ಬೆಂಗಳೂರು: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ಸಿಬ್ಬಂದಿ ಇಂದಿನಿಂದ ಸಾಮೂಹಿಕ ರಜೆ ಹಾಕಿ ಅನಿರ್ದಿಷ್ಟಾವಧಿ ಹೋರಾಟಕ್ಕೆ ಇಳಿದಿದ್ದಾರೆ. ಇದರಿಂದಾಗಿ ಬಿಬಿಎಂಪಿ ವ್ಯಾಪ್ತಿಯ ಪಾಲಿಕೆಯ ಎಲ್ಲ ಕಚೇರಿಗಳ ಕಾರ್ಯದಲ್ಲಿ ವ್ಯತ್ಯಯವುಂಟಾಗಿದ್ದು, ಮಹಾನಗರದ ಜನ ಪಾಲಿಕೆ ಕೆಲಸ ಮಾಡಿಸಿಕೊಳ್ಳಲು ಸಂಕಷ್ಟಕ್ಕೆ ಸಿಲುಕುವಂತಾಗಿದೆ.
ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ನೌಕರರಿಂದ ಪ್ರತಿಭಟನೆ ಆರಂಭಗೊಂಡಿದೆ. ರಾಜ್ಯ ಸರ್ಕಾರದ ವಿರುದ್ಧ ಪಾಲಿಕೆ ಸಿಬ್ಬಂದಿ ತಿರುಗಿ ಬಿದ್ದಿದ್ದಾರೆ. ಬಿಬಿಎಂಪಿಯ ಕಂದಾಯ, ಅರೋಗ್ಯ, ಶಿಕ್ಷಣ, ಮಾರುಕಟ್ಟೆ, ಯೋಜನೆ, ಅಡಳಿತ ವಿಭಾಗದ ಸೇರಿ ಎಲ್ಲ ವಿಭಾಗದ ಅಧಿಕಾರಿಗಳು ಮತ್ತು ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯ 198 ವಾರ್ಡ್ಗಳ ಸಿಬ್ಬಂದಿಯಿಂದ ಪ್ರತಿಭಟನೆ: ಬೆಂಗಳೂರು ಮಹಾನಗರದ 198 ವಾರ್ಡ್ಗಳ ಸಿಬ್ಬಂದಿ ಸಾಮೂಹಿಕ ರಜೆ ಹಾಕಿ 7 ಸಾವಿರ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದು, ಹಲವು ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಸಾಮೂಹಿಕ ಮುಷ್ಕರಕ್ಕೆ ಕರೆ ನೀಡಲಾಗಿದೆ. ಬಿಬಿಎಂಪಿ ಕೇಂದ್ರ ಕಚೇರಿಯ ಮುಂದೆ ಬೆಳಗ್ಗೆ 9 ಗಂಟೆಯಿಂದ ಪ್ರತಿಭಟನೆ ಆರಂಭಗೊಂಡಿದ್ದು, ಸಂಜೆ 5 ಗಂಟೆಯವರೆಗೆ ಪ್ರತಿಭಟನೆ ಮಾಡಲಾಗುತ್ತದೆ. ಪ್ರತಿ ದಿನವೂ ಅನಿರ್ದಿಷ್ಟಾವಧಿವರೆಗೂ ಈ ಹೋರಾಟಕ್ಕೆ ನಿರ್ಧರಿಸಲಾಗಿದೆ. ಎಲ್ಲ ಅಧಿಕಾರಿಗಳು ಹಾಗೂ ನೌಕರರು ಸಾಮೂಹಿಕ ರಜೆ ಹಾಕಿ 7 ಸಾವಿರ ನೌಕರರು ಪ್ರತಿಭಟನೆಯಲ್ಲಿ ಭಾಗಿಯಾಗುತ್ತಿದ್ದಾರೆ.
