ಬೆಂಗಳೂರು: ನಗರದ ವಾಯುಮಾಲಿನ್ಯ ಕಡಿಮೆ ಮಾಡಿ, ಗಾಳಿಯ ಗುಣಮಟ್ಟ ಹೆಚ್ಚಿಸಲು ಬಿಬಿಎಂಪಿ ಹೊಸ ಪ್ಲಾನ್ ಮಾಡಿದೆ. ರಸ್ತೆ ಕಾಮಗಾರಿಗಳು, ಕಟ್ಟಡ ಕಾಮಗಾರಿಗಳು, ಹೆಚ್ಚು ವಾಹನಗಳು ಓಡಾಡುವ ಪ್ರಮುಖ ವಾಣಿಜ್ಯ ಪ್ರದೇಶಗಳಲ್ಲಿ ಪ್ರತ್ಯೇಕ ವಾಹನದ ಮೂಲಕ ನೀರನ್ನು ಸ್ಪ್ರೇ ಮಾಡಲು ಆರು ವಾಹನಗಳ ಖರೀದಿಗೆ ಬಿಬಿಎಂಪಿ ಮುಂದಾಗಿದ್ದು, ಇನ್ನೆರಡು ವಾರದಲ್ಲಿ ಈ ವಾಹನಗಳು ರಸ್ತೆಗಿಳಿಯಲಿವೆ.
ಈಗಾಗಲೇ ಕೋವಿಡ್ ಮೊದಲನೇ ಅಲೆಯಲ್ಲಿ ಆರೋಗ್ಯ ವಿಭಾಗ ಖರೀದಿಸಿದ್ದ ಎರಡು ಸ್ಯಾನಿಟೈಸೇಷನ್ ವಾಹನಗಳನ್ನು ಘನತ್ಯಾಜ್ಯ ಹಾಗೂ ರಸ್ತೆ ಮೂಲಭೂತ ಸೌಕರ್ಯ ವಿಭಾಗಕ್ಕೆ ಹಸ್ತಾಂತರಿಸಿದ್ದು, ಈಗಾಗಲೇ ನಗರದ ರಸ್ತೆಗಳಲ್ಲಿ ನೀರು ಚಿಮ್ಮಿಸುವ ಉದ್ದೇಶಕ್ಕೆ ಬಳಸಿಕೊಳ್ಳಲಾಗುತ್ತಿದೆ. ಪಂಪ್ ಮೂಲಕ ಹೈ ಪ್ರೆಷರ್ನಲ್ಲಿ ನೀರನ್ನು ಚಿಮ್ಮಿಸಿ, ಆ ಮೂಲಕ ಗಾಳಿಯಲ್ಲಿರುವ ಧೂಳನ್ನು ಕಡಿಮೆ ಮಾಡಲು ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
ಗಾಳಿಯಲ್ಲಿರುವ ಬಿಡಿ ಧೂಳಿನ ಕಣ (ಸಸ್ಪೆಂಡೆಡ್ ಪಾರ್ಟಿಕ್ಯುಲೇಟ್ ಮ್ಯಾಟರ್) ಕಡಿಮೆ ಮಾಡಲು ಕೇಂದ್ರ ಸರ್ಕಾರ ಈ ಯೋಜನೆಯನ್ನು ಕೈಗೆತ್ತಿಕೊಂಡಿದೆ. ಅಲ್ಲದೇ 6 ವಾಹನಗಳ ಖರೀದಿಗೆ 1 ಕೋಟಿ 80 ಲಕ್ಷ ರೂ. ಅನುದಾನವನ್ನು ಪಾಲಿಕೆಗೆ ಬಿಡುಗಡೆ ಮಾಡಿದೆ. ವಾಹನವೊಂದಕ್ಕೆ 24 ಲಕ್ಷ ರೂ. ಖರೀದಿ ವೆಚ್ಚ ಹಾಗೂ 6 ಲಕ್ಷ ರೂ. ವರ್ಷದ ನಿರ್ವಹಣೆಗೆ ವೆಚ್ಚ ಮಾಡಲಾಗುತ್ತದೆ. ಈಗಿರುವ ಎರಡು ವಾಹನಗಳಿಂತಲೂ ಹೆಚ್ಚು ಅಭಿವೃದ್ಧಿ ಹೊಂದಿರುವ ವಾಹನಗಳಾಗಿವೆ. ಸದ್ಯ ಇರುವ ಎರಡು ವಾಹನಗಳನ್ನು ಕೋವಿಡ್ ಸಮಯದಲ್ಲಿ ಸ್ಯಾನಿಟೈಸೇಷನ್ ಮಾಡಲು 1.2 ಕೋಟಿ ರೂ. ವೆಚ್ಚದಲ್ಲಿ ಖರೀದಿಸಲಾಗಿತ್ತು. ಸದ್ಯ ಸ್ಯಾನಿಟೈಸೇಷನ್ ಉಪಯುಕ್ತವಲ್ಲದ ಕಾರಣ ಧೂಳು ಕಡಿಮೆ ಮಾಡುವ ಉದ್ದೇಶಕ್ಕೆ ಬಳಸಲಾಗ್ತಿದೆ.
