ಬೆಂಗಳೂರು: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಈ ವರ್ಷದೊಳಗೆ 22 ಸಾವಿರ ರಸ್ತೆ ಗುಂಡಿ ಮುಚ್ಚುವ ಗುರಿ ಹೊಂದಲಾಗಿದೆ ಎಂದು ಬಿಬಿಎಂಪಿ ಹೇಳಿದೆ. ಬಿಬಿಎಂಪಿ ವರ್ಷಕ್ಕೆ ರಸ್ತೆ ಗುಂಡಿ ಮುಚ್ಚುವುದಕ್ಕೆ 30 ಕೋಟಿ ಖರ್ಚು ಮಾಡುತ್ತಿದೆ. ಅದರಂತೆ ಪ್ರತಿ ವರ್ಷ ಮೂವತ್ತು ಸಾವಿರ ರಸ್ತೆ ಗುಂಡಿ ಮುಚ್ಚಲಾಗುತ್ತಿದೆ. ಈ ವರ್ಷ 22 ಸಾವಿರ ಮುಚ್ಚುತ್ತಿದ್ದೇವೆ ಎಂದು ತುಷಾರ್ ಗಿರಿನಾಥ್ ಹೇಳಿದ್ದಾರೆ.
![BBMP target to close 22000 potholes close 22000 potholes within this year Bengaluru potholes issue woman died over potholes ವರ್ಷದೊಳಗೆ 22 ಸಾವಿರ ರಸ್ತೆ ಗುಂಡಿ ಮುಚ್ಚುವ ಗುರಿ ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆ ಮೃತ ಮಹಿಳಾ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿ](https://etvbharatimages.akamaized.net/etvbharat/prod-images/kn-bng-08-tushar-girinath-on-path-hole-fixing-7210969_19102022203923_1910f_1666192163_291.jpg)
ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆ ಮೃತಪಟ್ಟಿರುವ ಪ್ರಕರಣಕ್ಕೆ ಪ್ರತಿಕ್ರಿಯಿಸಿ ಸುಜಾತ ಥಿಯೇಟರ್ ರಸ್ತೆಯಲ್ಲಿ ಗುಂಡಿ ಇತ್ತು. ಅಧಿಕಾರಿಗಳು ಸದ್ಯಕ್ಕೆ ಗುಂಡಿ ಮುಚ್ಚಿದ್ದಾರೆ. ಮಹಿಳಾ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಇಲ್ಲ. ಪೊಲೀಸರ ವರದಿ ಆಧರಿಸಿ ಮುಂದಿನ ಕ್ರಮ ತೆಗೆದುಕೊಳ್ಳುತ್ತೇನೆ. ಪರಿಹಾರ ನೀಡುವ ಬಗ್ಗೆ ವರದಿ ಬಂದ ನಂತರ ಪರಿಶೀಲನೆ ಮಾಡುತ್ತೇವೆ ಎಂದು ಬಿಬಿಎಂಪಿ ಆಯುಕ್ತ ತುಷಾರ್ ಗಿರಿನಾಥ್ ಹೇಳಿದ್ದಾರೆ.
ಸಿಲಿಕಾನ್ ಸಿಟಿ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿಯಾಗುತ್ತಿದೆಯಾ? ಎನ್ನುವ ಅನುಮಾನ ಮೂಡುತ್ತಿದೆ. ಅತಿಯಾದ ಮಳೆ ಹಾಗೂ ಪಾಲಿಕೆಯ ಅಸಮರ್ಪಕ ರಸ್ತೆ ನಿರ್ವಹಣೆ ಕಾರಣದಿಂದಾಗಿ ರಾಜಧಾನಿ ರಸ್ತೆಗಳೆಲ್ಲ ಗುಂಡಿಮಯವಾಗಿದ್ದು, ಹೈಕೋರ್ಟ್ ಪದೇ ಪದೆ ಚಾಟಿ ಬೀಸಿದ್ದರೂ ಯಾವುದೇ ಉಪಯೋಗ ಆಗಿಲ್ಲ. ಕಳೆದ ಹತ್ತು ತಿಂಗಳಿನಲ್ಲಿ 20 ಸಾವಿರ ರಸ್ತೆ ಗುಂಡಿ ಮುಚ್ಚಿದ್ದರೂ ನಗರ ರಸ್ತೆಗಳು ಗುಂಡಿ ಮುಕ್ತವಾಗಿಲ್ಲ. ನಗರದ ರಸ್ತೆ ಗುಂಡಿಗಳು ಒಂದು ವರ್ಷದ ಅವಧಿಯಲ್ಲೇ 10 ಜನರನ್ನು ಬಲಿ ಪಡೆದುಕೊಂಡಿದೆ.
