ಬೆಂಗಳೂರು : ನಾನೇನು ಬ್ರೋಕರ್ ಅಲ್ಲ.. ಬಿಡಿಎ ಅಧಿಕಾರಿಗಳ ಪಿತೂರಿಯಿಂದ ನನ್ನ ಮೇಲೆ ಎಸಿಬಿ ದಾಳಿ ಮಾಡಿದ್ದಾರೆ ಎಂದು ಕೆಜಿಸರ್ಕಲ್ ನಿವಾಸಿಯಾಗಿರುವ ಅಶ್ವತ್ಥ್ ಹೇಳಿದ್ದಾರೆ.
ಇಂದು ಬೆಳಗ್ಗೆ 9 ಮಂದಿ ಬಿಡಿಎ ಬ್ರೋಕರ್ಗಳ ಮೇಲೆ ಎಸಿಬಿ ಅಧಿಕಾರಿಗಳು ದಾಳಿ ಮಾಡಿದ್ದು, ಈ ಪೈಕಿ ಅಶ್ವತ್ಥ್ ಕೂಡ ಒಬ್ಬರಾಗಿದ್ದು, ದಾಖಲೆ ಜಪ್ತಿ ಮಾಡಿಕೊಂಡು ಎಸಿಬಿ ಅಧಿಕಾರಿಗಳು ದಾಳಿ ಅಂತ್ಯಗೊಳಿಸಿದ್ದಾರೆ.
ದಾಳಿ ಅಂತ್ಯ ಬಳಿಕ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಅಶ್ವತ್ಥ್, ಇಂದು ನನ್ನ ಮನೆ ಮೇಲೆ ಎಸಿಬಿ ದಾಳಿ ನಡೆದಿದೆ. ನಾವು ಅದಕ್ಕೆ ಸಹಕಾರ ಕೊಟ್ಟಿದ್ದೇವೆ. ಅವರ ಕೆಲಸ ಅವರು ಮಾಡಿದ್ದಾರೆ. ನಮ್ಮ ಕುಟುಂಬದ ಒಟ್ಟು 40 ಎಕರೆ ಜಮೀನು ಹೋಗಿದೆ.
ಈ ನಿಟ್ಟಿನಲ್ಲಿ ಹೋರಾಟ ಮಾಡುತ್ತಿರುವೆ. ನಾನು ಸಿವಿಲ್ ಸರ್ವೆಂಟ್ ಅಲ್ಲ. ಖಾಸಗಿ ವ್ಯಕ್ತಿ. ನನ್ನ ಮೇಲೆ ಹೇಗೆ ದಾಳಿ ಎಂದು ಕೇಳಿದ್ದೆ, ಅದಕ್ಕೆ ನಮಗೆ ವಾರೆಂಟ್ ಇದೆ ಎಂದು ಎಸಿಬಿ ಅಧಿಕಾರಿಗಳು ಹೇಳಿದ್ದರು.
ವಿಶ್ವೇಶ್ವರಯ್ಯ ಲೇಔಟ್ನಲ್ಲಿ ರೈತರ ಜಮೀನು ಕಳೆದುಕೊಂಡಿರುವ ವಿಚಾರಕ್ಕೆ ನಾನು ಲೀಡರ್‌ಶಿಪ್ ವಹಿಸಿಕೊಂಡು ಕೆಲಸ ಮಾಡಿದ್ದೆ. ರೈತರಿಗೆ ಹಣ ಕೊಟ್ಟಿಲ್ಲ, ಈ ವಿಚಾರಕ್ಕೆ ನಾನು ಹೋರಾಡುತ್ತಿದ್ದೆ. ಯಾವ ಯಾವ ರೈತರಿಗೆ ಅನ್ಯಾಯ ಆಗಿದೆ ಅದರ ವಿರುದ್ಧ ಎಲ್ಲಾ ನಮ್ಮ ಹಳ್ಳಿಯ ರೈತರನ್ನು ಒಗ್ಗೂಡಿಸಿ ಪ್ರತಿಭಟನೆ ಮಾಡಿಸುತ್ತೇನೆ.
ಅಧಿಕಾರಿಗಳ ಕೊರಳ ಪಟ್ಟಿ ಹಿಡಿದು ಕೆಲಸ ಮಾಡಿಸದೆ ಬಿಡುವುದಿಲ್ಲ. 1,600 ಕೋಟಿ ಹಣ ಬಂದಿದೆ. ಆದರೆ, ಅದನ್ನು ರೈತರಿಗೆ ಕೊಟ್ಟಿಲ್ಲ, ಅದನ್ನು ಬಿಟ್ಟು ಬೇರೆ ಬೇರೆ ಕಡೆ ಕೆಲಸ ಮಾಡುತ್ತಿದ್ದಾರೆ. ಬಿಡಿಎ ಕಮಿಷನರ್ ರಾಜೇಶ್ ಗೌಡ ಇದಕ್ಕೆಲ್ಲಾ ಕಾರಣ ಎಂದು ಆರೋಪಿಸಿದ್ದಾರೆ.
ಮಧ್ಯವರ್ತಿಗಳು ಸೇರಿಕೊಂಡು ಬಿಡಿಎ ಆಸ್ತಿ ಕಬಳಿಸುತ್ತಿದ್ದಾರೆ ಎಂದು ಹೇಳುತ್ತಾರೆ. ಬ್ರೋಕರ್ಗಳು ಸೇರಿ ಆಸ್ತಿ ವಂಚನೆ ಆಗುತ್ತಾ? ನಾನು ಕಳ್ಳತನ ಮೋಸ ಮಾಡಿ ಏನು ಮಾಡಿಲ್ಲ. ಮನೆಗೆ ಅಧಿಕಾರಿಗಳು ಬಂದಿದ್ದಾರೆ, ದಾಖಲೆ ಪರಿಶೀಲಿಸಿದ್ದಾರೆ. ರಾಜೇಶ್ ಎಂಬ ಅಧಿಕಾರಿ ಬಂದಿದ್ದರಲ್ಲ ಅವರು ಬ್ರೋಕರ್ ಕೆಲಸ ಮಾಡುತ್ತಿರೋದು ಎಂದು ಆರೋಪಿಸಿದ್ದಾರೆ.