ಬೆಂಗಳೂರು : ಕೊರೊನಾ (ಕೋವಿಡ್-19) ವೈರಸ್ ಕರ್ನಾಟಕಕ್ಕೂ ಕಾಲಿಟ್ಟಾಗಿದೆ. ಶಂಕಿತ ಪ್ರಕರಣಗಳು ಹೆಚ್ಚುತ್ತಲೇ ಇವೆ. ರಾಜ್ಯದಲ್ಲಿ ಒಂದು ವಾರ ಸಭೆ, ಸಮಾರಂಭ, ಸಾರ್ವಜನಿಕ ಮಾಲ್‌ಗಳನ್ನೂ ಬಂದ್ ಮಾಡಿಸಲಾಗಿದೆ. ಆದರೆ, ಪೌರಕಾರ್ಮಿಕರ ಬಗ್ಗೆ ಮಾತ್ರ ಯಾರೂ ಕಾಳಜಿ ವಹಿಸಿದಂತೆ ಕಾಣುತ್ತಿಲ್ಲ.
ನಗರದ ನೈರ್ಮಲ್ಯ ಕಾಪಾಡುವ ಪೌರಕಾರ್ಮಿಕರು ದಿನ ಬೆಳಗಾದ್ರೆ ಸ್ವಚ್ಛತೆಯಲ್ಲಿ ತೊಡಗಿಸಿಕೊಳ್ಳುತ್ತಾರೆ. ಆದರೆ, ಕೇಂದ್ರ ಸರ್ಕಾರದ ಕಚೇರಿಗಳು, ಹೈಕೋರ್ಟ್ ಸಿಬ್ಬಂದಿ ನೌಕರರಿಗೆ ಕೂಡ ಬಯೋಮೆಟ್ರಿಕ್ ತಾತ್ಕಾಲಿಕವಾಗಿ ರದ್ದು ಮಾಡಲಾಗಿದೆ. ಹಾಜರಾತಿ ಪುಸ್ತಕದ ಮೂಲಕವೇ ಹಾಜರಾತಿ ಪಡೆಯಲಾಗ್ತಿದೆ. ಆದರೆ, ಬಿಬಿಎಂಪಿ ಮಾತ್ರ ಪೌರಕಾರ್ಮಿಕರಿಗೆ ಇನ್ನೂ ಬಯೋಮೆಟ್ರಿಕ್ ಮುಖಾಂತರವೇ ಹಾಜರಾತಿ ಪಡೆಯುತ್ತಿದೆ. ಬಯೋಮೆಟ್ರಿಕ್ ಮೂಲಕ ಸೋಂಕು ತಗಲುವ ಸಾಧ್ಯತೆ ಹೆಚ್ಚಾಗಿದೆ. ಪ್ರತಿಯೊಬ್ಬರೂ ಬಯೋಮೆಟ್ರಿಕ್‌ಗೆ ಒಂದೇ ಎಲೆಕ್ಟ್ರಾನಿಕ್ ಮೆಷಿನ್ ಬಳಸುವುದರಿಂದ ಸೋಂಕು ಹರಡುವ ಸಾಧ್ಯತೆ ಇರುತ್ತದೆ.
ಪಾಲಿಕೆ ಆದಷ್ಟು ಬೇಗ ಬಯೋಮೆಟ್ರಿಕ್ ರದ್ದು ಮಾಡಿ, ಹಾಜರಾತಿ ಪುಸ್ತಕದ ಮೂಲಕ ಹಾಜರಾತಿ ಪಡೆಯಬೇಕೆಂದು ಒತ್ತಾಯ ಕೇಳಿ ಬರುತ್ತಿದೆ.