ವಾಹನಗಳ ಮೂಲಕ ರಸ್ತೆಗಳಲ್ಲಿ ನೀರನ್ನು ಸ್ಪ್ರೇ ಮಾಡಲು, ಜಲಮಂಡಳಿ ಸಂಸ್ಕರಿಸಿದ ತ್ಯಾಜ್ಯ ನೀರನ್ನೇ ಮರುಬಳಕೆ ಮಾಡಲಾಗ್ತಿದೆ. ಕಬ್ಬನ್ ಪಾರ್ಕ್ನಲ್ಲಿ ಅಳವಡಿಸಿರುವ ಎಸ್ಟಿಪಿ ನೀರನ್ನು ಸದ್ಯ ಬಳಸಿಕೊಳ್ಳಲಾಗ್ತಿದೆ ಎಂದು ರಸ್ತೆ ಮೂಲಭೂತ ಸೌಕರ್ಯದ ಲಾರ್ಯಪಾಲಕ ಅಭಿಯಂತರ ನಂದೀಶ್ ಈಟಿವಿ ಭಾರತಗೆ ತಿಳಿಸಿದರು. ವಾಹನಗಳ ಮೂಲಕ ನೀರು ಚಿಮ್ಮಿಸಿ ಧೂಳು ಕಡಿಮೆ ಮಾಡುವುದರ ಜೊತೆಗೆ ನಗರದ 40 ಜಂಕ್ಷನ್ಗಳಲ್ಲಿ ನೀರಿನ ಕಾರಂಜಿ ನಿರ್ಮಾಣ ಮಾಡುವ ಯೋಜನೆಗೂ ವಿಸ್ತೃತ ಯೋಜನಾ ವರದಿ ಸಿದ್ಧವಾಗುತ್ತಿದ್ದು, ನಂತರ ಟೆಂಡರ್ ಕರೆಯಲಾಗುತ್ತದೆ ಎಂದರು.
ಮಾಲಿನ್ಯ ತಗ್ಗಿಸಲು ಈ ಯೋಜನೆ ಎಷ್ಟು ಉಪಕಾರಿ?
