ಬೆಂಗಳೂರು : ಕಾರು ಪಲ್ಟಿಯಾಗಿ ಸಂಭವಿಸಿದ ರಸ್ತೆ ಅವಘಡದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವನ್ನಪ್ಪಿದ ಘಟನೆ ಇಂದು ಬೆಳಗಿನ ಜಾವ 2:30ರ ಸುಮಾರಿಗೆ ನಗರದ ಹುಣಸಮಾರನಹಳ್ಳಿ ಸಮೀಪ ನಡೆದಿದೆ. ಕಾರ್ತಿಕ್ ಜೈನ್ ಹಾಗೂ ಆದರ್ಶ್ ಕುಮಾರ್ ಮೃತಪಟ್ಟ ವಿದ್ಯಾರ್ಥಿಗಳು ಎಂದು ಗುರುತಿಸಲಾಗಿದೆ.
ಹ್ಯೂಂಡೈಯ್ ಐ 10 ಕಾರಿನಲ್ಲಿ ನಂದಿ ಬೆಟ್ಟಕ್ಕೆ ಟ್ರಿಪ್ ಹೊರಟಿದ್ದ ಖಾಸಗಿ ಕಾಲೇಜಿನ ಒಟ್ಟು ಐವರು ವಿದ್ಯಾರ್ಥಿಗಳು, ಬೆಳಗಿನ ಜಾವ ಹೋಗುವುದು ಬೇಡ ಎಂದು ವಾಪಸ್ ಬರುತ್ತಿದ್ದರು. ನಿದ್ದೆ ಮಂಪರಿನಲ್ಲಿ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಪಲ್ಟಿಯಾಗಿದೆ. ಪರಿಣಾಮ ಕಾರ್ತಿಕ್ ಜೈನ್ ಸ್ಥಳದಲ್ಲೇ ಮೃತಪಟ್ಟರೆ, ಆದರ್ಶ್ ಕುಮಾರ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ. ಕಾರಿನಲ್ಲಿದ್ದ ಉಳಿದ ಮೂವರು ವಿದ್ಯಾರ್ಥಿಗಳು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಯಲಹಂಕ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚಿತ್ರದುರ್ಗ ರಸ್ತೆ ಅಪಘಾತ : ಭಾನುವಾರ ಚಿತ್ರದುರ್ಗ ಜಿಲ್ಲೆಯ ಮಲ್ಲಾಪುರ ಗ್ರಾಮದ ಬಳಿ ಲಾರಿಗೆ ಹಿಂಬದಿಯಿಂದ ಕಾರು ಡಿಕ್ಕಿ ಹೊಡೆದು ಭೀಕರ ರಸ್ತೆ ಅಪಘಾತ ಸಂಭವಿಸಿದೆ. ಅಪಘಾತದಲ್ಲಿ ಒಂದೇ ಕುಟುಂಬದ ನಾಲ್ವರು ಸೇರಿ ಒಟ್ಟು ಐವರು ಸಾವನ್ಬಪ್ಪಿ, ಮೂವರು ಗಾಯಗೊಂಡಿದ್ದರು. ಅಪಘಾತ ನಡೆದ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ. ಪರಶುರಾಮ್ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದರು. ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ : ತುಮಕೂರು : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ವಿದ್ಯಾರ್ಥಿಗಳು ಸಾವು.. ಓರ್ವನ ಸ್ಥಿತಿ ಗಂಭೀರ
ಮೃತರು ವಿಜಯಪುರ ಜಿಲ್ಲೆಯ ಬಸನವಬಾಗೇವಾಡಿ ತಾಲೂಕಿನ ಕುದರಿ ಸಾಲೋಟಗಿ ಗ್ರಾಮದ ಎಸ್. ಕೆ.ಎಸ್ ಭಾರತ ಫೈನಾನ್ಸ್ ನೌಕರ ಸಂಗನಬಸವ ಮಲ್ಲಣ್ಣ ವಂದಾಲ (36), ಅವರ ಪತ್ನಿ ರೇಖಾ ಸಂಗನಬಸವ ವಂದಾಲ(29), ಪುತ್ರ ಅಗಸ್ತ್ಯ (7) ಹಾಗೂ ಸಹೋದರ ಸಂಬಂಧಿ ಯಾಳಗಿ ಗ್ರಾಮದ ಭೀಮಾಶಂಕರ ವಂದಾಲ (28) ಆಸ್ಪತ್ರೆಯಲ್ಲಿ ಅಸುನೀಗಿದ್ದ ಭೀಮಾಶಂಕರ ಗೆಳೆಯ ಮದುಸೂಧನ (28) ಎಂದು ತಿಳಿದು ಬಂದಿದೆ.
ಇದನ್ನೂ ಓದಿ : ಓವರ್‌ಟೇಕ್ ಮಾಡಲು ಹೋಗಿ ಪ್ರಾಣ ಕಳೆದುಕೊಂಡ ಬೈಕ್ ಸವಾರ: ಸಿಸಿಟಿವಿ ದೃಶ್ಯ
ತಾಯಿ - ಮಗ ಸಾವು: ಕೆಎಸ್ಆರ್ಟಿಸಿ ಮತ್ತು ಕಾರಿನ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಸಾವನ್ನಪ್ಪಿ, ಮತ್ತೋರ್ವ ಗಂಭೀರ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಮುದ್ರೆಮನೆ ಬಳಿ ಜುಲೈ (ಶನಿವಾರ) ನಡೆದಿತ್ತು. ಕಾರಿನಲ್ಲಿದ್ದ ಬೆಂಗಳೂರಿನ ಪೂಜಾ ಹಿರೇಮಠ್(42), ಪುತ್ರ ನಿರಂಜನ್(12) ಎಂಬವರು ಸ್ಥಳದಲ್ಲೇ ಸಾವನ್ನಪ್ಪಿದ್ದು, ಪತಿ ಶಿವಯೋಗಯ್ಯ ಗಂಭೀರವಾಗಿ ಗಾಯಗೊಂಡಿದ್ದರು.
ಇದನ್ನೂ ಓದಿ : Chitradurga accident: ಚಿತ್ರದುರ್ಗದಲ್ಲಿ ಭೀಕರ ರಸ್ತೆ ಅಪಘಾತ: ಒಂದೇ ಕುಟುಂಬದ ನಾಲ್ವರು ಸೇರಿ ಐವರ ದುರ್ಮರಣ