![BBMP target to close 22000 potholes close 22000 potholes within this year Bengaluru potholes issue woman died over potholes ವರ್ಷದೊಳಗೆ 22 ಸಾವಿರ ರಸ್ತೆ ಗುಂಡಿ ಮುಚ್ಚುವ ಗುರಿ ರಸ್ತೆ ಗುಂಡಿಯಿಂದ ಅಪಘಾತ ಸಂಭವಿಸಿ ಮಹಿಳೆ ಮೃತ ಮಹಿಳಾ ಸಾವಿನ ಬಗ್ಗೆ ಅಧಿಕೃತ ಮಾಹಿತಿ ಇಲ್ಲ ಬೆಂಗಳೂರು ಅಕ್ಷರಶಃ ರಸ್ತೆ ಗುಂಡಿಗಳ ರಾಜಧಾನಿ](https://etvbharatimages.akamaized.net/etvbharat/prod-images/kn-bng-08-tushar-girinath-on-path-hole-fixing-7210969_19102022203923_1910f_1666192163_285.jpg)
ಪ್ರತಿಬಾರಿ ರಸ್ತೆ ಗುಂಡಿಯಿಂದ ಅನಾಹುತಗಳು ಸಂಭವಿಸಿದಾಗ ಎಚ್ಚೆತ್ತುಕೊಳ್ಳುವ ಬಿಬಿಎಂಪಿ ತರಾತುರಿಯಲ್ಲಿ ಕೆಲ ರಸ್ತೆ ಗುಂಡಿಗೆ ಡಾಂಬಾರು ಹಾಕಿ ಕೈತೊಳೆದುಕೊಳ್ಳುವ ಪರಿಪಾಠ ನಡೆಸಿಕೊಂಡು ಬರುತ್ತಿದೆ. ಅದೇ ರೀತಿ ಎರಡು ದಿನಗಳ ಹಿಂದೆ ಸುಜಾತ ಚಿತ್ರಮಂದಿರದ ಸಮೀಪ ರಸ್ತೆಗುಂಡಿ ತಪ್ಪಿಸಲು ಹೋಗಿ ಸ್ಕೂಟಿಯಿಂದ ಆಯತಪ್ಪಿ ಬಿದ್ದ ಮಹಿಳೆ ಮೇಲೆ ಬಸ್ ಹರಿದು ಅವರು ಮೃತಪಟ್ಟ ನಂತರವೂ ಅಂತಹ ಚಿತ್ರಣ ಮತ್ತೊಮ್ಮೆ ಸೃಷ್ಟಿಯಾಗಿದೆ. ಪಾಲಿಕೆ ತನ್ನ ಹಳೆಯ ಚಾಳಿಯಂತೆ ರಾತ್ರೋರಾತ್ರಿ ಕೆಲ ಗುಂಡಿಗಳನ್ನು ಮುಚ್ಚಿ ಕೈ ತೊಳೆದುಕೊಂಡಿದೆ.
ಓದಿ: ಜನರ ಪ್ರಾಣ ಬಲಿ ಪಡೆಯುತ್ತಿರುವ ಬೆಂಗಳೂರಿನ ರಸ್ತೆ ಗುಂಡಿಗಳು... ವರ್ಷದಲ್ಲೇ 10 ಜನ ಸಾವು