ಪರಿಸರ ತಜ್ಞರ ಪ್ರಕಾರ ಸರ್ಕಾರಗಳ ಈ ಯೋಜನೆಗಳು ಮಾಲಿನ್ಯ ತಗ್ಗಿಸುವಲ್ಲಿ ಹೆಚ್ಚು ಪ್ರಯೋಜನವಾಗಲಾರದು. ಇದು ಕೇವಲ ಹಣ ಖರ್ಚು ಮಾಡುವ ಯೋಜನೆಯಾಗಲಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ. ನಗರದಲ್ಲಿ ಈಗಾಗಲೇ ಕಟ್ಟಡ ಕಾಮಗಾರಿ ನಡೆಯುವ ಜಾಗದಲ್ಲಿ, ಕ್ವಾರಿಗಳು, ಗಣಿಗಾರಿಕೆ ಜಾಗಗಳಲ್ಲಿ ಸಣ್ಣ ಧೂಳಿನ ಕಣಗಳನ್ನು ಕಡಿಮೆ ಮಾಡಲು, ಧೂಳು ಹರಡದೇ ಇರಲು ಈ ಕ್ರಮ ಕೈಗೊಳ್ಳಲಾಗುತ್ತಿದೆ. ಆದರೆ ಸಾಕಷ್ಟು ಟ್ರಾಫಿಕ್ ಜಾಂ ಇರುವ ನಗರದಲ್ಲಿ ವಾಹನಗಳ ಮೂಲಕ ರಸ್ತೆಯಲ್ಲಿ ಈ ರೀತಿ ನೀರು ಚಿಮ್ಮಿಸುವುದು ಎಷ್ಟು ಪ್ರಮಾಣದಲ್ಲಿ ಪರಿಣಾಮಕಾರಿಯಾಗಬಹುದು. ಗಾಳಿಯಲ್ಲಿನ ಧೂಳಿಗೆ ನೀರು ಚಿಮ್ಮಿಸಿದಾಗ ನೆಲಮಟ್ಟಕ್ಕೆ ಬಂದರೂ, ಮತ್ತೆ ವಾಹನಗಳು ಓಡಾಡುವುದರಿಂದ ಧೂಳು ಏಳುವ ಸಾಧ್ಯತೆ ಇರುತ್ತದೆ. ನೀರಿನ ಕಾರಂಜಿಗಳಿಂದಲೂ ಇದು ಅಸಾಧ್ಯ. ಪರಿಸರ ರಕ್ಷಣೆಯನ್ನು ಅದಕ್ಕೆ ಪೂರಕವಾದ ವಿಧಾನಗಳಿಂದಲೇ ಅಂದರೆ ಕೆರೆ ಸಂರಕ್ಷಣೆ, ಗಿಡ ನೆಡುವುದರಿಂದ ಮಾತ್ರ ಉಳಿಸಲು ಸಾಧ್ಯ ಎಂದು ಹೆಸರು ಹೇಳಲು ಇಷ್ಟ ಪಡದ ಹಿರಿಯ ಪರಿಸರ ಅಧಿಕಾರಿಯೊಬ್ಬರು ತಿಳಿಸಿದರು.
ಕೆರೆಗಳು, ಮರಗಳು ವಾತಾವರಣವನ್ನು ತಂಪು ಇಡುವಲ್ಲಿ ಸಹಕಾರಿ. ಆದರೆ ನಗರದಲ್ಲಿ ಮರಗಳ ನಾಶದಿಂದ ನಗರದ ಉಷ್ಣಾಂಶ ಏರಿಕೆಯಾಗುತ್ತಲೇ ಇದೆ. ಇದರಿಂದಾಗಿ (ಹೀಟ್ ಲ್ಯಾಂಡ್ ಪರಿಣಾಮದಿಂದ) ಬಿಸಿ ಗಾಳಿ ಹಗುರವಾಗಿದ್ದು, ಇದರೊಂದಿಗೆ ಧೂಳು ಸೇರಿ ವಾತಾವರಣದಲ್ಲಿ ಹೆಚ್ಚು ವಾಯುಮಾಲಿನ್ಯವಾಗಲು ಕಾರಣವಾಗುತ್ತದೆ. ಪ್ರಕೃತಿದತ್ತವಾಗಿ ವಾತಾವರಣ ತಂಪಾಗಿದ್ದರೆ ಈ ವಾತಾವರಣದ ಗಾಳಿ ಭಾರವಾಗಿ ಇರುವುದರಿಂದ ಧೂಳಿನ ಪ್ರಮಾಣವೂ ಕಡಿಮೆ ಇರುತ್ತದೆ ಎಂದು ಅವರು ವಿವರಿಸಿದರು. ಒಟ್ಟಿನಲ್ಲಿ ಪರಿಸರ ರಕ್ಷಣೆ ಹೆಸರಲ್ಲಿ ಸರ್ಕಾರ, ಸ್ಥಳೀಯ ಆಡಳಿತಗಳು ದುಂದು ವೆಚ್ಚಕ್ಕೆ ಮುಂದಾಗುತ್ತಿವೆಯಾ ಎಂಬ ವಾದಗಳೂ ಕೇಳಿಬಂದಿವೆ.