ಬೆಂಗಳೂರು: ನಗರದ ಯಲಹಂಕ ವಿಧಾನಸಭಾ ಕ್ಷೇತ್ರದಲ್ಲಿ ಸಂಚಾರ ದಟ್ಟಣೆ ನಿವಾರಣೆಗೆ ಸುಮಾರು 260 ಕೋಟಿ ರೂಪಾಯಿ ವೆಚ್ಚದ ಮೇಲ್ಸೇತುವೆ ಮತ್ತು ಇತರೆ ರಸ್ತೆ ಕಾಮಗಾರಿಗಳಿಗೆ ಸ್ಥಳೀಯ ಶಾಸಕರೂ ಆಗಿರುವ ಬಿಡಿಎ ಅಧ್ಯಕ್ಷ ಎಸ್.ಆರ್.ವಿಶ್ವನಾಥ್ ಶುಕ್ರವಾರ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವಿಶ್ವನಾಥ್ ಯಲಹಂಕ ಭಾಗದಲ್ಲಿ ಜನಸಂಖ್ಯೆ ಹೆಚ್ಚಾಗುತ್ತಿರುವುದರ ಜತೆಗೆ ವಾಹನಗಳ ಸಂಖ್ಯೆಯೂ ಅಧಿಕವಾಗುತ್ತಿದೆ. ವಿಮಾನನಿಲ್ದಾಣ ಸೇರಿದಂತೆ ಇನ್ನಿತರ ಪ್ರದೇಶಗಳಿಗೆ ಸಂಪರ್ಕ ಕಲ್ಪಿಸುವ ಕೇಂದ್ರ ಸ್ಥಾನವಾಗಿರುವುದರಿಂದ ದಿನದಿಂದ ದಿನಕ್ಕೆ ವಾಹನ ದಟ್ಟಣೆ ಹೆಚ್ಚಾಗುತ್ತಿದೆ ಎಂದು ಹೇಳಿದರು.
ಈ ವಾಹನ ದಟ್ಟಣೆಯಿಂದಾಗಿ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ನಾಗರಿಕರ ಸುಗಮ ಸಂಚಾರಕ್ಕೆ ಅಡ್ಡಿ ಉಂಟಾಗುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಮತ್ತು ಬಿಬಿಎಂಪಿ ಸಹಭಾಗಿತ್ವದಲ್ಲಿ ಯಲಹಂಕ ಪೊಲೀಸ್ ಠಾಣೆ ವೃತ್ತದಿಂದ ಮೇಜರ್ ಸಂದೀಪ್ ಉನ್ನಿಕೃಷ್ಣನ್ ರಸ್ತೆವರೆಗೂ ಮೇಲ್ಸೇತುವೆಯನ್ನು 260 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.
ನಮ್ಮ ಬಿಜೆಪಿ ಸರ್ಕಾರ ಬೆಂಗಳೂರು ನಗರದ ಸರ್ವಾಂಗೀಣ ಅಭಿವೃದ್ಧಿಗೆ 6000 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ನೀಡುತ್ತಿದೆ. ಇದರ ಮೂಲಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನಗರದ ಅಭಿವೃದ್ಧಿಗೆ ತಮ್ಮ ಬದ್ಧತೆಯನ್ನು ತೋರಿದ್ದಾರೆ. ಈ ವಿಶೇಷ ಅನುದಾನವನ್ನು ಎಲ್ಲ ಶಾಸಕರು ತಮ್ಮ ತಮ್ಮ ಕ್ಷೇತ್ರಗಳ ಅಭಿವೃದ್ಧಿಗೆ ಪಡೆದುಕೊಂಡು ಅಗತ್ಯ ನಾಗರಿಕ ಸೇವೆಗಳನ್ನು ಕಲ್ಪಿಸಲಿದ್ದೇವೆ ಎಂದು ಹೇಳಿದರು.
ಯಲಹಂಕ ಕೆಂಪೇಗೌಡ ವೃತ್ತದಿಂದ - ಕೋಗಿಲು ವೃತ್ತದವರೆಗೆ ಮೇಲ್ಸೇತುವೆ, ಯಲಹಂಕ ರೈಲ್ವೇ ನಿಲ್ದಾಣದ ರಸ್ತೆಯಿಂದ - ದೊಡ್ಡಬಳ್ಳಾಪುರ ರಸ್ತೆಗೆ ಕೆಳಸೇತುವೆ ಕಾಮಗಾರಿಗಳಿಗೂ ಶಂಕುಸ್ಥಾಪನೆ ನೆರವೇರಿಸಲಾಯಿತು. ಈ ಸಂದರ್ಭದಲ್ಲಿ ಬಿಬಿಎಂಪಿ ಅಧಿಕಾರಿಗಳು, ಬಿಜೆಪಿ ಮುಖಂಡರು ಹಾಗೂ ಸ್ಥಳೀಯರು ಉಪಸ್ಥಿತರಿದ್ದರು.
ಇದನ್ನೂ ಓದಿ:ಕೋವಿಡ್ ಮಾರ್ಗಸೂಚಿ ಅನುಸರಿಸಿ ಸಫಾರಿಗೆ ಅನುಮತಿ ನೀಡಿದ ಸರ್ಕಾರ