ಬೆಂಗಳೂರು : ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತ್ಯೇಕ ಹಸಿ ಕಸದ ಟೆಂಡರ್ ಜಾರಿಯಾದ ಬಳಿಕ ಒಣಕಸ ಸಂಗ್ರಹಕ್ಕೆ ಪ್ರತ್ಯೇಕ ನಿಯಮ ಮಾಡಲಾಗಿದೆ.
ಚಿಂದಿ ಆಯುವವರು ಹಾಗೂ ಸ್ವಯಂ ಸೇವ ಸಂಘಗಳಿಗೆ ಒಣತ್ಯಾಜ್ಯ ಸಂಗ್ರಹದ ಜವಾಬ್ದಾರಿ ನೀಡಲಾಗಿದ್ದು, ಇಂದು 18 ಒಣ ಕಸ ಸಂಗ್ರಹ ವಾಹನಗಳಿಗೆ ಚಾಲನೆ ನೀಡಲಾಯಿತು. ಪಾಲಿಕೆ ಆಡಳಿತಾಧಿಕಾರಿ ಹಾಗೂ ಆಯುಕ್ತರು ಬಿಬಿಎಂಪಿ ಕೇಂದ್ರ ಕಛೇರಿ ಆವರಣದಲ್ಲಿ ವಾಹನಗಳಿಗೆ ಚಾಲನೆ ನೀಡಿದರು. ಗೇಲ್ ಸಂಸ್ಥೆಯು ಸಿಎಸ್‌ಆರ್ ಅಡಿ 18 ಸಿಎನ್‌ಜಿ ಒಣ ತ್ಯಾಜ್ಯ ಸಂಗ್ರಹಣಾ ವಾಹನಗಳನ್ನು ಪಾಲಿಕೆಗೆ ಹಸ್ತಾಂತರ ಮಾಡಿದೆ.
ಈ ವೇಳೆ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ, ಬಿಬಿಎಂಪಿ ವ್ಯಾಪ್ತಿಯಲ್ಲಿ ಪ್ರತಿದಿನ 4,200 ಮೆಟ್ರಿಕ್ ಟನ್ ತ್ಯಾಜ್ಯ ಉತ್ಪತಿಯಾಗುತ್ತಿದೆ. ಅದನ್ನು, ಕಾಂಪ್ಯಾಕ್ಟರ್ ಹಾಗೂ ಆಟೋ ಟಿಪ್ಪರ್‌ಗಳ ಮೂಲಕ ಸಂಗ್ರಹಿಸಿ ವಿಲೇವಾರಿ ಮಾಡಲಾಗುತ್ತಿದೆ. 4,200 ಟನ್ ಜೊತೆಗೆ 1,700 ರಿಂದ 1,800 ಟನ್ ಬಲ್ಕ್ ಜನರೇಟ್ ತ್ಯಾಜ್ಯ ಉತ್ಪತ್ತಿ ಆಗುತ್ತಿದ್ದು, ಬಲ್ಕ್ ಜನರೇಟರ್ ಗುತ್ತಿಗೆದಾರರು ಅದನ್ನು ಸಂಗ್ರಹ ಮಾಡುತ್ತಿದ್ದಾರೆ. 4,200 ಟನ್ ತ್ಯಾಜ್ಯದಲ್ಲಿ 1,200 ಟನ್ ಒಣಕಸ ಸೇರಿದೆ. ಚಿಂದಿ ಆಯುವವರು ಮತ್ತು ಸ್ವ-ಸಹಾಯ ಗುಂಪುಗಳು ವಾರದಲ್ಲಿ ಎರಡು ಬಾರಿ ಒಣ ತ್ಯಾಜ್ಯ ಸಂಗ್ರಹ ಮಾಡಲಿದ್ದಾರೆ ಎಂದರು.
ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಕೆಲವೆಡೆ ಬೇರ್ಪಡಿಸಿ ಕೊಟ್ಟರೆ, ಇನ್ನು ಕೆಲವಡೆ ಮಿಶ್ರಣ ಮಾಡಿ ಕೊಡುತ್ತಿದ್ದರು. ಈ ನಿಟ್ಟಿನಲ್ಲಿ ಹೊಸ ಟೆಂಡರ್ ಪದ್ದತಿ ಜಾರಿಗೆ ತರಲಾಗಿದ್ದು, ಹಸಿ, ಒಣ ಹಾಗೂ ಸ್ಯಾನಿಟರಿ ತ್ಯಾಜ್ಯವನ್ನು ಪ್ರತ್ಯೇಕವಾಗಿ ಸಂಗ್ರಹಿಸಲಾಗುತ್ತಿದೆ. ಒಣ ತ್ಯಾಜ್ಯವನ್ನು ಚಿಂದಿ ಆಯುವವರು ಮತ್ತು ಸ್ವ-ಸಹಾಯ ಗುಂಪುಗಳು ವಾರದಲ್ಲಿ ಎರಡು ಬಾರಿ ಸಂಗ್ರಹ ಮಾಡಲಿದ್ದಾರೆ. ಇದರಿಂದ ಶೇ. 100 ರಷ್ಟು ತ್ಯಾಜ್ಯ ವಿಂಗಡಣೆ ಮಾಡಬಹುದಾಗಿದೆ. ಯಾರು ವಿಂಗಡಣೆ ಮಾಡಿಕೊಡುವುದಿಲ್ಲವೋ ಅಂತವರಿಗೆ ದಂಡ ವಿಧಿಸಲಾಗುತ್ತದೆ. ಶೇ. 100 ಕಸ ವಿಂಗಡಣೆಯಾದರೆ ಸುಲಭವಾಗಿ ಕಸ ವಿಲೇವಾರಿ ಮಾಡಬಹುದಾಗಿದೆ. ನಗರದಲ್ಲಿ ಸುಮಾರು 7,500 ಚಿಂದಿ ಆಯುವರರಿದ್ದು, ಅವರೆಲ್ಲರಿಗೂ ಕೆಲಸ ಕೊಟ್ಟರೆ ಜೀವನ ರೂಪಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಪಾಲಿಕೆ ವ್ಯಾಪ್ತಿಯಲ್ಲಿ ಸುಮಾರು 167 ಒಣ ತ್ಯಾಜ್ಯ ಸಂಗ್ರಹಣಾ ಕೇಂದ್ರಗಳಿದ್ದು, 32 ಕಡೆ ಘಟಕ ತೆರೆಯಲು ಹಾಗೂ ಹೆಚ್ಚಿನ ವಾಹನ ಖರೀದಿಸಲು ಬಿಬಿಎಂಪಿ ಹಂತ ಹಂತವಾಗಿ ಕ್ರಮ ಕೈಗೊಳ್ಳಲಿದೆ ಎಂದರು.