ಬೆಂಗಳೂರು: ಸತತ ಮಳೆಯಿಂದಾಗಿ ಕಂಗೆಟ್ಟಿರುವ ನಗರದ ಜನತೆಗ ಮತ್ತೊಂದು ತಲೆನೋವು ಶುರುವಾಗಿದೆ. ಒತ್ತುವರಿ ಜಾಗ ಎಂದು ಗೊತ್ತಿಲ್ಲದೇ ಕೋಟಿಗಟ್ಟಲೇ ಕೊಟ್ಟು ಜಾಗಕೊಂಡಿರುವ ಮಂದಿ ಇದೀಗ ಕಂಗಾಲಾಗಿದ್ದಾರೆ.
ಸದ್ಯ ಸಿಲಿಕಾನ್ ಸಿಟಿ ಮಳೆಯ ಹೊಡೆತದಿಂದ ಕ್ರಮೇಣ ಚೇತರಿಸಿಕೊಳ್ಳುತ್ತಿದೆ. ಈ ನಡುವೆ ಅಕ್ರಮವಾಗಿ ನಿರ್ಮಿಸಲಾದ ಕಟ್ಟಡ,ಅಪಾರ್ಟ್ಮೆಂಟ್ಎಲ್ಲವನ್ನೂ ನಿರ್ದಾಕ್ಷಿಣ್ಯವಾಗಿ ತೆರವು ಮಾಡುತ್ತೇವೆ ಎಂದು ಬಿಬಿಎಂಪಿ ಗುಡುಗಿದೆ. ಇದರಿಂದ ಅಕ್ರಮವಾಗಿ ಒತ್ತುವರಿ ಮಾಡಲಾದ ಜಾಗದಲ್ಲಿ ಗೊತ್ತಿಲ್ಲದೆ ಅಪಾರ್ಟ್ಮೆಂಟ್, ವಿಲ್ಲಾ ಕೊಂಡ ಜನರಿಗೆ ಆತಂಕ ಶುರುವಾಗಿದೆ.
ಪ್ರವಾಹದಿಂದ ಕೆರೆ, ರಾಜಕಾಲುವೆ ಒತ್ತುವರಿ ತೆರವಿಗೆ ಆಗ್ರಹ ಹೆಚ್ಚಾಗಿದೆ. ಇದರಿಂದ ಬಿಬಿಎಂಪಿ ನೋಟಿಸ್ ನೀಡದೇ ತೆರವಿಗೆ ತೀರ್ಮಾನಿಸಿದೆ. ತಪ್ಪು ಮಾಡಿದ್ದು ಪಾಲಿಕೆ, ಬಿಡಿಎ. ಆದರೆ, ಶಿಕ್ಷೆ ಮಾತ್ರ ಮನೆ ಮಾಲೀಕರಿಗೆ. ರೇರಾ, ಬ್ಯಾಂಕ್, ಬಿಡಿಎ, ಬಿಬಿಎಂಪಿ ಅಪ್ರೂವಲ್ ಪಡೆದ ಅಪಾರ್ಟ್ಮೆಂಟ್ ಅಕ್ರಮ ಎಂದಾದರೆ ಪಾಲಿಕೆ ಅಧಿಕಾರಿಗಳು ಜವಾಬ್ದಾರರೇ ಹೊರತು ಜನರಲ್ಲ ಎಂದು ಆರೋಪಿಸಲಾಗುತ್ತಿದೆ.
ಮಹದೇವಪುರದಲ್ಲಿ 136 ಅಕ್ರಮ ಕಟ್ಟಡಗಳು: ಮಹಾದೇವಪುರ ವಲಯದಲ್ಲಿ ಅತಿ ಹೆಚ್ಚು ಕೆರೆ, ಕೆರೆಯ ಬಫರ್ ಝೋನ್, ರಾಜಕಾಲುವೆ ಒತ್ತುವರಿಯಾಗಿದ್ದು, 136 ಅಕ್ರಮ ಕಟ್ಟಡಗಳನ್ನು ಪಾಲಿಕೆ ಗುರುತಿಸಿದೆ. ಈ ಪೈಕಿ ಯಮಲೂರಿನ ದಿವ್ಯಶ್ರೀ ಟೆಕ್ ಪಾರ್ಕ್, ಎಫೈಲಾನ್ ಪ್ರಾಪರ್ಟೀಸ್ ಕೂಡ ಸೇರಿದೆ ಎಂದು ಪಾಲಿಕೆ ಅಧಿಕಾರಿಗಳು ತಿಳಿಸಿದ್ದಾರೆ.
20 ವರ್ಷಗಳ ಹಿಂದೆ ಪ್ರಾಪರ್ಟಿ ಖರೀದಿ: ಈ ಬಗ್ಗೆ ಎಸ್ಪಿಲಾನ್ ವಿಲ್ಲಾ ಮಾಲೀಕರು ಮಾತನಾಡಿ, ಕಳೆದ 20 ವರ್ಷಗಳಿಂದ ಈ ಪ್ರಾಪರ್ಟಿ ಇಲ್ಲಿ ಇದೆ. ಈ ಬಾರಿ ಪ್ರವಾಹ ಉಂಟಾಗಿದೆ. ಈಗ ಬಂದು ಇದು ಒತ್ತುವರಿ ಜಾಗ ತೆರವು ಮಾಡುತ್ತೇವೆ ಎಂದರೆ ನಾವು ಎಲ್ಲಿಗೆ ಹೋಗಬೇಕು. ಇಲ್ಲಿ ಅನುಮತಿ ಕೊಡುವ ಮೊದಲೇ ಇದು ಒತ್ತುವರಿ ಎಂದು ಬಿಬಿಎಂಪಿ, ಬಿಡಿಎ ಅಧಿಕಾರಿಗಳಿಗೆ ಗೊತ್ತಾಗಲಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರು ಮಳೆ ಅವಾಂತರ: ರಾಜಕಾಲುವೆ ಅಭಿವೃದ್ಧಿ ಯೋಜನೆಯಡಿ ಬಹುಪಾಲು ಕಾಮಗಾರಿ ಅಪೂರ್ಣ!