದಾಯ್ತಾ ಎನ್ನುವ ಪ್ರಶ್ನೆ ಹುಟ್ಟುಹಾಕಿದೆ.