ಬೇಡಿಕೆಗಳ ಈಡೇರಿಕೆಗೆ ಆಗ್ರಹ.. ಪಾಲಿಕೆ ಅಧಿಕಾರಿಗಳು ಹಾಗೂ ನೌಕರರ ಬೇಡಿಕೆ ಈಡೇರಿಸುವ ಸಂಬಂಧ ಹಲವು ಬಾರಿ ಮುಖ್ಯಮಂತ್ರಿ ಹಾಗೂ ಮುಖ್ಯ ಆಯುಕ್ತರಿಗೆ ಮನವಿ ಮಾಡಿದರೂ ಪ್ರತಿಫಲ ಸಿಕ್ಕಿಲ್ಲ. ಹೀಗಾಗಿ, ದೊಡ್ಡ ಮಟ್ಟದಲ್ಲಿ ಪ್ರತಿಭಟನೆ ಮಾಡಲು ಮುಂದಾಗಿದ್ದೇವೆ. ಕೆಲಸ ಕಾರ್ಯಗಳನ್ನು ಬಂದ್ ಮಾಡಿ ಪಾಲಿಕೆ ಅಂಗಳದಲ್ಲಿ ಮುಷ್ಕರ ನಡೆಸುತ್ತಿದ್ದೇವೆ. ಪಾಲಿಕೆ ಸಿಬ್ಬಂದಿಗೆ ಚುನಾವಣೆ ಹಿನ್ನೆಲೆ ಒತ್ತಡ ಹೆಚ್ಚಾಗಿದೆ, ನೌಕರರು ಚುನಾವಣಾ ಕೆಲಸ ಕಾರ್ಯಗಳಲ್ಲಿ ನಿರತರಾಗಿರೋದರಿಂದ ಕಂದಾಯ ಇಲಾಖೆ ಕೆಲಸಗಳನ್ನು ಕಡಿಮೆ ಮಾಡಬೇಕು, ಕೆಳ ಹಂತದ ನೌಕರರ ಹುದ್ದೆಗಳು ಖಾಲಿ ಇದ್ದು, ಕೂಡಲೇ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಬೇಕು, ಇಂಜಿನಿಯರ್ ಹುದ್ದೆಗಳು ಖಾಲಿ ಆದರೆ 24 ಗಂಟೆಗಳಲ್ಲಿ ಭರ್ತಿ ಮಾಡಲಾಗುತ್ತದೆ, ಆದರೆ ಕೆಳ ಹಂತದ ಹುದ್ದೆಗಳನ್ನು ತುಂಬುವಲ್ಲಿ ಸರ್ಕಾರ ನಿರ್ಲಕ್ಷ್ಯ ವಹಿಸಿದ್ದು, ಇದನ್ನು ಸರಿಪಡಿಸಬೇಕು. ನೌಕರರ ಮೂಲಭೂತ ಸಮಸ್ಯೆಗಳನ್ನು ಬಗೆಹರಿಸಬೇಕು, ಪ್ರಮುಖವಾಗಿ ಆರೋಗ್ಯ ವಿಮೆ ಭರ್ತಿ ಮಾಡಬೇಕು, ಮಣಿಪಾಲ್ ಆಸ್ಪತ್ರೆಗಳಲ್ಲಿ ಬಿಬಿಎಂಪಿ ನೌಕರರಿಗೆ ವೈದ್ಯಕೀಯ ಸೌಲಭ್ಯ ನೀಡುತ್ತಿಲ್ಲ, ಮೂರು ತಿಂಗಳುಗಳಿಂದ ಕೋಟ್ಯಂತರ ರೂಪಾಯಿ ಆರೋಗ್ಯ ವಿಮೆ ಬಾಕಿ ಉಳಿಸಿಕೊಂಡಿದ್ದು, ಯಾವ ಆಸ್ಪತ್ರೆಗಳು ಬಿಬಿಎಂಪಿ ನೌಕರರಿಗೆ ಟ್ರೀಟ್ಮೆಂಟ್ ನೀಡಲು ಸಿದ್ಧವಿಲ್ಲ. ಹಾಗಾಗಿ ತಕ್ಷಣ ಈ ಸಮಸ್ಯೆ ಪರಿಹರಿಸಬೇಕು, ಎರಡು ಮೂರು ವರ್ಷಗಳಿಂದ ಕೆಂಪೇಗೌಡ ದಿನಾಚರಣೆ ಹಾಗೂ ಅಂಬೇಡ್ಕರ್ ದಿನಾಚರಣೆ ಮಾಡದಿರೋದು ಬೆಂಗಳೂರು ಪಾಲಿಕೆಗೆ ಅವಮಾನ, ತಕ್ಷಣವೇ ಮುಖ್ಯಮಂತ್ರಿಗಳು ಚುನಾವಣೆಗೆ ಮುನ್ನ ಕೆಂಪೇಗೌಡ ದಿನಾಚರಣೆ ನಡೆಸುವಂತೆ ಅಧಿಕಾರಿಗಳಿಗೆ ಆದೇಶಿಸಬೇಕು ಎಂದು ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದೇವೆ ಎಂದು ಮಹಾನಗರ ಪಾಲಿಕೆ ನೌಕರರ ಸಂಘದ ಅಧ್ಯಕ್ಷ ಅಮೃತ್ ರಾಜ್ ತಿಳಿಸಿದ್ದಾರೆ.
ಇದನ್ನೂ ಓದಿ.. ಖಜಾನೆ ಭರ್ತಿ ಮಾಡಲು ಮತ್ತೆ ಜಾಹೀರಾತಿನ ಮೊರೆ ಹೋದ ಬಿಬಿಎಂಪಿ